ಬೆಂಗಳೂರು: ಬಿಡದಿ ಬಳಿಯ ಟೊಯೋಟಾ ಬೊಶೋಕು ಕಾರ್ಖಾನೆಯಲ್ಲಿ ಪಾಕಿಸ್ತಾನದ ಪರ ಗೋಡೆ ಬರಹ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಿಡದಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಕರ್ನಾಟಕದ ಹೈಮದ್ ಹುಸೇನ್(24) ಮತ್ತು ಸಾದಿಕ್(20) ಬಂಧಿತ ಆರೋಪಿಗಳಾಗಿದ್ದಾರೆ.ಇವರಿಬ್ಬರು
ಟೊಯೋಟಾ ಬೊಶೋಕು ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಶೌಚಾಲಯದ ಗೋಡೆ ಮೇಲೆ ಪಾಕಿಸ್ತಾನದ ಪರ ಬರಹ ಬರೆಯಲಾಗಿತ್ತು. ಜೊತೆಗೆ ಕನ್ನಡಿಗರ ಬಗ್ಗೆಯೂ ಅವಹೇಳನ ಪದ ಬಳಕೆ ಮಾಡಿದ್ದರು. ಹೀಗಾಗಿ ದೇಶದ್ರೋಹದ ಆರೋಪದಡಿ ಇಬ್ಬರನ್ನು ಬಂಧಿಸಲಾಗಿದೆ.
ಟೊಯೋಟಾ ಬೋಷೂಕೂ ಆಟೋಮೇಟಿವ್ ಇಂಡಿಯಾ ಕಂಪನಿಯ ಒಳಗಿರುವ ಶೌಚಾಲಯದ ಗೋಡೆ ಮೇಲೆ ಪಾಕಿಸ್ತಾನ ಕೀ ಜೈ, ಪಾಕಿಸ್ತಾನಕ್ಕೆ ಜಯವಾಗಲಿ ಹಾಗೂ ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಬರಹ ಒಂದನ್ನು ಬರೆಯಲಾಗಿತ್ತು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
2 ಸಾವಿರಕ್ಕೂ ಹೆಚ್ಚು ಕಾರ್ಮಿಕರಿರುವ ಈ ಕಂಪನಿಯಲ್ಲಿ ಮೂರು ಪಾಳಿಯಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು, ಪ್ರತಿ ಪಾಳಿಗೂ 600 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಮಾರ್ಚ್ 16ರಂದು ಮೊದಲನೇ ಶಿಫ್ಟ್ನಲ್ಲಿ ಕೆಲಸ ಮಾಡುವ ವೇಳೆ ಕಿಡಿಗೇಡಿಗಳು, ಈ ರೀತಿ ಪದ ಬರೆದಿದ್ದು, ಈ ಪ್ರಕರಣವನ್ನು ಕಂಪನಿಯ ಆಡಳಿತ ಮಂಡಳಿ ಮುಚ್ಚಿ ಹಾಕುವ ಹುನ್ನಾರ ಮಾಡಿತ್ತು.
ಕೇವಲ ನೋಟಿಸ್ ಬೋರ್ಡ್ನಲ್ಲಿ ಒಂದು ಪೋಸ್ಟರ್ ಅಂಟಿಸುವ ಮೂಲಕ ಕೇವಲ ಎಚ್ಚರಿಕೆ ಕೊಡುವ ಕೆಲಸಕ್ಕೆ ಮುಂದಾಗಿತ್ತು. ಈ ಸಂಬಂಧ ಬಿಡದಿ ಪೋಲಿಸರು ಕಂಪನಿಗೆ ಭೇಟಿ ನೀಡಿ ಪರಿಶೀಲಿಸಲಾಗಿ ಕಿಡಿಗೇಡಿ ವಿರುದ್ದ ಪ್ರಕರಣ ದಾಖಲಾಗಿತ್ತು.