Menu
12

ನಗುವನ್ನು ನಗ್ನಗೊಳಿಸಿದ ಸ್ಟ್ಯಾಂಡಪ್ ಕಾಮಿಡಿ!

ಪ್ರಾಚೀನ ಕಾಲದಿಂದಲೂ ಹಾಸ್ಯರಸಕ್ಕೆ ಅದರದ್ದೇ ಆದ  ಮಹತ್ವ. ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಒಂಬತ್ತು ರಸಗಳಿದ್ದು ಇದು ಶೃಂಗಾರ ರಸದಷ್ಟೇ ಪ್ರಮುಖ ಸ್ಥಾನ ಪಡೆದಿದೆ. ಕ್ರಿ.ಪೂದಲ್ಲಿ ಗ್ರೀಕ್ ನಾಟಕಗಳಲ್ಲಿ ಕೇವಲ ಟ್ರ್ಯಾಜಿಡಿ ಇದ್ದು ಜನರನ್ನು ನಗಿಸುವ ಉದ್ದೇಶದಿಂದ ಕಾಮಿಡಿ ಪಾತ್ರಗಳನ್ನು ಸೃಷ್ಟಿಸುವುದಕ್ಕೆ ಪ್ರಾರಂಭಿಸಿದರು. ತದನಂತರ ಕ್ರಿ.ಶ ೧೭-೧೮ನೇ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಹಾಸ್ಯ ನಾಟಕಗಳು ಬೆಳಕು ಕಾಣುವುದಕ್ಕೆ ತೊಡಗಿದವು. ತದನಂತರ ಉದ್ದೇಶಪೂರ್ವಕವಾಗಿ ಹಾಸ್ಯ ಪಾತ್ರಗಳ ಮೂಲಕವೇ ಪ್ರಮುಖ ವಿಷಯಗಳನ್ನು ಹೇಳಿಸುವ ಪ್ರಯತ್ನ ಮಾಡಿದರು. ವರ್ಡ್ಸ್‌ವರ್ತ್ ನಾಟಕಗಳಲ್ಲಿ ಸೀರಿಯಸ್ ವಿಚಾರಗಳನ್ನು ಹೇಳಿಕೊಂಡು ಹೋಗುವಾಗಲೂ ಹಾಸ್ಯ ಪಾತ್ರಗಳು ಅಲ್ಲಲ್ಲಿ ಬಂದು ಹೋಗುತ್ತವೆ.

