Menu

ದ್ವೇಷದ ರಾಜಕಾರಣ ಕುಮಾರಸ್ವಾಮಿ ಡಿಎನ್ ಎಯಲ್ಲಿದೆ: ಡಿಕೆ ಶಿವಕುಮಾರ್

dk shivakumar

ಬೆಂಗಳೂರು: ದ್ವೇಷ ರಾಜಕಾರಣ ಎಂಬುದು ಅವರ (ಕೇಂದ್ರ ಸಚಿವ ಕುಮಾರಸ್ವಾಮಿ) ಡಿಎನ್ ಎ ಯಲ್ಲಿದೆ. ಕೇತಗಾನಹಳ್ಳಿ ಜಮೀನು ವಿಚಾರವಾಗಿ ಕೇಸ್ ದಾಖಲಿಸಿರುವುದು ಎಸ್.ಆರ್ ಹಿರೇಮಠ್. ಕೋರ್ಟ್ ಆದೇಶದಂತೆ ಅಧಿಕಾರಿಗಳು ಕೆಲಸ ಮಾಡಿದ್ದು, ನಾವು ಹೇಗೆ ದ್ವೇಷ ರಾಜಕಾರಣ ಮಾಡಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಗುರುವಾರ ಪ್ರತಿಕ್ರಿಯಿಸಿದ  ಅವರು, ಕೇಂದ್ರ ಸಚಿವ ಕುಮಾರಸ್ವಾಮಿ ಕೇತಗಾನಹಳ್ಳಿ ಜಮೀನು ಒತ್ತುವರಿ ತೆರವು ದ್ವೇಷದ ರಾಜಕಾರಣ ಎಂಬ ಆರೋಪದ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ನಾವು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇವಾ? ಈ ವಿಚಾರವಾಗಿ ಎಸ್.ಆರ್ ಹಿರೇಮಠ್ ಅವರು ಪ್ರಕರಣ ದಾಖಲಿಸಿದ್ದಾರೆ. ನನ್ನ ಮೇಲೂ ಹಿರೇಮಠ್ ಅವರು ಅನೇಕ ಕೇಸ್ ದಾಖಲಿಸಿದ್ದರು. ಅವರ ಅರ್ಜಿ ಮೇರೆಗೆ ನ್ಯಾಯಾಲಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಅಧಿಕಾರಿಗಳು ಕೋರ್ಟ್ ಆದೇಶದಂತೆ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ದ್ವೇಷದ ರಾಜಕಾರಣ ಏನಿದೆ?” ಎಂದು ತಿಳಿಸಿದರು.

ಕುಮಾರಸ್ವಾಮಿ ಮರ್ಯಾದೆಯಾಗಿ ಇದ್ದರೆ ಕ್ಷೇಮ

ನನ್ನ ವಿರುದ್ಧ ಮೈಸೂರಿನಲ್ಲಿ ಅವರು (ಕುಮಾರಸ್ವಾಮಿ) ಏನೆಲ್ಲಾ ಮಾತನಾಡಿದರು, ಅವರ ತಂದೆ ನನ್ನ ವಿರುದ್ಧ ಏನೆಲ್ಲಾ ಮಾತನಾಡಿದ್ದಾರೆ. ನನ್ನ ಮೇಲೆ, ನನ್ನ ಪತ್ನಿ, ನನ್ನ ತಂಗಿ ಹಾಗೂ ಸಹೋದರನ ಮೇಲೆ ಏನೆಲ್ಲಾ ಕೇಸ್ ಹಾಕಿದ್ದರು. ನನಗೂ ಬಳ್ಳಾರಿಗೂ ಸಂಬಂಧವಿಲ್ಲ. ಆದರೂ ಅದಿರು ಕಳ್ಳತನ ಮಾಡಿದ್ದೇನೆ ಎಂದು ಆರೋಪ ಮಾಡಿರಲಿಲ್ಲವೇ. ನನ್ನ ಮೇಲೆ ತನಿಖೆ ಮಾಡಿಸಿಲ್ಲವೇ? ಅವರ ಜತೆ ಸರ್ಕಾರ ಮಾಡಿದ್ದೇವೆ ಎಂದು ನಾವು ಸುಮ್ಮನೆ ಇದ್ದೇವೆ. ಅವರು ಮರ್ಯಾದೆಯಾಗಿ ಇದ್ದರೆ ಕ್ಷೇಮ ಎಂದು ಹರಿಹಾಯ್ದರು.

ನಮ್ಮ ಜಿಲ್ಲೆಯ ಜನರಿಗೆ ಒಳ್ಳೆಯದು ಬಯಸೋದು ತಪ್ಪಾ?

ರಾಮನಗರ ಜಿಲ್ಲೆ ಮರುನಾಮಕರಣ ಮಾಡಬಾರದು ಎಂದು ಕೇಂದ್ರಕ್ಕೆ ಒತ್ತಡ ಹಾಕಿದ್ದಾರೆ. ನಮಗೂ ಕಾನೂನು ಗೊತ್ತಿದೆ. ಸಂವಿಧಾನದಲ್ಲಿ ನಾವು ಯಾರನ್ನೂ ಕೇಳುವ ಅಗತ್ಯವಿಲ್ಲ. ನಾವು ಮಾಹಿತಿ ನೀಡಬೇಕು ಎಂದು ಹೇಳಿ ಪ್ರಸ್ತಾವನೆ ಕಳುಹಿಸಿದ್ದೇವೆ. ದೆಹಲಿಯಲ್ಲಿರುವ ಕೆಲ ಮಂತ್ರಿಗಳು ಈ ವಿಚಾರದಲ್ಲಿ ಷಡ್ಯಂತ್ರ ನಡೆಸಿದ್ದಾರೆ. ನಾವು ಅದಕ್ಕೆಲ್ಲ ಜಗ್ಗುವುದಿಲ್ಲ. ಜಿಲ್ಲೆ ಮರುನಾಮಕರಣ ಮಾಡುವುದು ಹೇಗೆ, ಜಿಲ್ಲೆಯನ್ನು ಹೇಗೆ ಬದಲಾಯಿಸಬೇಕು ಎಂದು ಗೊತ್ತಿದೆ, ನಾವು ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮಾಡುತ್ತೇವೆ ಎಂದು ತಿಳಿಸಿದರು.

ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಈ ಮರುನಾಮಕರಣ ಮಾಡಲಾಗುತ್ತಿದೆ ಎಂಬ ಟೀಕೆ ಬಗ್ಗೆ ಕೇಳಿದಾಗ, “ಹೌದೌದು, ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಮಾಡುತ್ತಿದ್ದೇವೆ. ನಮ್ಮ ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ ಜನರಿಗೆ ಅನುಕೂಲ ಆಗಬಾರದೆ? ನೀವು ಅಲ್ಲಿಂದ ಇಲ್ಲಿಗೆ ಯಾಕೆ ಬಂದಿರಿ? ನಮ್ಮ ಜನ ಬೆಂಗಳೂರು ಜಿಲ್ಲೆಯವರು. ಅವರು ಬದುಕಬೇಕು. ನಮ್ಮ ಜಿಲ್ಲೆಯ ಜನರ ಆಸ್ತಿ ಹೋಗಿದೆ. ಅವರಿಗೆ ಒಳ್ಳೆಯದಾಗಲಿ ಎಂಬ ಆಸೆ ನಮ್ಮದು. ಅದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.

ಶಂಕುಸ್ಥಾಪನೆಗೆ ಆಹ್ವಾನ

ಹೈಕಮಾಂಡ್ ನಾಯಕರ ಭೇಟಿ ಬಗ್ಗೆ ಕೇಳಿದಾಗ, “ಮಹಾತ್ಮಾ ಗಾಂಧೀಜಿಯವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ನೂರು ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 100 ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಮುಂದಾಗಿದ್ದು, ಇದರ ಶಂಕುಸ್ಥಾಪನೆಗಾಗಿ ದಿನಾಂಕ ನೀಡುವಂತೆ ನಮ್ಮ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಆಹ್ವಾನ ನೀಡಿದ್ದೇನೆ. ರೇಸ್ ಕೋರ್ಸ್ ರಸ್ತೆಯಲ್ಲಿನ ಕಚೇರಿ ಸೇರಿದಂತೆ ಬೆಂಗಳೂರಿನಲ್ಲಿ ಒಟ್ಟು 3 ಕಡೆ ಶಂಕುಸ್ಥಾಪನೆ ನೆರವೇರಲಿದೆ. ಬೆಂಗಳೂರಿನ ಕಚೇರಿಗಳನ್ನು ಖುದ್ದಾಗಿ ಶಂಕುಸ್ಥಾಪನೆ ಮಾಡಲಾಗುವುದು, ಉಳಿದ ಕಡೆಗಳ ಕಚೇರಿಯನ್ನು ವರ್ಚುವಲ್ ಮೂಲಕ ಶಂಕುಸ್ಥಾಪನೆ ಮಾಡಲಾಗುವುದು. ಸಂಸತ್ ಅಧಿವೇಶನ ಮುಕ್ತಾಯದ ನಂತರ ದಿನಾಂಕ ನೀಡುವುದಾಗಿ ತಿಳಿಸಿದ್ದಾರೆ” ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *