ನವದೆಹಲಿ: ಮಹಾಕುಂಭದಲ್ಲಿ ಸಂಭವಿಸಿದ ದುರಂತಗಳನ್ನು ಪ್ರಸ್ತಾಪಿಸದ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಖಂಡಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದ ಕಾರಣ ಲೋಕಸಭೆಯ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಮಹಾಕುಂಭದ ಕುರಿತು ಪ್ರಧಾನಿ ಮೋದಿ ಹೇಳಿಕೆ ನೀಡಿದ ಕೂಡಲೇ ಪ್ರತಿಪಕ್ಷಗಳ ಸದಸ್ಯರು ತಮ್ಮ ಆಸನದಿಂದ ಎದ್ದುನಿಂತು ಪ್ರತಿಭಟನೆಗೆ ಮುಂದಾದರು. ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯಲ್ಲಿ ಕಾಲ್ತುಳಿತದಿಂದ ಸಂಭವಿಸಿದ ಸಾವುಗಳ ಕುರಿತು ಸೇರಿಸಬೇಕೆಂದು ಒತ್ತಾಯಿಸಿದರು.
ಗದ್ದಲ ಉಂಟಾಗಿದ್ದರಿಂದ ಕಲಾಪವನ್ನು ಮೊದಲಿಗೆ ಮಧ್ಯಾಹ್ನ 1 ಗಂಟೆಯವರೆಗೆ ಮುಂದೂಡಲಾಯಿತು. ಕಲಾಪ ಮತ್ತೆ ಆರಂಭವಾದಾಗ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ತಮ್ಮ ಸಚಿವಾಲಯದ ಅನುದಾನ ಬೇಡಿಕೆಗಳ ಮೇಲಿನ ಚರ್ಚೆಗೆ ಪ್ರತಿಕ್ರಿಯಿಸಿದರು.
ಜಲಶಕ್ತಿ ಸಚಿವಾಲಯಕ್ಕೆ ಅನುದಾನ ಬೇಡಿಕೆಗಳ ಕುರಿತು ಸದನವು ಚರ್ಚೆಯನ್ನು ಕೈಗೆತ್ತಿಕೊಂಡಾಗ, ವಿರೋಧ ಪಕ್ಷದ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಮುಂದುವರೆಸಿದರು. ಇದರಿಂದಾಗಿ ಸ್ಪೀಕರ್ ಕಲಾಪವನ್ನು ಮುಂದೂಡಿದರು.
ಮಹಾಕುಂಭವು ದೇಶದಲ್ಲಿ ಏಕತೆಯ ಮನೋಭಾವವನ್ನು ಬಲಪಡಿಸಿದೆ ಮತ್ತು ಅಂತಹ ಬೃಹತ್ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸುವ ಸಾಮರ್ಥ್ಯ ಭಾರತಕ್ಕೆ ಇದೆಯೇ ಎಂದು ಪ್ರಶ್ನಿಸುತ್ತಿದ್ದವರಿಗೆ ಸೂಕ್ತ ಉತ್ತರ ನೀಡಿದೆ.
ಮಹಾಕುಂಭದ ಯಶಸ್ಸು ಸರ್ಕಾರ ಮತ್ತು ಸಮಾಜದ ಅಸಂಖ್ಯಾತ ಜನರ ಕೊಡುಗೆಗಳ ಪರಿಣಾಮವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.
ಮಾತಾಡಕ್ಕೆ ಅವಕಾಶ ಇಲ್ಲ
ಪ್ರಜಾಸತಾತ್ಮಕ ವ್ಯವಸ್ಥೆಯಲ್ಲಿ ಲೋಕಸಭೆ ವಿಪಕ್ಷ ನಾಯಕ ಮಾತನಾಡಲು ಅವಕಾಶ ನೀಡಬೇಕು ಆದರೆ, ನವ ಭಾರತದಲ್ಲಿ ಮಾತನಾಡುವುದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮಹಾಕುಂಭ ಮೇಳ ಕುರಿತು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ ನಂತರ ಪ್ರತಿಪಕ್ಷಗಳ ಪ್ರತಿಭಟನೆ ನಡುವೆ ಲೋಕಸಭೆ ಕಲಾಪವನ್ನು ಕೆಲಕಾಲ ಮುಂದೂಡಲಾಯಿತು.
ಬಳಿಕ ಸಂಸತ್ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಪ್ರಯಾಗ್ ರಾಜ್ ನ ಮಹಾಕುಂಭದಲ್ಲಿ ಜನವರಿ ೨೯ ರಂದು ಸಂಭವಿಸಿದ ಕಾಲ್ತುಳಿತ ಘಟನೆಯಲ್ಲಿ ಸಾವನ್ನಪ್ಪಿದ್ದವರಿಗೆ ಪ್ರಧಾನಿ ಮೋದಿ ಶ್ರದ್ದಾಂಜಲಿ ಸಲ್ಲಿಸಬೇಕು ಎಂದರು.
ಪ್ರಧಾನಿ ಮೋದಿ ಹೇಳಿದನ್ನು ನಾನು ಬೆಂಬಲಿಸಲು ಬಯಸುತ್ತೇನೆ. ಕುಂಭ ನಮ್ಮ ಸಂಪ್ರದಾಯ, ಐತಿಹಾಸಿಕ ಮತ್ತು ಸಂಸ್ಕೃತಿ. ಆದರೆ, ಮಹಾಕುಂಭ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರಿಗೆ ಪ್ರಧಾನಿ ಮೋದಿ ಶ್ರದ್ದಾಂಜಲಿ ಸಲ್ಲಿಸಲಿಲ್ಲ ಎಂಬ ದೂರು ಕೇಳಿಬಂದಿದೆ ಎಂದರು.
ನಾನು ಹೇಳಲು ಬಯಸುವ ಇನ್ನೊಂದು ವಿಷಯವೆಂದರೆ ಕುಂಭಕ್ಕೆ ಹೋದ ಯುವಕರಿಗೆ ಪ್ರಧಾನಿಯಿಂದ ಉದ್ಯೋಗ ಬೇಕು. ಉದ್ಯೋಗದ ಬಗ್ಗೆ ಪ್ರಧಾನಿ ಮಾತನಾಡಬೇಕು ಎಂದು ಕಾಂಗ್ರೆಸ್ ನಾಯಕ ಹೇಳಿದರು.