ಭಾರತೀಯ ಜನಪದರು ಹಾಸ್ಯಕ್ಕೆ ಪ್ರಮುಖ ಸ್ಥಾನವನ್ನೇ ನೀಡಿದ್ದಾರೆ. ಜಾತ್ರೆ ಮತ್ತು ಉತ್ಸವಗಳಲ್ಲಿ ಯಾಸ ಅಥವಾ ವೇಷಗಳನ್ನು ಹಾಕಿ ಜನರನ್ನು ರಂಜಿಸುತ್ತಿ ದ್ದರು. ನಾಟಕಗಳಲ್ಲಿ ಕೋಡಂಗಿ ಅಥವಾ ಕರಡಿ ವೇಷದ ಪಾತ್ರಗಳ ಮೂಲಕ ಜನರನ್ನು ಹಾಸ್ಯದ ಕಡಲಲ್ಲಿ ತೇಲಿಸುತ್ತಿದ್ದರು. ಭಾರತದ ಮಹಾಕಾವ್ಯಗಳಲ್ಲಿ ಅಷ್ಟಾದಶವರ್ಣನೆ ಬರುತ್ತಿದ್ದರಿಂದ ಅಲ್ಲಿ ಹಾಸ್ಯವೂ ಒಂದು ಭಾಗವಾಗಿ ಬರೆಯಲ್ಪಡುತ್ತಿತ್ತು. ರಾಜಮಹಾರಾಜರ ಬಳಿ ಇದ್ದ ಹಾಸ್ಯ ಚಕ್ರವರ್ತಿಗಳು ರಾಜರಿಗೆ ಸಂತೋಷಪಡುವುದಕ್ಕಾಗಿಯೇ ಹಲವಾರು ರೂಪಕದ ಕಥೆಗಳನ್ನು ಹೇಳಿ ನಗಿಸುತ್ತಿದ್ದರು, ಇಲ್ಲಾ ವೇಷಗಳನ್ನು ಹಾಕಿಕೊಂಡು ಬಂದು ಮಹಾರಾಜರಿಗೆ ನಗು ತರಿಸುತ್ತಿದ್ದರು. ಇದಕ್ಕೆ ಉದಾಹಾರಣೆ ಎಂದರೆ ಕೃಷ್ಣದೇವರಾಯನ ಬಳಿ ಇದ್ದ ತೆನಾಲಿ ರಾಮಕೃಷ್ಣ. ಎಂಥ ಗಂಭೀರ ಸಂದರ್ಭವಿದ್ದರೂ, ಅಲ್ಲಿ ನಗುವಿನ ಬುಗ್ಗೆ ಉಕ್ಕಿಸುತ್ತಿದ್ದ ರಾಮಕೃಷ್ಣ ಸಾಕ್ಷಾತ್ ಕಾಳಿ ಮಾತೆಯನ್ನು ನಗಿಸಿದ್ದ ಎಂಬ ಕಥೆ ಇದೆ. ಅವನ ಹಲವಾರು ಕತೆಗಳು ನಮ್ಮ ನಡುವೆ ಇವತ್ತಿಗೂ ಚಾಲ್ತಿಯಲ್ಲಿವೆ. ಅವನ ಜೀವನದುದ್ದಕ್ಕೂ ಜನರನ್ನು ರಾಜರನ್ನು ನಗಿಸಿಕೊಂಡು ಬಂದವನು.

ಸಾಹಿತ್ಯದಲ್ಲಿ ಅಲ್ಲಲ್ಲಿ ಹಾಸ್ಯ ಬಳಸಿಕೊಂಡು ಬರುತ್ತಿದ್ದ ಲೇಖಕರು, ಕೊನೆಗೆ ಹಾಸ್ಯ ನಾಟಕ ಬರೆಯುವ ಪರಂಪರೆ ಹುಟ್ಟು ಹಾಕುತ್ತಾರೆ. ಲಲಿತ ಪ್ರಬಂಧಗಳು, ಹಾಸ್ಯ ಕವನಗಳನ್ನು ಬರೆಯುವ ವರ್ಗ ಸೃಷ್ಟಿಯಾದ ಮೇಲೆ ಅದನ್ನು ಓದುವ ಸಹೃದಯರು ಹೆಚ್ಚಾಗುತ್ತಿದ್ದಾರೆ. ನಾಟಕದ ಮುಂದುವರಿದ ಭಾಗವಾಗಿ ಮನುಷ್ಯ ಸಿನಿಮಾ ಆವಿಷ್ಕಾರಗಳನ್ನು ಮಾಡಿಕೊಂಡ ಮೇಲೆ ಸಿನಿಮಾದಲ್ಲಿ ಹಾಸ್ಯ ಪಾತ್ರಗಳನ್ನು ವಿಶೇಷವಾಗಿ ಸೃಷ್ಟಿಸುವ ಕೆಲಸವನ್ನು ನಿರ್ದೇಶಕರು ಮಾಡಿಕೊಂಡು ಬಂದರು. ಪಾಶ್ಚಾತ್ಯ ಸಿನಿಮಾ ರಂಗದಲ್ಲಿ ಇಂಗ್ಲೆಂಡಿನ ಚಾರ್ಲಿ ಚಾಪ್ಲಿನ್ ಸಂಭಾಷಣೆಯೇ ಇಲ್ಲದೆ, ಕೇವಲ ಅಂಗಾಭಿನಯದ ಮೂಲಕ ವಿಶ್ವದ ಜನರನ್ನು ನಗಿಸಿ ಕೊಂಡು ಬಂದವನು. ಆದರೆ, ಅವನ ಜೀವನವೇ ಅತ್ಯಂತ ದುಃಖಕರವಾಗಿತ್ತು ಎನ್ನುವುದು ಬೇರೆ ಮಾತು. ತನ್ನ ಇಡೀ ಜೀವನವನ್ನು ಜನರನ್ನು ನಗಿಸುವುದರಲ್ಲಿ ಕಳೆದ ಮಹಾನ್ ವ್ಯಕ್ತಿ ಚಾಪ್ಲಿನ್. ತದನಂತರ ಮಿಸ್ಟರ್ ಬೀನ್ ಕೂಡಾ ಜಗತ್ತಿನ ಅದೆಷ್ಟೋ ಜನರ ನೋವು ಮರೆಸಿ ನಗುವಂತೆ ಮಾಡಿದವನು. ಇವತ್ತಿಗೂ ಜನ ಇವನ ವಿಡಿಯೋಗಳನ್ನು ನೋಡುತ್ತಿದ್ದಾರೆ.

