Menu
12

ಗ್ಯಾರಂಟಿ ಯೋಜನೆ ಕದ್ದು ಮೋದಿ ಗ್ಯಾರಂಟಿ ಅಂತಿರಲ್ಲಾ: ಸಿಎಂ ಸಿದ್ದರಾಮಯ್ಯ ತರಾಟೆ

modi garantee

ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ನಿಲ್ಲಿಸಿಬಿಡ್ತಾರೆ ಅಂತ ಸುಳ್ಳು ಹೇಳಿಕೊಂಡು ಅಪಪ್ರಚಾರ ಮಾಡಿದ್ದಿರಲ್ಲಾ? ಯೋಜನೆಗಳು ನಿಂತು ಹೋಗಿದೆಯಾ? ನಮ್ಮ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿ ಮೋದಿ ಗ್ಯಾರಂಟಿ ಅಂತ ಪ್ರಚಾರ ಮಾಡ್ತಿರಲ್ಲ ನಾಚಿಕೆ ಆಗಲ್ವಾ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಸೋಮವಾರ ಸುದೀರ್ಘ ಭಾಷಣ ಮಾಡಿದ ಅವರು, ಲೋಕಸಭಾ ಚುನಾವಣೆ ನಂತರದಲ್ಲಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುವುದು ಎಂದು ಸುಳ್ಳು ಆರೋಪ, ಅಪಪ್ರಚಾರ ಮಾಡಿದಿರಿ. ಜನರಿಗೆ ಈ ಕಾರ್ಯಕ್ರಮಗಳ ಸತ್ಯಾಸತ್ಯತೆ ಗೊತ್ತಿದೆ. ಜನರನ್ನು ಯಾವಾಗಲೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದರು.

ರಾಜ್ಯದ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳಿಂದ ಪ್ರಯೋಜನವಾಗಿದೆ. ಜೂನ್ 11, 2023 ರಿಂದ 410 ಕೋಟಿ ಜನ ಶಕ್ತಿ ಯೋಜನೆಯಡಿ ಓಡಾಡಿದ್ದಾರೆ. ನೀವು ಎಷ್ಟೇ ಸುಳ್ಳು ಹೇಳಿದರೂ ಉಪಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಸೋತಿದ್ದೀರಿ ಎಂದು ಅವರು ಲೇವಡಿ ಮಾಡಿದರು.

ನಿಮ್ಮ ಟೀಕೆ, ಆಪಾದನೆಗಳು ಮಾಡಿದ ನಂತರ ಉಪಚುನಾವಣೆಗಳು ನಡೆದಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಗೆದ್ದಿದ್ದ ಚನ್ನಪಟ್ಟಣ ಕ್ಷೇತ್ರದಲ್ಲಿ 25 ಸಾವಿರಕ್ಕೂ ಹೆಚ್ಚು ಅಂತರದಿಂದ ಗೆದ್ದಿದ್ದೇವೆ. ಶಿಗ್ಗಾಂವಿ ಕ್ಷೇತ್ರದಲ್ಲಿ13 ಸಾವಿರ ಅಂತರದಿಂದ ಹಾಗೂ ಸಂಡೂರು ಕ್ಷೇತ್ರದಲ್ಲಿ 9 ಸಾವಿರ ಅಂತರದಲ್ಲಿ ಗೆದ್ದಿದ್ದೇವೆ. ಮೂರೂ ಕಡೆ ಮಕಾಡೆ ಮಲಗಿದಿರಿ ನೀವು. ಜನರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸಿದರೆ ಸಾಧ್ಯವಿಲ್ಲ ಎಂದರು.

ಎರಡು ಬಾರಿ ಅಧಿಕಾರ ಮಾಡಿರುವ ನೀವು ಜನರ ಆಶೀರ್ವಾದದಿಂದ ಗೆದ್ದಿದ್ದೀರೇ? ಆಪರೇಶನ್ ಕಮಲ ಮಾಡಿ 18 ಕ್ಷೇತ್ರಗಳನ್ನು ಗೆದ್ದಿರಿ ಎಂದು ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರನ್ನು ಟೀಕಿಸಿದರು.

ಬಸವರಾಜ ಬೊಮ್ಮಾಯಿ ಅವರ ಮಗನ ವಿರುದ್ಧ ಗೆಲ್ಲಬೇಕಾದರೆ ಎಲ್ಲಾ ಜಾತಿ ಜನರು ಮತ ನೀಡಿದ್ದರಿಂದ ನಾವು ಗೆದ್ದಿದ್ದೇವೆ. ನಾವು ಅಪರೇಶನ್ ಕಾಂಗ್ರೆಸ್ ಮಾಡಿಲ್ಲ. ನಾವು ಗ್ಯಾರಂಟಿ ಕೊಡದೇ ಹೋಗಿದ್ದರೆ ಬಡವರು ಮತ ಹಾಕುತ್ತಿರಲಿಲ್ಲ . ಮಧ್ಯವರ್ತಿಗಳಿಲ್ಲದೇ ನೇರವಾಗಿ ಫಲಾನುಭವಿಗಳ ಖಾತೆಗೆ ತಲುಪುವ ಈ ಯೋಜನೆಗಳು ಬಡವರ ಬದುಕಿಗೆ ಭರವಸೆ ನೀಡಿವೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

Related Posts

Leave a Reply

Your email address will not be published. Required fields are marked *