ಎನ್‌ಡಿಎ- ಬಿಜೆಪಿ ಸರ್ಕಾರದ ಸಚಿವರು, ಅಧಿಕಾರಿಗಳು ನನ್ನಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚಿಸಿದ್ದು ಏಕೆ, ಕೇಂದ್ರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಸಂಸ್ಥೆಯ ಅಧ್ಯಕ್ಷರಾದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ ಸಚಿವ ಜಿತೇಂದ್ರ ಸಿಂಗ್ ಪ್ರಶಂಸೆಯ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕೊಟ್ಟಿದ್ದಾರೆ. ಇಲ್ಲಿ ನೀವು ವಿರೋಧಿಸುತ್ತಿದ್ದೀರಿ, ಏನಿದು ಎಂದು ರಾಜ್ಯ ಬಿಜೆಪಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಪ್ರಶ್ನಿಸಿದ್ದಾರೆ.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಉತ್ತರಿಸಿ, ಗ್ಯಾರಂಟಿ ಯೋಜನೆಗಳನ್ನು ನೀವು ಬಿಜೆಪಿ ಆಡಳಿತವಿರುವ ರಾಜ್ಯ ಗಳಲ್ಲಿ ನಕಲು ಮಾಡಿದ್ದೀರಿ. ವಿರೋಧ ಮಾಡುವುದಾದರೆ ನಕಲು ಏಕೆ ಮಾಡಬೇಕಿತ್ತು. ಸತ್ಯ ಯಾವಾಗಲೂ ಕಹಿಯಾಗಿರುತ್ತದೆ. ನಾವು ವಾಸ್ತವವನ್ನು ಹೇಳುತ್ತಿ ದ್ದೇವೆ. ದಿನಾಂಕ 3-1-2025 ರಂದು ಚಂದ್ರ ಬಾಬು ನಾಯ್ದು ಅವರ ಸರ್ಕಾರದ ಮಂತ್ರಿಗಳು ಹಾಗೂ ಅಧಿಕಾರಿಗಳು ಗ್ಯಾರಂಟಿ ಯೋಜನೆಗಳ ಕುರಿತು ಅಧ್ಯಯನ ಮಾಡಿ ಹೋಗಿದ್ದಾರೆ. ಸಚಿವ ರಾಮಲಿಂಗಾರೆಡ್ಡಿ ಹಾಗೂ ನನ್ನನ್ನು ಭೇಟಿಯಾಗಿ ಚರ್ಚಿಸಿದ್ದಾರೆ ಎಂದು ಮಾಹಿತಿ ನೀಡಿದರು.
2-2-2025 ರಂದು ಮಹಾರಾಷ್ಟ್ರದ ಸಾರಿಗೆ ಸಚಿವರಾದ ಪ್ರತಾಪ್ ಸರ್ನಾಯಕ್ ಶಕ್ತಿ ಯೋಜನೆ ಬಗ್ಗೆ ಚರ್ಚಿಸಿ ತೆರಳಿದ್ದಾರೆ. ಅಲ್ಲಿರುವುದು ಬಿಜೆಪಿ ಸರ್ಕಾರ. 5-3-2025 ರಂದು ಕೇರಳದಿಂದ ಸಚಿವರು ಬಂದು ಅಧ್ಯಯನ ಮಾಡಿ ಹೋದರು. ಇವರೆಲ್ಲಾ ಸುಮ್ಮನೆ ಬಂದು ಹೋಗುತ್ತಾರೆಯೇ ಎಂದು ಮುಖ್ಯಮಂತ್ರಿ ಬಿಜೆಪಿ ಸದಸ್ಯರನ್ನು ಪ್ರಶ್ನಿಸಿದರು.
ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ ಸಚಿವ ಜಿತೇಂದ್ರ ಸಿಂಗ್ ಪ್ರಶಂಸೆಯ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕೊಟ್ಟಿದ್ದಾರೆ. ಈ ಎರಡೂ ವರದಿಗಳು ಸರ್ಕಾರಕ್ಕೆ ಉಪಯುಕ್ತವಾಗಿದ್ದರೂ ಮೊಸರಲ್ಲಿ ಕಲ್ಲು ಹುಡುಕುತ್ತಿದ್ದೀರಿ. ನಿಮಗೆ ಎಷ್ಟು ಹುಡುಕಿದರೂ ಮೊಸರಲ್ಲಿ ಕಲ್ಲು ಸಿಗುವುದಿಲ್ಲ. ನೀವು ಮಾಡುತ್ತಿರುವುದು ರಾಜಕೀಯ ಪ್ರೇರಿತ ಕೆಲಸ. ಈಗಲಾದರೂ ಸಕಾರಾತ್ಮಕವಾಗಿ ಟೀಕೆ ಮಾಡಬೇಕೆಂದು ಸಿಎಂ ಮನವಿ ಮಾಡಿದರು.
ತಪ್ಪುಗಳಿದ್ದರೆ ಸರ್ಕಾರದ ಖಜಾನೆಗೆ ತೊಂದರೆಯಿದ್ದರೆ ಸರ್ಕಾರದ ಗಮನಕ್ಕೆ ತರುವುದು ವಿರೋಧ ಪಕ್ಷದ ಕೆಲಸ. ಆ ಕೆಲಸ ಮಾಡಬೇಕು.ಗ್ಯಾರಂಟಿ ಯೋಜನೆಗಳಿಗೆ ಫೆಬ್ರವರಿವರೆಗೆ ನಮ್ಮ ಸರ್ಕಾರ 76,509 ಕೋಟಿ ರೂಪಾಯಿ ನೀಡಿದೆ. ಇದು ಸತ್ಯ ಎನ್ನುವುದು ಸದನದಲ್ಲಿರುವ ಪ್ರತಿಯೊಬ್ಬರಿಗೂ ಸ್ಪಷ್ಟವಾಗಿ ಗೊತ್ತಿದೆ. ನಮ್ಮ ಸರ್ಕಾರ ದಿವಾಳಿಯಾಗಿದ್ದರೆ 76509 ಕೋಟಿ ಕೊಡಲು ಸಾಧ್ಯವಿತ್ತೆ ಎಂದು ಪ್ರಶ್ನಿಸಿದರು.