ಕನ್ನಡ ಸಿನಿಮಾ ರಂಗದಲ್ಲಿ ನರಸಿಂಹರಾಜು ನಟನೆಯ ಮೂಲಕವೇ ನಗುವಿನ ಕಚಗುಳಿ ಇಡುತ್ತಿದ್ದವರು. ತಮಿಳಿನ ವಡಿವೇಲು, ತೆಲುಗಿನ ಬ್ರಹ್ಮಾನಂದಂ ತಮ್ಮ ನೈಜ ನಟನೆಯ ಮೂಲಕ ನಗುವನ್ನು ತರಿಸುತ್ತಾರೆ. ಇತ್ತೀಚೆಗೆ ಉದ್ದೇಶ ಪೂರ್ವಕವಾಗಿ ಸಿನಿಮಾದಲ್ಲಿ ಕಾಮಿಡಿ ಪಾತ್ರಗಳನ್ನು ತುರುಕಿ ಅಶ್ಲೀಲ ಸಂಭಾಷಣೆ ಅಥವಾ ಡಬಲ್ ಮೀನಿಂಗ್ ಮಾತುಗಳನ್ನು ಹೇಳಿಸುವುದರಿಂದ ಜನ ಕೃತಕ ಹಾಸ್ಯಗಳನ್ನು ತಿರಸ್ಕರಿಸುತ್ತಿದ್ದಾರೆ. ಹಾಸ್ಯ ನಟರು ಮತ್ತು ಹಾಸ್ಯ ಲೇಖಕರು ತಮ್ಮ ಮೊನಚುತನ ಕಳೆದುಕೊಳ್ಳುತ್ತಿದ್ದಾರೆ.

