ಮನೆಗೆ ಶಾಂತಿ ಪೂಜೆ ಮಾಡಲೆಂದು ಬಂದ ವ್ಯಕ್ತಿ ತನ್ನಲ್ಲಿ 300 ಕೋಟಿ ಅಮರಿಕನ್ ಡಾಲರ್ ಇದೆ, ತಾನು ಚಿನ್ನದ ವ್ಯವಹಾರ ಮಾಡುತ್ತಿರುವುದಾಗಿ ಮಹಿಳೆಯನ್ನು ನಂಬಿಸಿ ಒಂದು ಕೋಟಿ ರೂಪಾಯಿಗೂ ಅಧಿಕ ಹಣ ಪಡೆದು ವಂಚಿಸಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.
ಕೆ.ಆರ್.ಪುರಂನ ಕಿತ್ತಗನೂರು ಮುಖ್ಯರಸ್ತೆಯ ಸಾಯಿ ಲೇಔಟ್‌ನ ನಿವಾಸಿ ಅಮರಾವತಿ ಎಂಬ ಮಹಿಳೆಗೆ ಚಿನ್ನದ ಬಿಸ್ಕೆಟ್‌ಗಳನ್ನು ತೋರಿಸಿ ಹಣ ವಂಚಿಸಿದ ಆರೋಪದಡಿ ಗೋಪಾಲಕೃಷ್ಣ, ರಾಕೇಶ್ ರೆಡ್ಡಿ, ರೂಪಾ ಹಾಗೂ ಯಶವಂತ್ ಕುಮಾರ್ ಎಂಬವರ ವಿರುದ್ಧ ಸಿಸಿಬಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಕಳೆದ ವರ್ಷ ಅಮರಾವತಿ ತಮ್ಮ ಮನೆಯಲ್ಲಿ ಶಾಂತಿ ಪೂಜೆಗಾಗಿ ಗೋಪಾಲಕೃಷ್ಣನನ್ನು ಕರೆಸಿದ್ದರು. ಪೂಜೆ ಮುಗಿದ ಎರಡು ದಿನಗಳ ಬಳಿಕ ರಾಕೇಶ್ ರೆಡ್ಡಿ ಯೊಂದಿಗೆ ಅಮರಾವತಿಯವರ ಮನೆಗೆ ಬಂದಿದ್ದ ಗೋಪಾಲಕೃಷ್ಣ, ,ನಮ್ಮ ಬಳಿ 300 ಕೋಟಿ ಅಮೆರಿಕನ್ ಡಾಲರ್ ಇದೆ. ಪ್ರತಿ ಗ್ರಾಂ ಚಿನ್ನವನ್ನು 4 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತೇವೆ ಎಂದು ನಂಬಿಸಿದ್ದರು.
ಅಮರಾವತಿ ಮತ್ತವರ ಮಗನ ಸಮ್ಮುಖ ಗೋಲ್ಡ್ ಬಿಸ್ಕೆಟ್ ಅನ್ನು ಜ್ಯುವೆಲ್ಲರಿ ಶಾಪ್‌ಗೆ ಮಾರಾಟ ಮಾಡಿ ಹಣ ಪಡೆಯುವ ಮೂಲಕ ನಂಬಿಕೆ ಗಳಿಸಿದ್ದರು. ಬಳಿಕ ಚಿನ್ನ ನೀಡುವುದಾಗಿ ಅಮರಾವತಿ ಮತ್ತು ಅವರ ಪರಿಚಿತರಿಂದ ಕೋಟಿ ರೂಪಾಯಿಗೂ ಅಧಿಕ ಹಣ ಪಡೆದುಕೊಂಡಿದ್ದರು. ಹಣ ಪಡೆದ ಬಳಿಕವೂ ಚಿನ್ನ ನೀಡದಿ ದ್ದಾಗ ಪ್ರಶ್ನಿಸಿದರೆ, ನಮ್ಮ ಚಿನ್ನ ಕಸ್ಟಮ್ಸ್ ಅಧಿಕಾರಿಗಳ ಬಳಿ ಸಿಲುಕಿ ಹಾಕಿಕೊಂಡಿದೆ ಎಂದು ನೆಪ ಹೇಳಿದ್ದರು. ಕೆಲವು ಸಮಯ ಕಳೆದರೂ ಚಿನ್ನ ನೀಡದೆ, ಹಣ ವನ್ನೂ ಕೊಡದೆ ವಂಚಿಸಿರುವ ಆರೋಪಿಗಳ ವಿರುದ್ಧ ಅಮರಾವತಿ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.