ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಭಾರತದ ಅನುಪಸ್ಥಿತಿಯಿಂದ 869 ಕೋಟಿ ರೂ.ನಷ್ಟು ಭಾರೀ ನಷ್ಟವುಂಟಾಗಿದೆ. ಇದರಿಂದ ಆಟಗಾರರ ಭತ್ಯೆಗೂ ಕತ್ತರಿ ಬೀಳಲಿದೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಆತಿಥ್ಯ ವಹಿಸಿದ್ದ ಪಾಕಿಸ್ತಾನ ತಂಡ ಒಂದೂ ಪಂದ್ಯ ಗೆಲ್ಲದೇ ಗುಂಪು ಹಂತದಲ್ಲೇ ನಿರ್ಗಮಿಸಿತ್ತು.
ಪ್ರತಿಷ್ಠಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಿದ್ದ ಪಾಕಿಸ್ತಾನ ತಂಡ ಭಾರತ ಆಗಮಿಸದೇ ಇರುವುದು ಹಾಗೂ ಸ್ವತಃ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನದಿಂದ ಭಾರೀ ನಷ್ಟಕ್ಕೆ ಒಳಗಾಗಿದೆ.
ಪಿಸಿಬಿ ಚಾಂಪಿಯನ್ಸ್ ಟ್ರೋಫಿ ಆತಿಥ್ಯಕ್ಕೆ ಖರ್ಚು ಮಾಡಿದ್ದರಲ್ಲಿ ಶೇ.89ರಷ್ಟು ನಷ್ಟ ಅನುಭವಿಸಿದೆ. ರಾವಲ್ಪಿಂಡಿ, ಕರಾಚಿ ಮತ್ತು ಲಾಹೋರ್ ಮೈದಾನಗಳ ಮೇಲ್ದರ್ಜೆಗೆ 58 ದಶಲಕ್ಷ ಡಾಲರ್ (18 ಶತಕೋಟಿ ಪಾಕ್ ರೂಪಾಯಿ] ವಿನಿಯೋಗಿಸಬೇಕಿತ್ತು. ಆದರೆ ಶೇ.50ರಷ್ಟು ವೆಚ್ಚ ಹೆಚ್ಛಳದಿಂದ 40 ದಶಲಕ್ಷ ಡಾಲರ್ ಹೆಚ್ಚು ವಿನಿಯೋಗಿಸಬೇಕಾಯಿತು.
ಚಾಂಪಿಯನ್ಸ್ ಟ್ರೋಫಿ ಆತಿಥ್ಯದಿಂದ ಪಾಕಿಸ್ತಾನಕ್ಕೆ 6 ದಶಲಕ್ಷ ಡಾಲರ್ ಮಾತ್ರ ಆದಾಯ ಬಂದಿದ್ದು, ಇದು ಕೂಡ ಪಂದ್ಯ ಆಯೋಜನೆಯ ಶುಲ್ಕ, ಟಿಕೆಟ್ ಮಾರಾಟ ಮತ್ತು ಸ್ಥಳೀಯ ಜಾಹಿರಾತುಗಳಿಂದ ಬಂದಿರುವುದು.
ಭಾರೀ ನಷ್ಟದ ಹಿನ್ನೆಲೆಯಲ್ಲಿ ಪ್ರಮುಖ ಆಟಗಾರರ ಶುಲ್ಕದಲ್ಲಿ ಶೇ.90ರಷ್ಟು ಕಡಿತ ಹಾಗೂ ಮೀಸಲು ಆಟಗಾರರ ಶುಲ್ಕದಲ್ಲಿ ಶೇ.87.5ರಷ್ಟು ಕಡಿತ ಮಾಡಲು ಪಿಸಿಬಿ ನಿರ್ಧರಿಸಿದೆ. ಅಂದರೆ ಆಟಗಾರರಿಗೆ ಪ್ರತಿ ಪಂದ್ಯಕ್ಕೆ ನೀಡಬೇಕಿದ್ದ 40 ಸಾವಿರ ರೂ. ಶುಲ್ಕದಲ್ಲಿ ಕೇವಲ 10 ಸಾವಿರ ರೂ. ಮಾತ್ರ ಪಾವತಿಸಲಿದೆ. ಮುಂದಿನ ದಿನಗಳಲ್ಲಿ ದೇಶೀಯ ಟೂರ್ನಿಯ ವೇಳೆ ಆಟಗಾರರಿಗೆ ಪಂಚತಾರಾ ಹೋಟೆಲ್ ನಲ್ಲಿ ತಂಗುವ ವ್ಯವಸ್ಥೆಗೂ ಕತ್ತರಿ ಹಾಕಲು ತೀರ್ಮಾನಿಸಲಾಗಿದೆ.