ಸಾಹಿತಿ ಎಂ.ಎಸ್.ನರಸಿಂಹಮೂರ್ತಿ ತಮ್ಮ ಬರವಣಿಗೆ ಮತ್ತು ಸಂಭಾಷಣೆಯ ಮೂಲಕ ಜನರನ್ನು ನಗಿಸುತ್ತಿದ್ದರು. ಜೊತೆಗೆ ಹಾಸ್ಯಭರಿತ ಟಿವಿ ಸೀರಿಯಲ್‌ ಗಳನ್ನು ನಿರ್ಮಿಸಿ ಜನರ ಮನಸ್ಸಿಗೆ ಹತ್ತಿರವಾಗಿದ್ದರು. ಈಗ ಹಾಸ್ಯ ಸೀರಿಯಲ್‌ಗಳು ಬಂದರೂ ಜನ ಅವುಗಳನ್ನು ಹತ್ತು ನಿಮಿಷ ನೋಡುವುದೇ ಹೆಚ್ಚು. ಕಾಮಿಡಿ ಚಾನಲ್‌ಗಳು ಬಂದಿವೆ. ಜನರು ಬೇಜಾರಾದಾಗ ಅವುಗಳನ್ನು ಟ್ಯೂನ್ ಮಾಡಿದರೆ ಅದರಲ್ಲಿ ಎಲ್ಲಾ ಮೀನಿಂಗ್‌ಲೆಸ್ ವಿಚಾರಗಳಿರುವ ವಿಡಿಯೋಗಳೇ ಬರುತ್ತಿರು ತ್ತವೆ. ಇನ್ನು ರಿಯಾಲಿಟಿ ಶೋ ನಡೆಸುವ ಖಾಸಗಿ ಚಾನಲ್‌ಗಳು ಕೇವಲ ಅಶ್ಲೀಲ ಮಾತುಗಳು ಮತ್ತು ಮೀನಿಂಗ್ ಲೆಸ್ ಸಂಭಾಷಣೆಗಳ ಮೂಲಕ ಜನರನ್ನು ನಗಿಸಬಹುದು ಎಂಬ ಹುಚ್ಚುತನಕ್ಕೆ ಒಳಗಾಗಿ ರಾಜ್ಯದ ಮೂಲೆ ಮೂಲೆಯಿಂದ ಎಳೆ ನಿಂಬೆಕಾಯಿನಂತಹ ಹಾಗೂ ಎಲೆ ಮರೆಕಾಯಿಯಂತೆ ಇದ್ದ ಹಾಸ್ಯ ನಟರನ್ನು ಕರೆದು ಅವರು ನಟಿಸಿದ್ದ ನಟನೆ, ಅವರು ಮಾತನಾಡಿದ್ದ ಮಾತು ಅಂತ ಲಂಗು ಲಗಾಮು ಕಿತ್ತುಕೊಂಡು ಕುಣಿಯುತ್ತಿರುವಾಗ ಜನರು ಇದೊಂದು ವ್ಯರ್ಥ ಕಾರ್ಯಕ್ರಮ ಎಂದು ಹಣೆಬರಹ ಬರೆದು ಬಿಟ್ಟಿದ್ದಾರೆ.

