ಸೋಮವಾರ (ಮಾ.17) ಮಧ್ಯರಾತ್ರಿ ಹೊತ್ತಿಗೆ ತಮಿಳುನಾಡಿನವರು ಪೆನ್ನಾರ್ ಸಭೆಯನ್ನು ಬಹಿಷ್ಕರಿಸಿ ಪ್ರತ್ಯೇಕ ದಿನಾಂಕ ನೀಡಿ ಎಂದು ಕೇಳಿದ ಕಾರಣಕ್ಕೆ ಸಭೆಯನ್ನು ಮುಂಡೂಡಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಯಾರ ಬಳಿ ಮಾತನಾಡಬೇಕೊ ಅವರ ಬಳಿ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಮುಂದಿನ ಸಭೆ ದಿನಾಂಕ ತಿಳಿಸಲಾಗುವುದು. ಇವತ್ತಿನ ಸಭೆಯಲ್ಲಿ ಭಾಗವಹಿಸಲು ತಮಿಳುನಾಡಿನವರು ಒಪ್ಪಿಲ್ಲ ಎಂದು ಡಿಸಿಎಂ ಶಿವಕುಮಾರ್ ಹೇಳಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಸರಣಿ ಪ್ರಶ್ನೆಗಳಿಗೆ ಶಿವಕುಮಾರ್ ಉತ್ತರಿಸಿ, “ಪೆನ್ನಾರ್ ನದಿ ನೀರಿನ ವಿಚಾರವಾಗಿ ಕರ್ನಾಟಕದ ಯೋಜನೆಗಳಿಗೆ ತಮಿಳುನಾಡಿನವರು ತಕರಾರು ಎತ್ತಿದ್ದರು. ಈ ಕಾರಣಕ್ಕಾಗಿ ಕೇಂದ್ರ ಜಲಶಕ್ತಿ ಸಚಿವರ ಸಮ್ಮುಖದಲ್ಲಿ ಎರಡು ರಾಜ್ಯಗಳ ನಡುವೆ ರಾಜಿ ಸಂಧಾನ ಸಭೆಗೆ ನಾನು ಹಾಜರಾಗಿದ್ದೆ. ಮಾರ್ಕಂಡೇಯ ಅಣೆಕಟ್ಟು, ಬೈಲಹಳ್ಳಿ ಬಳಿ ಪಂಪ್ ಹೌಸ್, ವರ್ತೂರು ಕೆರೆಯಿಂದ ನರಸಾಪುರ ಕೆರೆಗೆ ಹಾಗೂ ಮಾಲೂರಿನ ಕಾಟನೂರು ಕೆರೆಗೆ ಪೆನ್ನಾರ್ ನದಿ ನೀರು ಹರಿಸುವ ಕುರಿತು ಕರ್ನಾಟಕ ಯೋಜನೆ ರೂಪಿಸಿತ್ತು” ಎಂದು ಹೇಳಿದರು.
“ತಮಿಳುನಾಡಿನವರು ನ್ಯಾಯಲಯಕ್ಕೆ ತಕರಾರು ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ನಲ್ಲಿ ಈ ವಿಚಾರವನ್ನು ಬಗೆಹರಿಸಲು ಎರಡು- ಮೂರು ಬಾರಿ ದಿನಾಂಕ ಕೊಟ್ಟಿದ್ದರು, ಆದರೆ ಬೆಳಗಾವಿ ಅಧಿವೇಶನವಿದ್ದ ಕಾರಣ ನಾವು ಭಾಗವಹಿಸಲು ಕಷ್ಟವಾಗುತ್ತದೆ ಎಂದು ತಿಳಿಸಿದ್ದೆವು. ಈ ಕಾರಣಕ್ಕೆ ಮಾ.18 ರಂದು ಸಭೆ ಏರ್ಪಡಿಸಿದ್ದರು. ನಾವು ಯಾವ ನಿಲುವನ್ನು ವ್ಯಕ್ತಪಡಿಸಬೇಕು ಎಂದು ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಿದ್ದೇವೆ” ಎಂದರು.
