ನವದೆಹಲಿ: ಕಳೆದ ಹನ್ನೊಂದು ವರ್ಷದಿಂದ ದೇಶದ ಚುಕ್ಕಾಣಿ ಹಿಡಿಸಿರುವ ಮೋದಿ ಸರಕಾರವು ನಿವೃತ್ತ ಅಧಿಕಾರಿಗಳ ಆಶ್ರಯತಾಣವಾಗಿ ಮಾರ್ಪಟ್ಟಿದೆ.
ದೇಶದಲ್ಲಿ ನಿರುದ್ಯೂಗ ಪ್ರಮಾಣ ಗಗನಮುಖಿ ಆಗಿರುವ ಸಂದರ್ಭದಲ್ಲಿಯೇ ಇಡೀ ಸರಕಾರವೇ ನಿವೃತ್ತರ ಮೇಲೆ ಅವಲಂಬಿಸಿರುವುದು ವಿಪರ‍್ಯಾಸವೇ ಸರಿ ಎನ್ನಬಹುದು.
ಕಳೆದ ತಿಂಗಳು ನರೇಂದ್ರ ಮೋದಿ ಸರ್ಕಾರವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮಾಜಿ ಗವರ್ನರ್ ಶಕ್ತಿಕಾಂತ ದಾಸ್ ಅವರನ್ನು ಪ್ರಧಾನಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿತು.
ದಾಸ್ 2018 ರಿಂದ 2024 ರವರೆಗೆ ಆರು ವರ್ಷಗಳ ಕಾಲ ಆರ್ಬಿಐ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. ಈಗ, ಅವರು ನರೇಂದ್ರ ಮೋದಿಯವರ ಅಧಿಕಾರಾವಧಿ 2029ರಲ್ಲಿ ಮುಗಿಯುವವರೆಗೆ ಪ್ರಧಾನ ಮಂತ್ರಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲು ಸಜ್ಜಾಗಿದ್ದಾರೆ. ದಾಸ್ ನೇಮಕವು ಮೋದಿ ಆಡಳಿತದಲ್ಲಿ ದೀರ್ಘಕಾಲದ ಪ್ರವೃತ್ತಿಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.
ಪ್ರಮುಖ ನೀತಿ ಮತ್ತು ಆಡಳಿತ ಕ್ಷೇತ್ರಗಳನ್ನು ಮುನ್ನಡೆಸಲು ನಿವೃತ್ತ ಅಧಿಕಾರಿಗಳ ಗುಂಪನ್ನು ಮೋದಿ ಸರಕಾರವು ಅವಲಂಬಿಸಿದೆ ಎನ್ನುವುದು ಇದರಿಂದ ಸ್ಪಷ್ಟವಾಗಿದೆ.
ಸೈದ್ಧಾಂತಿಕವಾಗಿ ಮಹತ್ವದ ಸರ್ಕಾರಿ ಯೋಜನೆಗಳು (ಧಾರ್ಮಿಕ-ಸಾಂಸ್ಕೃತಿಕ ) ರಾಷ್ಟ್ರೀಯ ಭದ್ರತೆ, ಮತ್ತು ರಾಜ್ಯಪಾಲರು, ಸಲಹೆಗಾರರು ಅಥವಾ ಮಂತ್ರಿಗಳಾಗಿ ರಾಜ್ಯಗಳಲ್ಲಿ ಕೇಂದ್ರದ ಕಣ್ಣು ಮತ್ತು ಕಿವಿಗಳಾಗಿ ನಿಯೋಜನೆಯೂ ಸೇರಿದೆ.
ಮೋದಿ ಸರ್ಕಾರದ ಮೊದಲ ಅವಧಿಯಿಂದಲೂ ಈ ಪ್ರವೃತ್ತಿ ಸ್ಪಷ್ಟವಾಗಿದ್ದರೂ, ವರ್ಷಗಳಲ್ಲಿ ಹೆಚ್ಚು ಪ್ರಮುಖವಾಗಿ ಬೆಳೆದಿದೆ.