ಹಿಂದಿಯ ಸೋನಿ ಚಾನಲ್‌ನಲ್ಲಿ ಬರುವ ಕಪಿಲ್ ಶರ್ಮ ಕಾಮಿಡಿ ಮೊದಲ ಕಂತಿನ ಎಪಿಸೋಡ್‌ಗಳು ನೋಡುವಂತಿದ್ದವು. ಎರಡನೆಯದು ರಾಯರ ಕುದುರೆ ಕತ್ತೆಯಾಯ್ತು. ನಾವು ಯಾವ ವರ್ಗವನ್ನು ನಗಿಸಬೇಕು ಎನ್ನುವ ಥೀಮ್ ಪ್ಲಾನ್‌ಗಳನ್ನು ಮಾಡಿಕೊಂಡು ಟಿವಿ ಚಾನಲ್‌ಗಳು ಕಾರ್ಯಕ್ರಮ ರೂಪಿಸುತ್ತವೆ. ಆದರೆ, ಅದು ಜನರಿಗೆ ತಲುಪುವುದೇ ಇಲ್ಲ. ಅದಕ್ಕೆ ಕಾರಣ ಆ ಕಾರ್ಯಕ್ರಮಕ್ಕೆ ಬಳಸುವ ನಟರು ಮತ್ತು ಅವರ ಮಾತಿನ ಧಾಟಿಗಳು ಜನರಿಗೆ ರೇಜಿಗೆ ಹಿಡಿಸುತ್ತವೆ. ಕನ್ನಡದಲ್ಲಿ ಪ್ರೊ.ಕೃಷ್ಣೇಗೌಡ, ಹಿರೇಮಗಳೂರು ಕಣ್ಣನ್, ಪ್ರಾಣೇಶ್, ರಿಚರ್ಡ್ ಲೂಯಿಸ್, ನರಸಿಂಹಮೂರ್ತಿ, ಡುಂಡಿರಾಜ್ ಅವರ ಹಾಸ್ಯ ಚಟಾಕಿಗಳು ಜನರ ಮನಸ್ಸಿಗೆ ಹತ್ತಿರವಾದಾಗ ಹಾಸ್ಯಕ್ಕೆ ಒಂದು ಹೊಸ ಮಾರ್ಗ ರೂಪಗೊಂಡಿತು ಎಂದು ಜನರು ಭಾವಿಸಿದ್ದರು. ಎಲ್ಲಾ ಕಡೆಯೂ ಇವರ ಹಾಸ್ಯ ಕಾರ್ಯಕ್ರಮಗಳಿಗೆ ಅತೀ ಬೇಡಿಕೆಯೂ ಉಂಟಾಯಿತು. ಕೃಷ್ಣೇಗೌಡರಂತೂ ಪಾಠ ಮಾಡುವುದನ್ನು ಬಿಟ್ಟು ಫುಲ್‌ಟೈಮ್ ಜನರನ್ನು ನಗಿಸುವ ವೃತ್ತಿ ಆರಂಭಿಸಿದರು. ಇವತ್ತಿಗೂ ಅವರ ಹಾಸ್ಯಕ್ಕೆ ಮತ್ತು ಅವರ ಅನುಭವದ ಕಥೆಗಳ ಮೂಲಕ ಹೇಳುವ ಸಂದೇಶಕ್ಕೆ ಅಷ್ಟೇ ಮಹತ್ವವಿದೆ. ಉತ್ತರ ಕರ್ನಾಟಕ ಭಾಗದ ಹಾಸ್ಯಬ್ರಹ್ಮ ಪ್ರಾಣೇಶ್ ನಗಿಸುವು ದನ್ನೇ ವೃತ್ತಿ ಮಾಡಿಕೊಂಡಿದ್ದರು. ಇದರಿಂದಲೇ ಅವರು ದೇಶ ವಿದೇಶಗಳನ್ನು ಸುತ್ತಿ ಅಲ್ಲಿಯೂ ಕಾರ್ಯಕ್ರಮ ನೀಡಿ ಕನ್ನಡತನವನ್ನು ಮತ್ತು ಅವರ ಹಾಸ್ಯದ ರಸವನ್ನು ಜನರಿಗೆ ಉಣಬಡಿಸಿದ್ದರು. ಇದನ್ನೇ ನಂಬಿಕೊಂಡು ಹೊರಟ ಹಲವರು ಮೊದಲು ಗೆದ್ದರು ಅನಂತರ ಸೋತರು.

ಇಂದಿಗೂ ಹಾಸ್ಯ ಸಂಜೆಗಳಿಗೆ ಬೇಡಿಕೆ ಇದ್ದರೂ ಕಾರ್ಯಕ್ರಮಗಳಿಗೆ ಜನ ಬರದಂತೆ ಆಗಿದೆ. ಕಾರಣ ಹಾಸ್ಯವನ್ನು ಮಾಡುವವರ ವಿಡಿಯೋಗಳು ಯ್ಯೂಟೂಬ್, ಫೇಸ್‌ಬುಕ್, ಇನ್‌ಸ್ಟಾ ಹಾಗೂ ಟಿವಿ ಚಾನಲ್‌ಗಳಲ್ಲಿ ಪ್ರಸಾರವಾಗುವುದರಿಂದ ಜನರು ಹಾಸ್ಯ ಸಂಜೆಗಳನ್ನು ಅಟೆಂಡ್ ಮಾಡುವುದಕ್ಕೆ ಮನಸು ಮಾಡುತ್ತಿಲ್ಲ. ಇದರಿಂದ ಹಾಸ್ಯ ಮಾಡುವವರ ಬದುಕು ಒಂದು ಹಂತಕ್ಕೆ ನಿಂತುಬಿಟ್ಟಿದೆ. ಟಿಆರ್‌ಪಿ, ವೀವರ್‍ಸ್ ಕಲ್ಪನೆಗಳು ಸೃಷ್ಟಿಯಾದ ಮೇಲೆ ಹಾಸ್ಯ ಕೂಡಾ ಮಾರಾಟದ ವಸ್ತುವಾಗಿದೆ.

