Menu

ಲವ್‌ ಜಿಹಾದ್‌ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರವೆಂದು ಆರ್‌ ಅಶೋಕ್‌ ಆಕ್ರೋಶ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಕಾಂಗ್ರೆಸ್‌ ಸರ್ಕಾರ ಆರೋಪಿಗಳನ್ನು ಬಂಧಿಸುವ ಕೆಲಸ ಮಾಡುತ್ತಿಲ್ಲ. ಕಾನೂನು ಸುವ್ಯವಸ್ಥೆಯ ಮೇಲೆ ಸಚಿವರು ಅಥವಾ ಮುಖ್ಯಮಂತ್ರಿಗೆ ಸ್ವಲ್ಪವೂ ಹಿಡಿತವೇ ಇಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಮಾತನಾಡಿದ ಅವರು, ನಾವೆಲ್ಲರೂ ತಲೆ ತಗ್ಗಿಸುವಂತಹ ಘಟನೆ ರಾಮನಗರದಲ್ಲಿ ನಡೆದಿದೆ. ಬಿಡದಿಯ ಟೊಯೋಟ ಕಂಪನಿಯ ಶೌಚಾಲಯದ ಗೋಡೆಯ ಮೇಲೆ ಪಾಕಿಸ್ತಾನ ಜಿಂದಾಬಾದ್‌ ಎಂದು ಬರೆಯಲಾಗಿದೆ. ಜೊತೆಗೆ ಕನ್ನಡಿಗರ ಬಗ್ಗೆ ಅವಾಚ್ಯವಾಗಿ ನಿಂದಿಸಿ ಬರೆಯಲಾಗಿದೆ. ಇಂತಹ ಕಿಡಿಗೇಡಿಗಳಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ಇದು ಬಹಳ ಪ್ರತಿಷ್ಠಿತ ಕಂಪನಿಯಾಗಿದ್ದು, ಎಲ್ಲ ಕಡೆ ಸಿಸಿಟಿವಿ ಕ್ಯಾಮರಾ ಇದೆ. ಆದರೂ ಅದನ್ನು ಪರಿಶೀಲಿಸಿ ತಪ್ಪಿತಸ್ಥರನ್ನು ಬಂಧಿಸುವ ಕೆಲಸವನ್ನು ಪೊಲೀಸರು ಇನ್ನೂ ಮಾಡಿಲ್ಲ ಎಂದರು.

ಸ್ವಾತಿ ಲವ್‌ ಜಿಹಾದ್‌: ಹಾವೇರಿ ಜಿಲ್ಲೆಯಲ್ಲಿ ಹೋರಿ ಹಬ್ಬದ ಸ್ನೇಹ ಲವ್‌ ಜಿಹಾದ್‌ನಲ್ಲಿ ಅಂತ್ಯವಾಗಿದೆ. ಹಾವೇರಿ ಜಿಲ್ಲೆಯ ಯುವತಿ ಸ್ವಾತಿಯನ್ನು ಲವ್‌ ಜಿಹಾದ್‌ ಬಲೆಗೆ ಬೀಳಿಸಲಾಗಿತ್ತು. ನಂತರ ಕಿಡಿಗೇಡಿ ಯುವಕರು ಮದುವೆಯ ಪ್ರಸ್ತಾಪ ಮಾಡಿ ಆಕೆಯನ್ನು ನಂಬಿಸಿದ್ದರು. ಬಳಿಕ ಆಕೆಯನ್ನು ಪಾಳು ಬಿದ್ದ ಶಾಲೆಗೆ ಕರೆದುಕೊಂಡು ಹೋಗಿ ಕೇಸರಿ ಟವೆಲ್‌ನಲ್ಲಿ ಸಾಯಿಸಿದ್ದಾರೆ. ಈ ಪ್ರಕರಣದ ಎಫ್‌ಐಆರ್‌ ಆದ ಬಳಿಕವೂ ತಾಯಿಗೆ ಮಾಹಿತಿ ನೀಡದೆ ಪೊಲೀಸರು ಪ್ರಕರಣ ಮುಚ್ಚಿಹಾಕಿದ್ದಾರೆ. ಈ ಲವ್‌ ಜಿಹಾದ್‌ ಪ್ರಕರಣದಲ್ಲಿ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ನೇಹಾ ಲವ್‌ ಜಿಹಾದ್‌ ಘಟನೆಯಾದಾಗಲೇ ಸರ್ಕಾರ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಿತ್ತು. ಲವ್‌ ಜಿಹಾದ್‌ ನಡೆಯುತ್ತಿದ್ದರೂ ಅದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ದೂರಿದರು.

