ಸೈಬರ್ ವಂಚಕರು ಮುಂಬೈನಲ್ಲಿ ವೃದ್ಧ ಮಹಿಳೆಯನ್ನು 2 ತಿಂಗಳು ಡಿಜಿಟಲ್ ಅರೆಸ್ಟ್ ಮಾಡಿ ಅವರ ಬ್ಯಾಂಕ್ ಖಾತೆಯಿಂದ 20.25 ಕೋಟಿ ರೂ. ದೋಚಿಸಿದ್ದಾರೆ. ಈ ಸಮಯದಲ್ಲಿ ಆಕೆಯನ್ನು ಮತ್ತು ಮಕ್ಕಳನ್ನು ಬಂಧಿಸುವುದಾಗಿ ವಂಚಕರು ಬೆದರಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವೃದ್ಧೆಗೆ ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿ ತನ್ನನ್ನು ಸಂದೀಪ್ ರಾವ್ ಎಂದು ಪರಿಚಯಿಸಿಕೊಂಡು ಸಿಬಿಐ ಅಧಿಕಾರಿ ಎಂದಿದ್ದಾನೆ. ಸಂತ್ರಸ್ತೆಯ ಹೆಸರು ಮತ್ತು ದಾಖಲೆಗಳನ್ನು ಬಳಸಿಕೊಂಡು ಬ್ಯಾಂಕ್ ಖಾತೆ ತೆರೆದು ಆ ಮೂಲಕ ಹಣವನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಮತ್ತು ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರಿಗೆ ಹಣವನ್ನು ಕಳುಹಿಸಲಾಗಿದೆ.
ವೃದ್ಧೆ ಕೋಣೆಯಲ್ಲಿಯೇ ಇರುತ್ತಿದ್ದರು, ಕೆಲವೊಮ್ಮೆ ಕೂಗುತ್ತಿದ್ದರು ಮತ್ತು ಊಟ ಮಾಡಲು ಮಾತ್ರ ಕೋಣೆಯಿಂದ ಹೊರಗೆ ಬರುತ್ತಿದ್ದರು ಎಂಬುದನ್ನು ಗಮನಿಸಿದ ಮನೆಗೆಲಸದ ಮಹಿಳೆ ಈ ವಿಚಾರವನ್ನು ಸಂತ್ರಸ್ತೆಯ ಮಗಳಿಗೆ ತಿಳಿಸಿದ ಬಳಿಕ ಪ್ರಕರಣ ಬಯಲಾಗಿದೆ.
ಕರೆ ಮಾಡಿದ್ದ ನಕಲಿ ಸಿಬಿಐ ಅಧಿಕಾರಿ ಸಂತ್ರಸ್ತೆಯಲ್ಲಿ ಈ ಪ್ರಕರಣವನ್ನು ಸಿಬಿಐ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ ಮತ್ತು ದೂರು ದಾಖಲಿಸ ಲಾಗಿದೆ ಎಂದು ಹೇಳಿದ್ದಲ್ಲದೆ ಪ್ರಕರಣದಲ್ಲಿ ಆಕೆಯ ಮಕ್ಕಳನ್ನು ಬಂಧಿಸಬಹುದು ಮತ್ತು ಆಕೆಯ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗುವುದು ಎಂದೂ ಬೆದರಿಸಿದ್ದ. ಆರೋಪಿಯು ವೃದ್ಧೆಗೆ ತನ್ನ ಬಳಿ ಬಂಧನ ವಾರಂಟ್ ಇದೆ ಎಂದು ಬೆದರಿಕೆ ಹಾಕಿದ್ದಾನೆ. ತನಿಖೆಗೆ ಸಹಕರಿಸದಿದ್ದರೆ, ಪೊಲೀಸರು ಮನೆಗೆ ಬರುತ್ತಾರೆ ಎಂದು ಹೆದರಿಸಿದ್ದ.
2 ತಿಂಗಳು ವೃದ್ಧೆಯನ್ನು ಡಿಜಿಟಲ್ ರೂಪದಲ್ಲಿ ಬಂಧಿಸಲಾಗಿತ್ತು, ಸಂಬಂಧಿಕರೊಂದಿಗೆ ಮಾತನಾಡದಂತೆ ಸೂಚಿಸಲಾಯಿತು. 2-3 ಗಂಟೆಗಳಿಗೊಮ್ಮೆ ನಕಲಿ ಸಿಬಿಐ ಅಧಿಕಾರಿ ಮತ್ತು ರಾಜೀವ್ ರಂಜನ್ ಎಂಬ ವ್ಯಕ್ತಿ ಕರೆ ಮಾಡಿ ಇರುವ ಸ್ಥಳವನ್ನು ಕೇಳುತ್ತಿದ್ದರು. ಈ ಪ್ರಕರಣದಿಂದ ಹೆಸರನ್ನು ತೆಗೆದುಹಾಕಲು ಬಯಸಿದರೆ ಅದಕ್ಕೆ ಒಂದು ಪ್ರಕ್ರಿಯೆ ಇದೆ ಎಂದು ತಿಳಿಸಿದ್ದರು. ಅದಕ್ಕಾಗಿ ಆಕೆ ತನ್ನ ಬ್ಯಾಂಕ್ ಖಾತೆಯಲ್ಲಿರುವ ಎಲ್ಲಾ ಹಣವನ್ನು ನ್ಯಾಯಾಲಯದ ಖಾತೆಗೆ ವರ್ಗಾಯಿಸ ಬೇಕಾಗುತ್ತದೆ ಎಂದು ಹೇಳಿದ್ದರು. ತನಿಖೆ ಪೂರ್ಣಗೊಂಡ ನಂತರ ಆಕೆಯ ಹಣವನ್ನು ಹಿಂತಿರುಗಿಸಲಾಗುವುದು ಎಂದು ಭರವಸೆ ನೀಡಿದ್ದರು. ಸಂತ್ರಸ್ತೆ ಖದೀಮರು ಹೇಳಿದಂತೆ ಮಾಡಿದ್ದರು. ಆದರೆ ಬಳಿಕ ಆಕೆಯ ಹಣ ವಾಪಾಸ್ ಬಂದಿರಲಿಲ್ಲ. ಹೀಗಾಗಿ ಎಫ್ಐಆರ್ ದಾಖಲಿಸಿದ್ದರು.