Menu

ಕಾವೇರಿ ಆರತಿ ರಾಜಕೀಯ ಕಾರ್ಯಕ್ರಮವಲ್ಲ: ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ಬೇಸಿಗೆ ಸಮಯದಲ್ಲಿ ನೀರಿನ ಸಂರಕ್ಷಣೆ ಅಭಿಯಾನದ ಜತೆಗೆ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ವಿಧಾನಸೌಧದ ಆವರಣದಲ್ಲಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಗುರುವಾರ ಈ ವಿಚಾರ ತಿಳಿಸಿದ ಅವರು, ಇದು ಸರ್ಕಾರದ ಕಾರ್ಯಕ್ರಮವೇ ಹೊರತು ರಾಜಕೀಯ ಕಾರ್ಯಕ್ರಮವಲ್ಲ. ನ್ಯಾಯಾಲಯದಲ್ಲಿ ಆಕ್ಷೇಪ ಸಲ್ಲಿಸಲಾಗಿದ್ದು ನಮ್ಮ ವಿಚಾರವನ್ನು ನ್ಯಾಯಾಲಯದ ಮುಂದೆ ಪ್ರಸ್ತಾಪಿಸುತ್ತೇವೆ ಎಂದು ತಿಳಿಸಿದರು.

ಮಾ.22ರಂದು ವಿಶ್ವ ಜಲ ದಿನ. ನಾವು ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿದ್ದೇವೆ. ಬೆಂಗಳೂರಿಗೆ ಕುಡಿಯುವ ನೀರು ಒದಗಿಸಲು 6ನೇ ಹಂತದ ಯೋಜನೆಗೆ ಡಿಪಿಆರ್ ಸಿದ್ಧಪಡಿಸಲಾಗಿದೆ. ನೀರಿನ ಸದ್ಬಳಕೆ ಹಾಗೂ ಸಂರಕ್ಷಣೆಗೆ ಜನರಲ್ಲಿ ಜಾಗೃತಿ ಮೂಡಿಸಲು ಒಂದು ತಿಂಗಳ ಕಾಲ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅನೇಕರು ಕಾರು, ವಾಹನ ತೊಳೆಯಲು, ಗಿಡಗಳಿಗೆ ಕುಡಿಯುವ ನೀರನ್ನು ಬಳಸುತ್ತಿದ್ದಾರೆ. ಹೀಗೆ ಸುಮಾರು 20% ಕುಡಿಯುವ ನೀರು ವ್ಯರ್ಥವಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪ್ರತಿಜ್ಞಾ ಸ್ವೀಕಾರ ಮಾಡಿಸಲಾಗುವುದು. ಇನ್ನು ಕೆಆರ್ ಎಸ್ ನಲ್ಲಿ ಕಾವೇರಿ ಆರತಿ ಮಾಡಲು ನಾನು ಈ ಹಿಂದೆಯೇ ಘೋಷಣೆ ಮಾಡಿದ್ದೆ. ಅದರ ಭಾಗವಾಗಿ ನಾಳೆ ಸ್ಯಾಂಕಿ ಕೆರೆಯಲ್ಲಿ ಪೂಜೆ ನೆರವೇರಿಸಲಾಗುವುದು ಎಂದು ಹೇಳಿದರು.

ಅಲ್ಲಿ ಈ ಹಿಂದೆ ಕನ್ನಡ ರಾಜ್ಯೋತ್ಸವ, ಶಾಸಕರ ಹುಟ್ಟುಹಬ್ಬ ಕಾರ್ಯಕ್ರಮಗಳು ನಡೆದಿವೆ. ನಾನು ಐದಾರು ಕೆರೆ ಪರಿಶೀಲಿಸಿ, ಕೊನೆಗೆ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ ಮಾಡಲು ತೀರ್ಮಾನಿಸಿದ್ದೇವೆ. ಈ ವಿಚಾರವಾಗಿ ಸ್ಥಳೀಯ ಬಿಜೆಪಿ ನಾಯಕರು ಕೋರ್ಟ್ ಮೆಟ್ಟಿಲೇರಿದ್ದು, ನಾವು ಕೂಡ ನಮ್ಮ ವಿಚಾರವನ್ನು ನ್ಯಾಯಾಲಯಕ್ಕೆ ತಿಳಿಸುತ್ತೇವೆ. ನಾವು ಯಾರಿಗೂ ಹಾನಿ ಮಾಡದೆ ಕಾರ್ಯಕ್ರಮ ಮಾಡುತ್ತೇವೆ. ಇದು ರಾಜಕೀಯ ಕಾರ್ಯಕ್ರಮವಲ್ಲ, ಸರ್ಕಾರಿ ಕಾರ್ಯಕ್ರಮ. ನಾಳೆ ನಡೆಯಲಿರುವ ಕಾವೇರಿ ಆರತಿ ಪೂಜಾ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ಎಲ್ಲಾ ಸಾರ್ವಜನಿಕರು ಅಭಿಯಾನದಲ್ಲಿ ಭಾಗವಹಿಸಿ, ನೀರಿನ ಉಳಿತಾಯ ಮಾಡಬೇಕು” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *