ನೆಮ್ಮದಿಯನ್ನು ಮಾರುಕಟ್ಟೆಯಲ್ಲಿ ಕೊಂಡುಕೊಳ್ಳಲು ಆಗುವುದಿಲ್ಲ. ಅದು ನಮ್ಮೊಳಗೇ ಇರುತ್ತದೆ. ಅದನ್ನು ಕಂಡುಕೊಳ್ಳಬೇಕಷ್ಟೆ, ನೆಮ್ಮದಿಯನ್ನು ಗುರುತಿಸುವುದರಲ್ಲಿ ಸಫಲವಾದರೆ ಸಂತೋಷ, ಅದರೊಟ್ಟಿಗೆ ಕುಣಿಕುಣಿಯುತ್ತ ನಮ್ಮನ್ನು ಅಪ್ಪಿಕೊಳ್ಳುವುದು. ಅಡಗಿರುವ ನೆಮ್ಮದಿ ಕಂಡುಕೊಳ್ಳುವ ಬಗೆ ತಿಳಿದುಕೊಂಡರೆ ಕಷ್ಟಕಾಲದಲ್ಲೂ ಸುಖಿಗಳಾಗಿ ಇರಲಿಕ್ಕೆ ಸಾಧ್ಯ. ನೆಮ್ಮದಿ ಎಂದರೆ ಏನು ಎಂಬ ಪ್ರಶ್ನೆ ಒಮ್ಮೊಮ್ಮೆ ದುಃಖಿತರಾದಾಗ ನಮಗೆ ಕಾಡಬಹುದು. ನಮ್ಮೊಳಗಿನ ಭಾವನೆಗಳ ಏರಿಳಿತಗಳನ್ನು ಸರಿತೂಗಿಸಿಕೊಂಡು ಸಂತೋಷದಿಂದ ಇರುವುದೇ ನೆಮ್ಮದಿ.
ನೆಮ್ಮದಿಗೆ ಮಿತಿ ಇರುತ್ತದೆ. ಆ ಮಿತಿಯೊಳಗೆ ಇರಬೇಕು. ಇದರ ವ್ಯಾಪ್ತಿಯ ಗಡಿ ಆಚೆ ದಾಟಿದರೆ ಮನುಷ್ಯ ತಂತಾನೆ ನೆಮ್ಮದಿ ಕಳೆದುಕೊಂಡು ಕಷ್ಟಕ್ಕೆ ಸಿಲುಕುತ್ತಾನೆ. ಆಸೆ ದುರಾಸೆಗಳು ನೆಮ್ಮದಿಯ ಕಡುವೈರಿಗಳು. ಇವುಗಳನ್ನು ಗೆದ್ದರೆ ನೆಮ್ಮದಿ ಸದಾ ನಮ್ಮೊಂದಿಗೆ ಇರುವುದು. ಯಾಕಾದ್ರೂ ಇದನ್ನು ಮಾಡಿದೆನೋ ಇದರಿಂದ ನನ್ನ ನೆಮ್ಮದಿಯೇ ಹಾಳಾಯಿತು ಎನ್ನುವ ಮಾತುಗಳನ್ನು ಬಂಧುಗಳಲ್ಲಿ, ಸ್ನೇಹಿತರಲ್ಲಿ ಕೇಳುತ್ತಿರುತ್ತೇವೆ. ನಾವೂ ಮನಸ್ಸಿಗೆ ನೋವುಂಟಾದ ಸಂದರ್ಭಗಳಲ್ಲಿ ನೆಮ್ಮದಿ ಹಾಳಾಗಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿರುತ್ತೇವೆ. ಯೋಚನಾ ಶಕ್ತಿ ಇರುವ ಪ್ರತಿ ಜೀವಿಯಲ್ಲೂ ನೆಮ್ಮದಿ ಎನ್ನುವುದು ಮನಸ್ಸಿನ ಭಾವನೆಗಳೊಟ್ಟಿಗೆ ಆಟವಾಡುತ್ತಿರುತ್ತದೆ.
