Menu

ಕುರಿ ಸಾಕಣೆದಾರರ ಮೇಲೆ ಹಲ್ಲೆ ತಡೆಗೆ ವಿಶೇಷ ಕಾನೂನು ಚಿಂತನೆ

ಕುರಿ ಸಾಕಣೆದಾರರ  ಮೇಲೆ ಹಲ್ಲೆ, ದೌರ್ಜನ್ಯ ನಡೆಸುವವರನ್ನು ಕಠಿಣ ಶಿಕ್ಷಗೆ ಗುರಿಪಡಿಸಲು ವಿಶೇಷ ಕಾನೂನು ತರಲು ಚಿಂತನೆ ನಡೆಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ವಿಧಾನಪರಿಷತ್ ಗೆ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ‌ಬಿಜೆಪಿ ಸದಸ್ಯ ಚಿದಾನಂದ್ ಎಂ.ಗೌಡ ಪ್ರಶ್ನೆಗೆ ಪಶುಸಂಗೋಪನೆ ಸಚಿವರ ಪರವಾಗಿ ಉತ್ತರ ನೀಡಿದ ಸಚಿವರು,  ಕುರಿಗಾಹಿಗಳ ಮೇಲೆ ಹಲ್ಲೆ ನಡೆದರೆ,ಆತ್ಯಾಚಾರದಂತೆ ಶಿಕ್ಷಿಸುವ ಕಾನೂನು ಮಾಡುವ ಚಿಂತನೆ ಸರ್ಕಾರದ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಕಾನೂನು ಜಾರಿಗೆ ತರಲಾಗುವುದು ಎಂದರು.

ಕುರಿ ಮತ್ತು ಉಣ್ಣೆ ಆಭಿವೃದ್ದಿ ನಿಗಮ ವತಿಯಿಂದ ರಾಜ್ಯದಲ್ಲಿ ಮೊದಲ ಬಾರಿಗೆ ತುಮಕೂರಿನ ಶಿರಾದಲ್ಲಿ ಸುಸಜ್ಜಿತ ಆತ್ಯಾಧುನಿಕ ವಧಾಗಾರ ಕಾಮಗಾರಿ ಪೂರ್ಣಗೊಂಡಿದ್ದು ಶೀಘ್ರದಲ್ಲಿ ಮುಖ್ಯಮಂತ್ರಿಯವರಿಂದ ಉದ್ಘಾಟನೆ ಮಾಡಿಸಲಾಗುವುದು.  ಶಿರಾದ ತಾಲೂಕಿನ ಚೀಲನಹಳ್ಳಿ ಬಳಿ 20 ಎಕರೆಯಲ್ಲಿ ನಿರ್ಮಾಣಗೊಂಡಿರುವ ಆಧುನಿಕ ಸಂಸ್ಕರಣಾ ಕೇಂದ್ರ (ವಧಾಗಾರ) ಶೀಘ್ರದಲ್ಲಿ ಕಾರ್ಯಾರಂಭಗೊಳ್ಳಲಿದೆ ಎಂದು ಹೇಳಿದರು.

ವಧಾಗಾರ ನಿರ್ಮಾಣಕ್ಕಾಗಿ ಮೀಸಲಿರಿಸಿದ್ದ ಅಂದಾಜು‌ ಮೊತ್ತದಲ್ಲಿ 44.63 ಕೋಟಿ ಪೈಕಿ 26,56 ಕೋಟಿ ರೂ.ಸಿವಿಲ್ ಕಾಮಗಾರಿ ಪೂರ್ಣಗೊಳಿಸಲಾಗಿದೆ‌.
ಪಿಪಿಪಿ ಮಾದರಿಯಲ್ಲಿ 16 ಕೋಟಿ ವೆಚ್ಚದಲ್ಲಿ ಯಂತ್ರೋಪಕರಣ ಅಳವಡಿಸಲಾಗಿದೆ. ಒಮ್ಮೆ ಕಾರ್ಯಾರಂಭಗೊಂಡರೆ ವೈಜ್ಞಾನಿಕ ಹಾಗೂ ಗುಣಮಟ್ಟ ರೀತಿ ವಧೆ ಕಾರ್ಯ ಮಾಡಬಹುದಾಗಿದೆ ಎಂದು ಪ್ರಶ್ನೆಯೊಂದಕ್ಕೆ  ಉತ್ತರಿಸಿದರು.

ಶಿರಾ ತಾಲೂಕಿನಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ 4,78,500 ಕುರಿ ಹಾಗೂ ವಿಜಯಪುರದ ಇಂಡಿ ತಾಲೂಕಿನಲ್ಲಿ 1,61,129 ಮೇಕೆಗಳಿವೆ. ವಧಾಗಾರ ಕಾರ್ಯಾರಂಭಗೊಂಡ ಬಳಿಕ ಪ್ರತಿದಿನ 1500 ಕುರಿ ಅಥವಾ ಮೇಕೆಗಳನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ರಪ್ತು ಮಾಡಬಹುದು. ಇದರಿಂದ 150ರಿಂದ 200 ಮಂದಿಗೆ ಉದ್ಯೋಗಾವಕಾಶ ದೊರೆಯಲಿದೆ.  ರಾಜ್ಯದಲ್ಲಿ ಮೊದಲ ಬಾರಿಗೆ ವಧಾಗಾರ ಆರಂಭಿಸಲಾಗುತ್ತಿದೆ. ಇದರ ಸಾಧಕ-ಬಾಧಕ ಅರಿತು ಹೆಚ್ಚಿನ ಸಂಖ್ಯೆಯಲ್ಲಿ ವಧಾಗಾರ ಘಟಕ ನಿರ್ಮಾಣ ಬಗ್ಗೆ ಚಿಂತಿಸಲಾಗುವುದು ಎಂದರು.

ಶಿರಾ ತಾಲೂಕಿನಲ್ಲಿ ಹೆಚ್ಚು ಕುರಿಗಾಯಿಗಳಿದ್ದರೂ ಇದುವರೆಗೂ 132 ಮಂದಿಗೆ ಮಾತ್ರ ಸಾಲಸೌಲಭ್ಯ ಕಲ್ಪಿಸಲಾಗಿದೆ. ಹೆಚ್ಚಿನ ಸಂಖ್ಯೆ ಕುರಿ ಸಾಗಾಣಿಕೆದಾರರಿಗೆ ನೀಡಿದರೆ ಅನುಕೂಲವಾಗಲಿದೆ ಎಂದು ಚಿದಾನಂದ್ ಅವರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಶಿರಾ ಭಾಗದ ಕುರಿಗಾಯಿಗಳಿಗೆ ವಿಶೇಷ ಆದ್ಯತೆ ಮೇರೆಗೆ ಹೆಚ್ವಿನ ಸಾಲ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು‌.‌ ಅದೇ ರೀತಿ ಒಟ್ಟಾರೆ ಕೃಷಿ ವಲಯದಲ್ಲಿ ಕುರಿ ಸಾಕಣೆ  ಮಾಡಿದರೆ ಹೆಚ್ಚು ಲಾಭದಾಯಕವಾಗಲಿದೆ. ವಧಾಗಾರ ನಿರ್ಮಾಣದಿಂದ ವೈಜ್ಞಾನಿಕ ಹಾಗೂ ಗುಣಮಟ್ಟದ ಮಾಂಸ ರಫ್ತು ಮಾರುಕಟ್ಟೆ ವಿಸ್ತರಣೆಗೆ ನೆರವಾಗಲಿದೆ ಎಂದರು.

Related Posts

Leave a Reply

Your email address will not be published. Required fields are marked *