ಸ್ಟ್ಯಾಂಡಪ್ ಕಾಮಿಡಿ ಎನ್ನುವ ಪರಿಕಲ್ಪನೆ ಕರ್ನಾಟಕದಲ್ಲೂ ತನ್ನ ಬಾಹುವನ್ನು ಚಾಚಿಕೊಂಡಿದ್ದು ನೂರಾರು ರೂಪಾಯಿ ಹಣಕೊಟ್ಟು ಕತ್ತಲೆಯಲ್ಲಿ ಕೂತು ಕಾಮಿಡಿ ಮಾಡುವವನ ಮಾತಿಗೆ ನಕ್ಕು ಹಗುರಾಗುವ ಹಂತಕ್ಕೆ ಐಟಿ ಬಿಟಿ ಕಂಪನಿಯ ನೌಕರರು ಬಂದಿದ್ದಾರೆ. ಇವರಿಗೆ ಕೃಷ್ಣೇಗೌಡ ಅಥವಾ ಪ್ರಾಣೇಶರ ಕಾಮಿಡಿಗಳು ಇಷ್ಟವಾಗುವುದಿಲ್ಲ. ನಗುವಿನ ಮೂಲಕವೇ ಬದುಕಿನ ಪಾಠ ಹೇಳುತ್ತಾರಲ್ಲ ಆ ಕಾರಣಕ್ಕೆ. ಆದರೆ, ಸ್ಟ್ಯಾಂಡಪ್ ಕಾಮಿಡಿ ಮಾಡುವ ವ್ಯಕ್ತಿ ತನ್ನ ಜೀವನದ ಕೆಲವು ಸಂಗತಿಗಳನ್ನೇ ಅಶ್ಲೀಲವಾಗಿ ಅಥವಾ ವೈರುಧ್ಯವಾಗಿ ಹೇಳಿದರೆ ಈ ಅತೀ ಜ್ಞಾನದ ಅರೆ ಹುಚ್ಚು ಮಂದಿ ನಕ್ಕು ಚಪ್ಪಾಳೆ ತಟ್ಟುತ್ತಾರೆ. ಈ ಸ್ಟ್ಯಾಂಡಪ್ ಕಾಮಿಡಿ ಮೊದಲು ಭಾರತದಲ್ಲಿ ಹಿಂದಿಯಲ್ಲಿ ಕಾಣಿಸಿಕೊಂಡಿತು. ಈಗ ಕರ್ನಾಟಕದಲ್ಲಿ ಮನೆ ಮಾತಾಗಿದೆ.

