ರಾಜ್ಯ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ ಬಳಿಕ ಸರ್ಕಾರಿ ಬಸ್ಸುಗಳು ಮಹಿಳೆಯರಿಂದ ತುಂಬಿ ತುಳುಕುತ್ತಿರುವುದನ್ನೇ ದಾಳ ಮಾಡಿಕೊಂಡು ಬಸ್ ಗಳಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳಿಯರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ನಗರದ ವಡ್ಡರವಾಡಿಯ ಅನಿತಾ ಚೌಗಲೆ, ನಿಶಾ ಲೊಂಡೆ, ಗಿಡ್ಡಿ ಲೊಂಡೆ ಬಂಧಿತರು. ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಸಕ್ರಿಯವಾಗಿದ್ದ ಕಳ್ಳಿಯರ ಗ್ಯಾಂಗ್ ಸದಸ್ಯರನ್ನು ಬೆಳಗಾವಿಯ ಮಾರ್ಕೆಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಸ್ ಹತ್ತುವಾಗ ಮತ್ತು ಇಳಿಯುವಾಗ ಮಹಿಳೆಯರ ಕತ್ತಲ್ಲಿದ್ದ ಬಂಗಾರದ ಒಡವೆಗಳನ್ನು ಕಳ್ಳಿಯರು ಎಗರಿಸುತ್ತಿದ್ದರು. ಹುಬ್ಬಳ್ಳಿ ಮೂಲದ ಕಾಂಚನಾ ಗೌಡರ ಎಂಬವವರ ಚಿನ್ನದ ಸರ ಕಳ್ಳತನವಾಗಿತ್ತು. ಈ ಕುರಿತು ಕಾಂಚನಾ ಮಾರ್ಕೆಟ್ ಠಾಣೆಗೆ ದೂರು ನೀಡಿದ್ದರು.
ದೂರನ್ನಾಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಕಳ್ಳಿಯರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 12 ಲಕ್ಷ 70 ಸಾವಿರ ರೂ. ಮೌಲ್ಯದ 143 ಗ್ರಾಂ ಚಿನ್ನದ ಒಡವೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.