ಬಿಜೆಪಿಯವರೇ ಗ್ಯಾರಂಟಿ ನೀಡಲು ತುದಿಗಾಲಲ್ಲಿದ್ದಾರೆ: ತೆಲಂಗಾಣ ಸಿಎಂ ರೇವಂತ ರೆಡ್ಡಿ ಅವರು ಗ್ಯಾರಂಟಿಗೆ ಹಣ ಹೊಂದಿಸಲು ಕಷ್ಟವಾಗುತ್ತಿದೆ ಎನ್ನುವ ಹೇಳಿಕೆ ಬಗ್ಗೆ ಕೇಳಿದಾಗ, “ಅವರ ದುಗುಡವನ್ನು ಅವರು ಹೇಳಿದ್ದಾರೆ. ನಾವು ಶಕ್ತಿಶಾಲಿಯಾಗಿ ಇದ್ದೇವೆ ಎಂದು ಬಜೆಟ್ ಅಲ್ಲಿ 52 ಸಾವಿರ ಕೋಟಿ ಹಣ ಮೀಸಲಿ ಟ್ಟಿದ್ದೇವೆ. ಇದುವರೆಗೂ ಒಂದೆರಡು ದಿನ ತಡವಾಗಿಯಾದರೂ ನೀಡುತ್ತಾ ಬಂದಿದ್ದೇವೆ. ನಿರ್ದಿಷ್ಟ ಇದೆ ದಿನದಂದು ನೀಡುತ್ತೇವೆ ಎಂದು ಹೇಳಿಲ್ಲ. ಆದರೆ ತಪ್ಪದೇ ನೀಡುತ್ತಿದ್ದೇವೆ. ದೆಹಲಿಯವರು, ಪ್ರಧಾನಮಂತ್ರಿಗಳು ನಮ್ಮನ್ನು ಟೀಕೆ ಮಾಡುತ್ತಿದ್ದರು. ಆದರೆ ಈಗ ಅವರೇ ನಮಗಿಂತ ಮುಂಚಿತವಾಗಿ ನೀಡಲು ತುದಿಗಾಲಲ್ಲಿ ನಿಂತಿದ್ದಾರೆ” ಎಂದರು.
ಮಾ. 27 ಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಭೆ: ಮಾ. 27 ರಂದು ಎಲ್ಲಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಭೆಯನ್ನು ದೆಹಲಿಯಲ್ಲಿ ಕರೆಯಲಾಗಿದೆ. ಅಂದು ನಾನು ಸಹ ಸಭೆಯಲ್ಲಿ ಭಾಗವಹಿಸಲಿದ್ದೇನೆ. ಇದಕ್ಕೆ ನಾನು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಮಾ. 28 ಕ್ಕೆ ಅಹಮದಾಬಾದಿನ ಸಬರಮತಿ ಆಶ್ರಮದ ಬಳಿ ಎಐಸಿಸಿ ಸದಸ್ಯರ ಸಭೆಗೆ ಆಹ್ವಾನ ನೀಡಿದ್ದಾರೆ. ಹಿರಿಯ ನಾಯಕರು, ಸಂಸದರು ಅಲ್ಲಿಗೆ ಹೋಗುತ್ತಾರೆ” ಎಂದರು.
ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿಯಾಗಿದ್ದೀರಾ ಎಂದಾಗ, “ಸಮಯ ಸಿಕ್ಕರೆ ಭೇಟಿ ಮಾಡುತ್ತೇನೆ. ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಯುತ್ತಿರುವ ಕಾರಣಕ್ಕೆ ಭೇಟಿ ಸಾಧ್ಯವಾಗಿಲ್ಲ” ಎಂದರು.
ದೆಹಲಿಗೆ ಬಂದರೂ ಸಂಜೆಯ ತನಕ ಕಾಣಿಸಿಕೊಳ್ಳದ ನೀವು ನಿಗೂಢವಾಗಿ ಭೇಟಿ ಮಾಡಿದ್ದೀರಾ ಎಂದು ಕೇಳಿದಾಗ, “ಯಾವ ನಿಗೂಢತೆಯೂ ಇಲ್ಲ. ಎಲ್ಲಿಗೆ ಹೋಗಬೇಕಿತ್ತೊ ಅಲ್ಲಿಗೆ ಹೋಗಿದ್ದೆ. ಈಗ ಮನೆಯಿಂದ ಬರುತ್ತಿರುವೆ” ಎಂದು ಹೇಳಿದರು.