ಸ್ಟ್ಯಾಂಡಪ್ ಕಾಮಿಡಿಯನ್ನು ಮಾಡುವ ವ್ಯಕ್ತಿಗಳ ತಲೆಯಲ್ಲಿ ಅದ್ಯಾವ ನವರಸಗಳು ಉದ್ಭವವಾಗುತ್ತವೋ ಗೊತ್ತಿಲ್ಲ. ಅಶ್ಲೀಲ ವಿಚಾರಗಳು, ಮಾತುಗಳು ಹೆಚ್ಚಾಗಿ ಬಳಕೆಯಾಗುತ್ತವೆ. ಅವನ್ಯಾರೊ ಒಬ್ಬ ಸೋಪಿನ ಬಗ್ಗೆ ಕಾಮಿಡಿ ಮಾಡಿದರೆ, ಇನ್ನೊಬ್ಬ ಹೆಣ್ಣು ಮಗಳು ಗಂಡು ನೋಡುವುದಕ್ಕೆ ಬಂದ ಹುಡುಗನ ಮುಖದ ಬಗ್ಗೆ ಮಾತನಾಡುತ್ತಾಳೆ. ಇನ್ನೊಬ್ಬ ತಂದೆಯ ಬಗ್ಗೆಯೇ ಕೆಟ್ಟದಾಗಿ ಹಾಸ್ಯ ಮಾಡುತ್ತಾನೆ. ಇತ್ತೀಚೆಗೊಬ್ಬ ಸ್ಟ್ಯಾಂಡಪ್ ಕಾಮಿಡಿಯನ್ ಆಟೋದ ಮೇಲೆ ತಂದೆ ತಾಯಿ ಯರ ಆಶೀರ್ವಾದ ಎಂದು ಬರೆಸಿಕೊಳ್ಳುತ್ತಾರೆ. ಅಂತಹ ಆಶೀರ್ವಾದ ನನಗೆ ಬೇಡ ಎನ್ನುತ್ತಾನೆ. ಅದಕ್ಕೆ ಅಲ್ಲಿದ್ದವರೆಲ್ಲ ಚಪ್ಪಾಳೆ ತಟ್ಟುತ್ತಾರೆ. ಬಿಎಂಡಬ್ಲ್ಯೂ ಕಾರಿನಲ್ಲಿ ಓಡಾಡುವರು ತಮ್ಮ ತಂದೆ ತಾಯಿಯನ್ನು ವೃದ್ಧಾಶ್ರಮಗಳಲ್ಲಿ ಬಿಡುತ್ತಿದ್ದಾರೆ. ಇದು ಆ ಕಾಮಿಡಿಯನ್‌ಗೆ ಅರ್ಥವಾಗಬೇಕು. ಆಟೋ ಓಡಿಸುವವನು ತಂದೆ ತಾಯಿಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಾನೆ. ಯುವ ಜನರೆನಿಸಿಕೊಂಡವರು ಯಾವ ಕಾರ್ಯಕ್ರಮದಲ್ಲಿ ಕುಳಿತು ಅನುಭವವನ್ನು ಕೇಳಬೇಕು ಎನ್ನುವ ಸಣ್ಣ ಸಾಮಾನ್ಯ ಜ್ಞಾನ ಇಲ್ಲದಿರುವುದಕ್ಕೆ ವಿಷಾದಿಸುತ್ತೇನೆ.

ಕತ್ತಲೆಯಲ್ಲಿ ಜನರನ್ನು ಕೂರಿಸಿ ಕಾಮಿಡಿ ಮಾಡುವ ಹುಡುಗರು ಯಾವುದಕ್ಕೂ ಕತ್ತರಿಯಾಕದೆ ಹಸಿ ಬಿಸಿ ಮಾತುಗಳನ್ನು ಪ್ರೇಕ್ಷಕರ ಕಿವಿಗೆ ತಲುಪಿಸುವಾಗ ಅದು ಅವರ ಮೇಲೆ ಯಾವ ಪರಿಣಾಮ ಬೀರುತ್ತದೆ ಎನ್ನುವುದನ್ನು ಯೋಚಿಸಬೇಕು. ಇಲ್ಲದಿದ್ದರೆ ನಿಮ್ಮ ವಲ್ಗರ್ ಕಾಮಿಡಿಗಳ ಕಾರ್ಯಕ್ರಮಗಳು ಆದಷ್ಟು ಬೇಗ ಸಮಾಧಿ ಸೇರುತ್ತವೆ. ಹಾಸ್ಯದ ವ್ಯಾಪ್ತಿಯನ್ನು ವಿಸ್ತರಿಸಿಕೊಳುವುದು ಸರಿ. ಆದರೆ ಅದು ನಮ್ಮ ಭಾಷಾ ಸಂಸ್ಕೃತಿಯನ್ನು ಮತ್ತು ನಾಡಿನ ಸಂಸ್ಕೃತಿಯನ್ನು ಕೆಡಿಸುವಂತೆ ಇರಬಾರದು. ಸ್ಟ್ಯಾಂಡಪ್ ಕಾಮಿಡಿಗಳು ನಗುವಿಗಿದ್ದ ಮಹತ್ವವನ್ನು ಹಾಳು ಮಾಡುವುದರ ಜೊತೆಗೆ ನಿಜವಾದ ಹಾಸ್ಯ ನಟರಿಗೆ ಮತ್ತು ಹಾಸ್ಯಸಂಜೆಯನ್ನು ನಡೆಸಿಕೊಡುತ್ತಿದ್ದ ವ್ಯಕ್ತಿಗಳಿಗೆ ಅಡ್ಡಗಾಲು ಹಾಕುತ್ತಿವೆ.

