ಕೊಡಗಿನ ಪೊನ್ನಂಪೇಟೆ ತಾಲೂಕಿನ ಅತ್ತೂರು ಗ್ರಾಮದ ಚೆನ್ನಂಗೊಲ್ಲಿಯಲ್ಲಿ ಆಟವಾಡಲೆಂದು ಕೆರೆಗೆ ಹಾರಿದ ಬಾಲಕಿಯೊಬ್ಬಳು ಮೇಲಕ್ಕೆ ಬರಲಾಗದೆ ಕೆಸರಿನಲ್ಲಿ ಸಿಲುಕಿ ಮೃತಪಟ್ಟಿದ್ದಾಳೆ.
ಕಾಫಿ ಬೆಳೆಗಾರ ಕೆ.ಕೆ.ತಿಮ್ಮಯ್ಯ ಎಂಬವರಿಗೆ ಸೇರಿದ ಕೆರೆಯಲ್ಲಿ ಈ ದುರ್ಘಟನೆ ನಡೆದಿದೆ. ತೋಟದ ಕಾರ್ಮಿಕರಾಗಿರುವ ಭವಾನಿ ಎಂಬವರ 9 ವರ್ಷದ ಮಗಳು ಸಹಪಾಠಿಗಳೊಂದಿಗೆ ಕೆರೆಯ ಬದಿಯಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಈಕೆ ಹಾಗೂ ಇನ್ನಿಬ್ಬರು ಮಕ್ಕಳು ಕೆರೆಗೆ ಹಾರಿದ್ದರು. ಕೆರೆಯಲ್ಲಿ ನೀರು ಬತ್ತಿ ಕೆಸರು ತುಂಬಿದ್ದರಿಂದ ಮೂವರು ಅದರೊಳಗೆ ಸಿಲುಕಿ ಕಿರುಚಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕಾರ್ಮಿಕರು ಇಬ್ಬರನ್ನು ರಕ್ಷಿಸಿದ್ದರು. ಬಾಲಕಿಯನ್ನು ಕೆಸರಿಂದ ಹೊರಕ್ಕೆ ತರುವ ಪ್ರಯತ್ನ ವಿಫಲವಾಗಿ ಆಕೆ ಅಸುನೀಗಿದ್ದಾಳೆ ಎನ್ನಲಾಗಿದೆ.
ಮೃತ ಬಾಲಕಿ ಚೆನ್ನಂಗೊಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ. ಗೋಣಿಕೊಪ್ಪ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.