ಮಳವಳ್ಳಿ ತಾಲೂಕಿನ ಟಿ.ಕಾಗೇಪುರ ಗ್ರಾಮದ ವಸತಿ ಶಾಲೆಯಲ್ಲಿ ಫುಡ್ ಪಾಯಿಸನ್‌ಗೆ ವಿದ್ಯಾರ್ಥಿಯೊಬ್ಬ ಬಲಿಯಾಗಿದ್ದು, 29 ವಿದ್ಯಾರ್ಥಿಗಳು ಅಸ್ವಸ್ಥರಾಗಿ ದ್ದಾರೆ. ಅರುಣಾಚಲ ಪ್ರದೇಶ ಮೂಲದ ಕೆರ್ಲಾಂಗ್ (13) ಮೃತ ವಿದ್ಯಾರ್ಥಿ.
ಶುಕ್ರವಾರ ರಾತ್ರಿ ಮಳವಳ್ಳಿ ಮೂಲದ ಉದ್ಯಮಿಯೊಬ್ಬರು ಹೋಳಿ ಹಬ್ಬಕ್ಕೆ ಊಟ ಮಾಡಿಸಿದ್ದು, ಉಳಿದ ಊಟವನ್ನು ತಂದು ಮಕ್ಕಳಿಗೆ ನೀಡಲಾಗಿತ್ತು. ಊಟ ಸೇವಿಸಿದ ಕೆಲವು ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿತ್ತು. ಆದರೂ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸೇರಿಸದೆ ಶಾಲಾ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರಿತ್ತು. ಇಂದು (ಭಾನುವಾರ) ಬೆಳಗ್ಗೆ ಬಾಲಕ ಮೃತಪಟ್ಟಿದ್ದು, ಅಸ್ವಸ್ಥಗೊಂಡ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಸ್ವಸ್ಥ 27 ವಿದ್ಯಾರ್ಥಿಗಳಿಗೆ ಮಳವಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವು ವಿದ್ಯಾರ್ಥಿಗಳನ್ನು ಮಿಮ್ಸ್ ಆಸ್ಪತ್ರೆಗೆ ಕಳಿಸಲಾಗಿದೆ.
ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ಡಿಎಚ್‌ಓ ಮೋಹನ್ ಭೇಟಿ ನೀಡಿ, ಮಕ್ಕಳ ಆರೋಗ್ಯ ಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದರು. ಉದ್ಯಮಿ ಹೋಳಿ ಹಬ್ಬ ಪ್ರಯುಕ್ತ ಶುಕ್ರವಾರ ರಾತ್ರಿ ಊಟ ಮಾಡಿಸಿದ್ದರು. ವಿದ್ಯಾರ್ಥಿಗಳಿಗೂ ಅದೇ ಊಟ ವಿತರಿಸಲಾಗಿದೆ. ಶನಿವಾರ ಮಧ್ಯಾಹ್ನ ವಿದ್ಯಾರ್ಥಿ ಗಳಿಗೆ ವಾಂತಿ, ಬೇಧಿ ಶುರುವಾಗಿದೆ. ವೈದ್ಯರು ಚಿಕಿತ್ಸೆ ನೀಡಿ ಬಂದಿದ್ದರು. ಚೆನ್ನಾಗಿ ಓಡಾಡಿಕೊಂಡಿದ್ದ ವಿದ್ಯಾರ್ಥಿಯೊಬ್ಬ ಏಕಾಏಕಿ ಮೃತಪಟ್ಟಿದ್ದಾನೆ. ಪೋಸ್ಟ್ ಮಾರ್ಟಮ್‌ನಲ್ಲಿ ಸಾವಿಗೆ ಕಾರಣ ನಿಖರವಾಗಿ ತಿಳಿಯಲಿದೆ ಎಂದು ಹೇಳಿದ್ದಾರೆ.
ಮೇಘಾಲಯ ರಾಜ್ಯದ ಬುಡಕಟ್ಟು ಮಕ್ಕಳನ್ನು ಇಟ್ಟುಕೊಳ್ಳಲು ಜಿಲ್ಲಾಡಳಿತದಿಂದ ಯಾವುದೇ ಅನುಮತಿ ಪಡೆಯದೆ ಆಕ್ರಮವಾಗಿ ವಿದ್ಯಾರ್ಥಿಗಳನ್ನು ವಿದ್ಯಾ ಸಂಸ್ಥೆಯು ಇಟ್ಟುಕೊಂಡಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಬಗ್ಗೆ ಮಾಹಿತಿ ಇದ್ದರೂ ಶಿಕ್ಷಣ ಇಲಾಖೆ ಹಾಗೂ ತಾಲೂಕು ಆಡಳಿತ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೂಡ ಇದೆ.