ನಮಗೆ ನಂಬಿಕೆ ನೆಮ್ಮದಿಯಿಂದ ಇದ್ದೇವೆಂದು, ನಂಬಿಕೆಯಲ್ಲೇ ಬದುಕು ದೂಡುವ ನಾವುಗಳು ನೆಮ್ಮದಿಯಾಗಿ ಇರಲಾರೆವು. ಇರುತ್ತೇನೆಂದರೂ ಚಂಚಲ ಮನಸ್ಸು ನೆಮ್ಮದಿಯ ದಾರಿಯನ್ನು ತಪ್ಪಿಸುತ್ತಿರುತ್ತದೆ. ದೃಢ ಮನಸ್ಸು ನೆಮ್ಮದಿಯ ದಾರಿಯಲ್ಲಿ ಸಾಗುವಂತೆ ಮಾಡುತ್ತದೆ. ದೃಢವಾಗಿದ್ದವರು ಯಾವುದಕ್ಕೂ ಅಂಜುವುದಿಲ್ಲ, ಅಂಜದಿರುವವರು ಧೈರ್ಯದಿಂದ ಬದುಕುತ್ತಾರೆ. ಧೈರ್ಯವನ್ನು ನೆಮ್ಮದಿ ಇಷ್ಟಪಡುವುದು. ಭವ್ಯಬಂಗಲೆ, ತಿಜೋರಿ ತುಂಬ ಹಣ, ಓಡಾಡಲು ಐಷಾರಾಮಿ ಕಾರುಗಳು, ಆಳುಕಾಳುಗಳು, ರೂಪವಂತೆ ಮಡದಿ, ಗುಣವಂತ ಮಕ್ಕಳು ಇವುಗಳಿಗಿಂತ ಬೇಕೆ, ಸುಖವಾಗಿರಲು ನೆಮ್ಮದಿಯಾಗಿ ಬದುಕಲು. ಆದರೂ ನೆಮ್ಮದಿಯಾಗಿ ಇರಲಾರೆವು.
ಮನದಿಂದ ಮನಕೆ ಪಾರ್ವುದು ಬಾಳಿನುರಿಯ ಕಿಡಿ|
ಮನೆಯಿಂದ ಮನೆಗಲೆವ ಗಾಳಿ ಹೊಗೆಯಂತೆ||
ಮನುಜರ ಪರಸ್ಪರೋದ್ರೇಕ ಜಗದ ವಿಲಾಸ|
ಮನವೆ ಪರಮಾದ್ಭುತವೊ ಮಂಕುತಿಮ್ಮ||
ಮನದಿಂದ ಮನಸ್ಸಿಗೆ ಬಾಳಿನ ಉರಿಯ ಕಿಡಿ ಹಾರುವುದು, ಮನೆಯಿಂದ ಮನೆಗೆ ಗಾಳಿ, ಹೊಗೆ ಅಲೆಯುವುದು, ಮಾನವರಲ್ಲಿ ಪರಸ್ಪರ ಉದ್ರೇಕಗಳು ಉಂಟಾಗಿ ವಿನಿಮಯವಾಗುವವು, ಒಟ್ಟಿನಲ್ಲಿ ಹೇಳುವುದಾದರೆ ಮನಸ್ಸು ಪರಮಾದ್ಭುತವಾದುದ್ದಾಗಿದೆ. ಮನಸ್ಸೇ ಸುಂದರ ಬದುಕಿನ ತಳಪಾಯ, ಆರ್ಥಿಕವಾಗಿ ಎಷ್ಟೇ ಎತ್ತರದಲ್ಲಿ ಇರಲಿ, ಅಧಿಕಾರದ ಉತ್ತುಂಗದಲ್ಲಿ ಇರಬಹುದು, ಒಳಗಿನ ಮನಸ್ಸು ಉದ್ರೇಕಗೊಳ್ಳದೆ ಇದ್ದಲ್ಲಿ ಮಾತ್ರ ಸಂತೋಷವಾಗಿ ಇರಲಿಕ್ಕೆ ಸಾಧ್ಯ. ಹಣ ಅಧಿಕಾರ ಅದೆಷ್ಟೇ ಪ್ರಮಾಣದಲ್ಲಿ ಇದ್ದರೂ ಇವುಗಳಷ್ಟೆ ಬದುಕಿಗೆ ನೆಮ್ಮದಿಯನ್ನು ತಂದುಕೊಡಲಾರೆವು.