ಮೇ ತಿಂಗಳಲ್ಲಿ ಸರ್ಕಾರವು ಅಧಿಕಾರದಲ್ಲಿ 11 ವರ್ಷಗಳನ್ನು ಪೂರ್ಣಗೊಳಿಸಲಿದೆ. ಈ ಸಮಯದಲ್ಲಿ, ಕೆಲವು ಮುಖಗಳು ಬಂದು ಹೋಗಿದ್ದರೂ, ಹಲವಾರು ಪ್ರಮುಖ ಅಧಿಕಾರಿಗಳು ಮೊದಲ ಅವಧಿಯಿಂದ ವಿವಿಧ ಸ್ಥಾನಗಳಲ್ಲಿ ಮುಂದುವರಿದಿದ್ದಾರೆ.
ಪ್ರಧಾನ ಮಂತ್ರಿಯವರ ಆಡಳಿತ ಶೈಲಿ ಮತ್ತು ಸೈದ್ಧಾಂತಿಕ ದೃಷ್ಟಿಕೋನವನ್ನು ಅನುಸರಿಸುವವರು ಹಾಗೂ ಗುಜರಾತ್ ಮತ್ತು ನವದೆಹಲಿ ಎರಡರಲ್ಲೂ ವರ್ಷಗಳಿಂದ ಪ್ರಧಾನಿಯವರ ವಿಶ್ವಾಸವನ್ನು ಗಳಿಸಿದ ಅಧಿಕಾರಿಗಳ ಗುಂಪು ಸದ್ಯ ಆಡಳಿತವನ್ನು ಕಬ್ಜಾ ಮಾಡಿದೆ ಎನ್ನಲಾಗಿದೆ.
ಈ ಪ್ರವೃತ್ತಿಯು ಪ್ರಧಾನಿಗೆ ತಮ್ಮ ಮಂತ್ರಿಗಳ ಮೇಲೆ ನಂಬಿಕೆ ಅಥವಾ ವಿಶ್ವಾಸದ ಕೊರತೆಗೆ ಸಾಕ್ಷಿ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಬಿಜೆಪಿಯಂತಹ ಸಿದ್ಧಾಂತಕ್ಕೆ ಬದ್ಧವಾಗಿರುವ ಸರ್ಕಾರಕ್ಕೆ ಸುಧಾರಣೆಯನ್ನು ತರಲು ಸಿದ್ಧರಿರುವ ಅಧಿಕಾರಶಾಹಿಯ ಅಗತ್ಯವಿದೆ ಎಂಬ ಅಭಿಪ್ರಾಯವನ್ನು ಇದು ಒಳಗೊಂಡಿದೆ.
ಕೊನೆಯದಾಗಿ, ಈ ಪ್ರವೃತ್ತಿಯು ಆಡಳಿತಾತ್ಮಕ ಮತ್ತು ಅಧಿಕಾರಶಾಹಿ ನಿಯಮಗಳ ಮೂಲ ಆಶಯವನ್ನೇ ಬುಡಮೇಲು ಮಾಡುತ್ತದೆ.
ಸರ್ಕಾರಿ ನೌಕರರಿಗೆ ನಿರ್ದಿಷ್ಟ ಅಧಿಕಾರಾವಧಿಯನ್ನು ನಿಗದಿಪಡಿಸಲಾಗಿದ್ದು, ಅಪರೂಪದ ಸಂದರ್ಭಗಳಲ್ಲಿ ಮಾತ್ರ ಅವರ ಮರು ನೇಮಕಕ್ಕೆ ನಿಯಮಾವಳಿ ಅವಕಾಶ ನೀಡುತ್ತದೆ.
ಆದಾಗ್ಯೂ, ಈ ಸರ್ಕಾರದ ಹನ್ನೊಂದು ವರ್ಷಗಳ ನಂತರ, ಮೋದಿ ಆಡಳಿತದಲ್ಲಿ, ನಿವೃತ್ತಿಯ ನಂತರ ಆಯ್ದ ಅಧಿಕಾರಿಗಳಿಗೆ ವಿಸ್ತರಣೆ ಮತ್ತು ಮರು ನೇಮಕವು ಬರಿಯ ವಿಪರ್ಯಾಸವಲ್ಲ ಎಂಬುದು ಸ್ಪಷ್ಟವಾಗಿದೆ.