ನಗುವುದು ಸಹಜ ಧರ್ಮ ನಗಿಸುವುದು ಪರಧರ್ಮ ಎನ್ನುವುದೇನೋ ಸರಿ. ಆದರೆ ನಗಿಸುವುದಕ್ಕೆ ಆಯ್ಕೆ ಮಾಡಿಕೊಳ್ಳುವ ವಿಷಯಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂತಿರಬೇಕು. ಮೊಬೈಲ್ ಬಂದ ಮೇಲೆ ಜನಕ್ಕೆ ಇಪ್ಪತ್ನಾಲ್ಕು ಗಂಟೆಗಳು ಸಾಕಾಗುತ್ತಿಲ್ಲ. ಅದರಲ್ಲಿ ಟ್ರೋಲ್ ಪೇಜ್‌ಗಳು ಕೂಡ ಜನರನ್ನು ನಗಿಸುವ ಪ್ರಯತ್ನ ಮಾಡುತ್ತಿವೆ. ಹಾಗಂತ ಅವು ಸಭ್ಯತೆಯ ವ್ಯಾಪ್ತಿಯಲ್ಲಿ ಇಲ್ಲವೇ ಇಲ್ಲ. ಸ್ಟ್ಯಾಂಡಪ್ ಕಾಮಿಡಿಗಳು ಮಾಡುವ ಅಶ್ಲೀಲ ಹಾದಿಯನ್ನೇ ಅವು ಹಿಡಿದಿವೆ. ಯಾರಿಗೋ ಬುದ್ಧಿ ಹೇಳುವ ತವಕದಲ್ಲಿ ನಾವೇನು ಮಾಡುತ್ತಿzವೆಂಬ ಸಣ್ಣ ಪ್ರಜ್ಞೆ ಇದ್ದರೆ ಹಾಸ್ಯವೂ ರುಚಿಸುತ್ತದೆ. ನಾಟಕ, ಸಿನಿಮಾ, ಕಾವ್ಯ ಯಾವುದರ ಮೂಲಕವಾದರೂ ಹಾಸ್ಯದ ಹೊನಲನ್ನು ತರಬಹುದು. ಅದರಲ್ಲಿ ನೆನೆಯುವ ಮಂದಿ ಎಷ್ಟು ಸಂತೋಷಪಟ್ಟರು ಹಾಗೂ ಸಂದೇಶ ಹೊತ್ತುಕೊಂಡು ಹೋದರು ಎನ್ನುವುದು ಮುಖ್ಯವಾಗುತ್ತದೆ. ಇಲ್ಲದಿದ್ದರೆ ನಗುವೇ ಬೆತ್ತಲಾಗುವ ಸಾಧ್ಯತೆ ಇದೆ. ಮನುಷ್ಯ ಮನಸ್ಸಿಗೆ ತೊಟ್ಟುಕೊಂಡಿರುವ ನಗುವಿನ ಉಡುಪನ್ನು ಬಿಚ್ಚಿ ಹಾಕುತ್ತಿರುವ ಸ್ಟ್ಯಾಂಡಪ್ ಕಾಮಿಡಿ ಕಲ್ಚರ್ ಬದಲಾಗಬೇಕು. ಮೂಲ ಹಾಸ್ಯಗಳು ಜನರನ್ನು ರಂಜಿಸುವಂತಾಗಲಿ.

– ಹಳ್ಳಿವೆಂಕಟೇಶ್
ಲೇಖಕ, ಉಪನ್ಯಾಸಕ
ಮೊ: 9535723673   

Related Posts

Leave a Reply

Your email address will not be published. Required fields are marked *