ಮನುಷ್ಯರಲ್ಲಿ ಪರಸ್ಪರ ಉದ್ರೇಕಗೊಳ್ಳುವ ಗುಣ ಬಹುಶಃ ಇತರೆ ಜೀವಿಗಳಗಿಂತ ಹೆಚ್ಚು. ಈ ನೀಚ ಗುಣದಿಂದಾಗಿಯೇ ಸಮಾಜದಲ್ಲಿ ಒಳ್ಳೆಯ ಹೆಸರು ಸಂಪಾದಿಸಿ ದ್ದವರು ಕೆಲವು ನಿಮಿಷಗಳು ಮೈಮರೆತಿದ್ದಕ್ಕೆ ಪೂಜ್ಯ ಸ್ಥಾನದಲ್ಲಿದ್ದವರು ಛೀ…. ಥೂ… ಎನಿಸಿಕೊಂಡು ಸಮಾಜದ ಕೆಂಗಣ್ಣಿಗೆ ಗುರಿಯಾಗಿ ಬಹಿಷ್ಕಾರಕ್ಕೆ ಒಳಗಾಗುತ್ತಾರೆ, ಅಂತಿಮವಾಗಿ ಅವರ ಬದುಕಿನ ನೆಮ್ಮದಿಗೆ ಕಲ್ಲು ಬೀಳುವುದು. ನೆಮ್ಮದಿಗೆ ಕಾರಣಗಳು ನೂರಾರು, ಇಲ್ಲಿ ನನ್ನ ತಿಳಿವಳಿಕೆಯಿಂದ ಮತ್ತು ಓದಿದ ಪುಸ್ತಕಗಳಲ್ಲಿ ಆಯ್ಕೆ ಮಾಡಿ ಕೂಡಿಟ್ಟವುಗಳಲ್ಲಿ ಸದ್ಯ ನೆನಪಿನ ಪಟಲದಲ್ಲಿ ಮೂಡಿದ ಕೆಲವುಗಳನ್ನಷ್ಟೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ಕೆಲವು ವಿಷಯಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಮಾಡಿಕೊಳ್ಳುವ ಎಡವಟ್ಟುಗಳಿಂದ ತಿಳಿಯಾಗಿದ್ದ ಮನಸ್ಸು ರಾಡಿಯಾಗಿ ನೆಮ್ಮದಿ ಇಲ್ಲದಂತಾಗು ವುದು, ಸರ್ ಎಂ.ವಿಶ್ವೇಶ್ವರಯ್ಯನವರು ಪಾಲಿಸಿದಂತೆ ಶಿಸ್ತುಬದ್ಧ ಜೀವನ, ಸಮಯ ಪಾಲನೆ ಮತ್ತು ದುಡಿಮೆಯೇ ದೇವರು ಸೂತ್ರಗಳು ಯಾವಾಗಲೂ ಮನುಷ್ಯನನ್ನು ಆರೋಗ್ಯವಾಗಿ ಇಡುತ್ತವೆ, ನೆಮ್ಮದಿ ಇದ್ದಾಗ ಮಾತ್ರ ಆರೋಗ್ಯವಾಗಿ ಇರುವುದಕ್ಕೆ ಸಾಧ್ಯ, ಹಾಗಾಗಿಯೇ ಅವರು ಶತಾಯುಷಿಗಳಾಗಿ ಬದುಕಿದರು, ಯಾರಿಗೂ ತಲೆಬಾಗದೆ ವೃತ್ತಿ ನಿಷ್ಠೆಯಿಂದ ಕಳಂಕಿತರಾಗದೆ ರಾಜ್ಯದ ಅಭಿವೃದ್ದಿಗೆ ಬಹುದೊಡ್ಡ ಕೊಡುಗೆಗಳನ್ನು ಕೊಟ್ಟರು.
