ಪ್ರತಿ ಯೂನಿಟ್‌ಗೆ 36 ಪೈಸೆಯಂತೆ ದರವನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಏರಿಕೆ ಮಾಡಿದೆ. ಕೆಪಿಟಿಸಿಎಲ್ ಪ್ರಸ್ತಾವನೆಗೆ ಕೆಇಆರ್‌ಸಿ ಸಮ್ಮತಿಸಿದ್ದು, ಇದೇ ಏಪ್ರಿಲ್‌ನಿಂದ ಇದು ಜಾರಿಯಾಗಲಿದೆ.
ಎಸ್ಕಾಂಗಳ ಪಿಂಚಣಿ ಹಣ ಹೊಂದಿಸಲು ಜನರ ಜೇಬಿಗೆ ಸರ್ಕಾರ ಕತ್ತರಿ ಹಾಕಿದೆ. ಎಸ್ಕಾಂಗಳ ಪಿಂಚಣಿ ದುಡ್ಡನ್ನು ಗ್ರಾಹಕರಿಗೆ ವರ್ಗಾಯಿಸಿ ಶಾಕ್ ನೀಡಿದ್ದು ಸರಿಯೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಇಂಧನ ಪೂರೈಕೆ ಕಂಪನಿಗಳಿಗೆ (ಎಸ್ಕಾಂಗಳು) ಕೆಇಆರ್‌ಸಿ ಗ್ರಾಹಕರಿಂದ ಸರ್ಕಾರದ ಪಿಂಚಣಿ ಮತ್ತು ಗ್ರಾಚ್ಯುಟಿ ಕೊಡುಗೆಗಳ ಪಾಲನ್ನು ವಸೂಲಿ ಮಾಡಲು ಅವಕಾಶ ನೀಡಿ ಆದೇಶ ಪ್ರಕಟಿಸಿದೆ. 2026-27 ಮತ್ತು 2027-28ರ ಆರ್ಥಿಕ ವರ್ಷಕ್ಕೂ ಪಿಂಚಣಿ ಮತ್ತು ಗ್ರಾಚ್ಯುಟಿ ಕೊಡುಗೆಗಳನ್ನು ಪರಿಷ್ಕರಣೆ ಮಾಡಲಾ ಗಿದೆ. ಮುಂದಿನ ವರ್ಷಗಳಿಗೆ ಗ್ರಾಹಕರು ಕ್ರಮವಾಗಿ 35 ಪೈಸೆ ಮತ್ತು 34 ಪೈಸೆ ಪಾವತಿಸಬೇಕಾಗುತ್ತದೆ. ನೀರಾವರಿ ಪಂಪ್ ಸೆಟ್, ವಿದ್ಯುತ್ ಬಳಕೆದಾರರು ಸೇರಿ ಎಲ್ಲ ಗ್ರಾಹಕರಿಂದಲೂ ವಸೂಲಿಗೆ ನಿರ್ಧಾರ ಮಾಡಲಾಗಿದೆ.
ಕೆಪಿಟಿಸಿಎಲ್ ಮತ್ತು ಎಸ್ಕಾಂಗಳ ಸಿಬ್ಬಂದಿ ಪಿಂಚಣಿ ಗ್ರಾಚ್ಯುಟಿಯಲ್ಲಿ ಸರ್ಕಾರದ ಪಾಲನ್ನು ಎಸ್ಕಾಂಗಳು ಬಯಸಿದರೆ ಗ್ರಾಹಕರಿಗೆ ವರ್ಗಾಯಿಸಬಹುದು ಎಂದು 2022 ರಲ್ಲಿ ಕರ್ನಾಟಕ ವಿದ್ಯುತ್ ಸುಧಾರಣಾ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿತ್ತು. ಈ ತಿದ್ದುಪಡಿಗೆ ಆಗಲೇ ವಿರೋಧ ವ್ಯಕ್ತವಾಗಿತ್ತು. ಈಗ ಸರ್ಕಾರ ಯಥಾವತ್ ಆಗಿ ಜಾರಿ ಮಾಡಲು ಮುಂದಾಗಿದೆ. ಪಿಂಚಣಿ ಗ್ರಾಚ್ಯುಟಿ ನೆಪದಲ್ಲಿ 36 ಪೈಸೆ ಹೆಚ್ಚಳ ಮಾಡಿದ್ದರಿಂದ ಒಂದು ಮನೆಗೆ ಅಂದಾಜು 90 ರೂ. ವಿದ್ಯುತ್ ಬಿಲ್ ಹೆಚ್ಚಳವಾಗುವ ಸಾಧ್ಯತೆಯಿದೆ.