ಸ್ವಾತಿಯ ಕುಟುಂಬದ ಸ್ಥಿತಿ ಚೆನ್ನಾಗಿಲ್ಲ. ಅವರ ತಂದೆ ವಿದ್ಯುತ್‌ ಶಾಕ್‌ ತಗುಲಿ ತೀರಿಕೊಂಡಿದ್ದರು. ಸ್ವಾತಿ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದರು. ಹೋರಿ ಹಬ್ಬ ನಡೆದಾಗ ಅಲ್ಲಿಗೆ ಸ್ನೇಹಿತರ ಜೊತೆ ಹೋಗುತ್ತಿದ್ದರು. ಈಗ ಅವರ ಕುಟುಂಬ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದೆ ಎಂದರು.

ಹಂಪಿ ಘಟನೆ:  ಹಂಪಿಯಲ್ಲಿ ವಿದೇಶಿ ಮಹಿಳೆಯ ಮೇಲಿನ ಅತ್ಯಾಚಾರ ದೊಡ್ಡ ಸುದ್ದಿಯಾಗಿದೆ. ಮೂರು ಯುವಕರು ಒಡಿಶಾ ಮೂಲದ ಒಬ್ಬನನ್ನು ಸಾಯಿಸಿ, ಇಸ್ರೇಲ್ ಮಹಿಳೆ ಹಾಗೂ ಹೋಮ್‌ಸ್ಟೇ ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದಾರೆ. 60% ಗೂ ಅಧಿಕ ಪ್ರವಾಸಿಗರು ಇಸ್ರೇಲ್‌ನಿಂದ ರಾಜ್ಯಕ್ಕೆ ಬರುತ್ತಾರೆ. ಇಲ್ಲಿ ಸುರಕ್ಷತೆ ಇರುವ ಕಾರಣಕ್ಕೆ ವಿದೇಶಿಯರು ಭೇಟಿ ನೀಡುತ್ತಾರೆ. ಈ ಘಟನೆಯಿಂದಾಗಿ ಪ್ರವಾಸಿಗರು ಬರುತ್ತಿಲ್ಲ. ಇದರಿಂದಾಗಿ ಹಂಪಿಗೆ ಕೆಟ್ಟ ಹೆಸರು ಬರುವುದರ ಜೊತೆಗೆ, ಆರ್ಥಿಕತೆ ಕುಸಿದಿದೆ. ಇಷ್ಟೆಲ್ಲ ಆದ ನಂತರವೂ, ವಿದೇಶಿಯರು ನಮ್ಮನ್ನು ಹೊಗಳಿದ್ದಾರೆ ಎಂದು ರಾಜ್ಯಪಾಲರ ಭಾಷಣದಲ್ಲಿ ಹೇಳಿದ್ದಾರೆ ಎಂದರು.

ತಲೆ ತಗ್ಗಿಸುವಂತಹ ಅಪರಾಧಿ ಚಟುವಟಿಕೆಗಳು ನಡೆಯುತ್ತಿದ್ದರೂ ಸರ್ಕಾರ ಯಾರನ್ನೂ ಬಂಧಿಸಿಲ್ಲ. ಇದರಿಂದಾಗಿ ಸರ್ಕಾರ ಬದುಕಿದೆಯೇ ಸತ್ತಿದೆಯೇ ಎಂಬ ಪ್ರಶ್ನೆ ಬರುತ್ತಿದೆ. ಹೇಳುವವರು, ಕೇಳುವವರು ಯಾರೂ ಇಲ್ಲದೆ ಗೂಂಡಾ ರಾಜ್ಯ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎಂದು ಸಮರ್ಥನೆ ಮಾಡಿಕೊಳ್ಳುತ್ತಾರೆ. ಇಂತಹ ಸ್ಥಿತಿಯನ್ನು ಸೃಷ್ಟಿಸಿದ ಸರ್ಕಾರದ ನಡೆಯನ್ನು ಖಂಡಿಸುತ್ತೇನೆ ಎಂದರು.

Related Posts

Leave a Reply

Your email address will not be published. Required fields are marked *