ದುಡಿಮೆಯೊಂದಿಗೆ ದೇಹಕ್ಕೆ ಮತ್ತು ಮನಸ್ಸಿಗೆ ವಿಶ್ರಾಂತಿ ಬೇಕಾಗುತ್ತದೆ, ಅವಿರತವಾದ ದುಡಿಮೆಯಿಂದ ದೇಹ ಬಳಲುತ್ತದೆ ಆರೋಗ್ಯ ಕೆಡುತ್ತದೆ. ಕಾಯಿಲೆಗಳು ನೋವನ್ನಷ್ಟೇ ತರುವುದಿಲ್ಲ ಇವು ಮನಸ್ಸಿನ ಮೇಲೆ ಪರಿಣಾಮ ಬೀರಿ ಕಡೆಗೆ ನೆಮ್ಮದಿ ಹಾಳು ಮಾಡುತ್ತವೆ, ಆದ್ದರಿಂದ ದುಡಿಯುವವರಿಗೆ ಕಾಲಕಾಲಕ್ಕೆ ವಿಶ್ರಾಂತಿ ಬೇಕಿದೆ. ಏನೊಂದು ಕೆಲಸ ಮಾಡದೆ ಕುಳಿತು ಉಣ್ಣುವವರು ಅಂದರೆ ಸೋಮಾರಿಗಳು ನೆಮ್ಮದಿಯಾಗಿ ಇರುವುದಕ್ಕೆ ಸಾಧ್ಯವಿಲ್ಲ, ಆರ್ಥಿಕವಾಗಿ ಸದೃಢವಾಗಿಲ್ಲ ದವರು ಹೇಗೆ ತಾನೆ ಭವಿಷ್ಯದಲ್ಲಿ ನೆಮ್ಮದಿಯಾಗಿ ಇರಲಿಕ್ಕೆ ಸಾಧ್ಯ? ಅದಕ್ಕೇ ಹೇಳುವುದು; ಕುಳಿತು ತುಕ್ಕು ಹಿಡಿಯುವುದಕ್ಕಿಂತ ದುಡಿಮೆ ಮಾಡಿ ಸವೆಯುವುದು ಮೇಲು ಎಂದು.
ಅಹಂಕಾರವು ಸಹ ನಮ್ಮನ್ನು ಎಲ್ಲಿಗೋ ತಂದು ನಿಲ್ಲಿಸಿಬಿಡುತ್ತದೆ, ಆಸೆಯಿಂದ ಬೇಕಿದ್ದು ಬೇಡವಾದುದ್ದೆಲ್ಲವನ್ನು ಸಾಲ ಮಾಡಿ ಕೊಂಡುಕೊಳ್ಳುವುದು. ನಂತರ ಮಾಡಿದ ಸಾಲವನ್ನು ತೀರಿಸಲಾಗದೆ ನೆಮ್ಮದಿ ಕಳೆದುಕೊಳ್ಳುವುದು. ಅದಕ್ಕೆ ಅಲ್ಲವೇ ಆಸೆಯೇ ದುಃಖಕ್ಕೆ ಕಾರಣವೆಂದು ಪುಣ್ಯಪುರುಷರು ಹೇಳಿದ್ದು. ಸಾಲ ಮರ್ಯಾದೆಯನ್ನು ಕಳೆಯುತ್ತದೆ, ಕುಟುಂಬದ ನೆಮ್ಮದಿಯನ್ನು ಹಾಳು ಮಾಡುತ್ತದೆ ಮತ್ತು ದುರ್ಬಲ ಮನಸ್ಸಿನವರ ಪ್ರಾಣವನ್ನು ತೆಗೆದುಕೊಳ್ಳುವುದು. ಸಾಲ ಮಾಡಿಕೊಳ್ಳುವುದಕ್ಕಿಂತ ನಮ್ಮ ಕೈಯಲ್ಲಿ ಹಣವಿದ್ದಾಗ ಅವಶ್ಯಕತೆ ಇರುವ ವಸ್ತುಗಳನ್ನು ಮಾತ್ರ ತೆಗೆದುಕೊಳ್ಳುವುದು ಒಳ್ಳೆಯದಲ್ಲವೆ?
ನಾವು ಆಡುವ ಮಾತು ಸಹ ನಿರುಮ್ಮಳವಾಗಿದ್ದ ಮನಸ್ಸಿನ ನೆಮ್ಮದಿಯನ್ನು ಕೆಡೆಸಿ ನಮ್ಮನ್ನು ಹಾಳು ಮಾಡುತ್ತದೆ, ಅರ್ಥಗರ್ಭಿತವಾಗಿ ಸಮಯೋಚಿತವಾಗಿ ಮಾತನಾಡುವ ಕಲೆ ಮತ್ತು ಬುದ್ಧಿವಂತಿಕೆ ಇರಬೇಕು, ಆಡುವ ಮಾತು ಕೇಳಿದವರಿಗೆ ತಪ್ಪು ಅರ್ಥ ಕೊಡದಂತಿರಬೇಕು. ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು, ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಆಡಿದರೆ ಆಯ್ತು ಮುತ್ತು ಹೊಡೆದರೆ ಹೋಯ್ತು, ಮಾತನಾಡಿದರೆ ಮಾಣಿಕ್ಯ ದಂತಿರಬೇಕು…ಇತ್ಯಾದಿ ಸೂಕ್ತಿಗಳು ಮಾತಿನ ಬಗ್ಗೆ ಹುಟ್ಟಿರುವಂತಹದ್ದು, ಇವು ಮಾತಿನ ಮೌಲ್ಯ ಎಂಥಹದ್ದು ಎಂಬುದನ್ನು ಹೇಳುತ್ತವೆ. ನೆಮ್ಮದಿಯನ್ನು ಪಡೆಯುವುದು ಅಥವಾ ಕಳೆದುಕೊಳ್ಳುವುದು ನಾವು ಆಡುವ ಮಾತಿನ ಮೇಲೆ ನಿಂತಿರುತ್ತದೆ.
ಜೀವನದುದ್ದಕ್ಕೂ ಕಲಿಯುವುದು ಇರುತ್ತದೆ, ಹೊಸಹೊಸದನ್ನು ಕಲಿಯುವುದರಿಂದ ಹಿಂಜರಿಕೆ ಹೋಗುವುದು, ಧೈರ್ಯ ಹೆಚ್ಚುವುದು. ಭಯವಿದ್ದರೆ ನೆಮ್ಮದಿಯಾಗಿರುವುದಕ್ಕೆ ಸಾಧ್ಯವಿಲ್ಲ. ಭಯ ಇದ್ದವರು ಪರೀಕ್ಷೆಗಳನ್ನು ಎದುರಿಸಲು ಕಷ್ಟವಾಗುವುದು. ಇದರಿಂದ ಗೊತ್ತಿದ್ದರೂ ಬರೆಯಲಾಗದು ಮತ್ತು ಹೇಳುವುದಕ್ಕೆ ಆಗುವುದಿಲ್ಲ. ಜೀವನದಲ್ಲಿ ಎಲ್ಲವನ್ನೂ ಗೆಲ್ಲಲಾಗುವುದಿಲ್ಲ ಸೋಲನ್ನು ಒಪ್ಪಿಕೊಳ್ಳುವ ಧೈರ್ಯವನ್ನು ಸಹ ಬೆಳೆಸಿಕೊಳ್ಳಬೇಕು.
ದುರಾಸೆಯಿಂದ ಹತ್ತಾರು ಕೆಲಸಗಳನ್ನು ಏಕಕಾಲದಲ್ಲಿ ಮಾಡುವುದರಿಂದ ಮನಸ್ಸಿನ ಮೇಲೆ ಒತ್ತಡ ಉಂಟಾಗುವುದು, ಒತ್ತಡವು ನೆಮ್ಮದಿಯನ್ನು ತುಳಿಯುವುದು. ಒತ್ತಡರಹಿತ ಜೀವನ ನೆಮ್ಮದಿಯ ಬದುಕಿನ ರಹದಾರಿ, ಮನಸ್ಸು ಯಾವಾಗಲು ತಿಳಿಯಾಗಿ ನಿರ್ಮಲವಾಗಿರುವಂತೆ ಆಧ್ಯಾತ್ಮದ ಕಡೆಗೆ ಒಲವು ಇರಲಿ. ನಮ್ಮ ಸಂಸ್ಕೃತಿ ತಿರುಳು ಸರಳ ಬದುಕಿನ ನೀತಿ ಪಾಠಗಳನ್ನು ಹೊಂದಿದೆ. ಅವುಗಳನ್ನು ಪಾಲಿಸುವುದರಲ್ಲಿ ನಾವು ಸೋಲುತ್ತಿzವೆ. ಜೀವನದಲ್ಲಿ ಗುರಿ ಇಟ್ಟುಕೊಳ್ಳಬೇಕು. ಆ ಗುರಿ ಮುಟ್ಟಲು ಏಕಾಗ್ರತೆಯಿಂದ ಕೆಲಸ ಮಾಡಬೇಕು, ಸಂಪಾದಿಸಿದ್ದರಲ್ಲಿ ಸ್ವಲ್ಪ ಭಾಗ ಭವಿಷ್ಯದ ಜೀವನಕ್ಕೆ ಕೂಡಿಟ್ಟುಕೊಳ್ಳಬೇಕು, ಇದರಿಂದ ಮುಪ್ಪಿನ ಕಾಲದಲ್ಲಿ ಸಹಕಾರಿಯಾಗುವುದು, ಯಾರನ್ನು ಅವಲಂಬಿಸದೆ ಸ್ವತಂತ್ರವಾಗಿ ನೆಮ್ಮದಿ ಜೀವನ ನಡೆಸಬಹುದು. ದೇಹದಲ್ಲಿ ಚೇತನವಿಲ್ಲದಿದ್ದರೆ ಯಾವುದೇ ಕೆಲಸವನ್ನು ಮಾಡಲಿಕ್ಕೆ ಸಾಧ್ಯವಿಲ್ಲ, ಅಂದರೆ ಮಾಡುವ ಕೆಲಸದಲ್ಲಿ ಮಧ್ಯ ವಿಶ್ರಾಂತಿಯ ಅವಶ್ಯಕತೆಯೂ ಇದೆ. ನಿರಂತರವಾಗಿ ದುಡಿಯುವ ಶಕ್ತಿ ಯಾವುದೇ ವಯೋಮಾನದ ದೇಹಕ್ಕೆ ಇರುವುದಿಲ್ಲ. ವಿಶ್ರಾಂತಿಯ ಜೊತೆಗೆ ಏಕಾಗ್ರತೆಯು ಸಹ ಬೇಕು, ಒಂದು ಬಾರಿಗೆ ಒಂದು ವಿಷಯದ ಚಿಂತನೆ ಇರಲಿ. ತಲೆತುಂಬ ನೂರಾರು ವಿಷಯಗಳನ್ನು ತುಂಬಿಕೊಂಡಾಗಲೂ ಸಹ ನೆಮ್ಮದಿಯಾಗಿ ಇರುವುದಕ್ಕೆ ಸಾಧ್ಯವಿಲ್ಲ. ಆದತೆಯ ಮೇರೆಗೆ ಆಯ್ದುಕೊಂಡ ವಿಷಯವಾಗಿ ಕರ್ತವ್ಯ ನಿರ್ವಹಿಸಿದರೆ ಗೊಂದಲಕ್ಕೆ ಒಳಗಾಗುವ ಸಂಭವ ಕಡಿಮೆ. ಗೊಂದಲಗಳು ಎಂದಿಗೂ ಮನುಷ್ಯನನ್ನು ನೆಮ್ಮದಿಯಾಗಿ ಇರುವುದಕ್ಕೆ ಬಿಡುವುದಿಲ್ಲ.
ನೆಮ್ಮದಿ ನೆಮ್ಮದಿ ಎಂದುಕೊಂಡು ಅಲ್ಲಿ ಇಲ್ಲಿ ಹುಡುಕುವುದು ಬೇಡ, ಅದು ಎಲ್ಲಿಯೂ ಸಿಗದು, ಏಕೆಂದರೆ ಪ್ರತಿಯೊಬ್ಬರಿಗೂ ಹುಟ್ಟಿನೊಂದಿಗೇ ಜೊತೆಯಾಗಿ ಬಂದಿರುವಂತಹದ್ದು, ಮನಸ್ಸಿಗೆ ಅಂಟಿಕೊಂಡು ನಮ್ಮೊಳಗೇ ಇರುವ ನೆಮ್ಮದಿಯನ್ನು ಕಂಡುಕೊಂಡು ನೆಮ್ಮದಿಯಾಗಿ ಬದುಕಿದರೆ ಸಂತೋಷ ಎನ್ನುವುದು ನಮ್ಮ ಜೊತೆ ನಲಿದಾಡುತ್ತಿರುತ್ತದೆ ಅಲ್ಲವೇ?
– ಮಿರ್ಲೆ ಚಂದ್ರಶೇಖರ
ಸಾಹಿತಿ, ಅಂಕಣಕಾರ
ಮೊ: 9916129645