ಇರಾಕ್ ಅಲ್ ಅನ್ಬರ್ ಪ್ರಾಂತ್ಯದ ಮೇಲೆ ಅಮೆರಿಕ ನಡೆಸಿದ ವಾಯು ದಾಳಿಯಲ್ಲಿ ಐಸಿಸಿನ ಜಾಗತಿಕ ಎರಡನೇ ನಾಯಕ ಅಬು ಖಾದಿಜಿಹ್ ಹತ್ಯೆಯಾಗಿದ್ದಾನೆ.
ಇರಾಕ್ ಗುಪ್ತಚರರು ನೀಡಿದ ಮಾಹಿತಿ ಆಧರಿಸಿ ಮಾರ್ಚ್ 13ರಂದು ತಡರಾತ್ರಿ ವಾಯು ದಾಳಿ ನಡೆಸಿದ ಅಮೆರಿಕ ಜಗತ್ತಿನ ಅತ್ಯಂತ ಅಪಾಯಕಾರಿ ಉಗ್ರ ಸಂಘಟನೆ ಎರಡನೇ ಕಮಾಂಡರ್ ಹತ್ಯೆ ಮಾಡಿದೆ.
ಅಬು ಖಾದಿಜಿಹ್ ಜಾಗತಿಕ ಮಟ್ಟದಲ್ಲಿ ನಿಧಿ ಸಂಗ್ರಹಣೆ, ದಾಳಿಯ ರೂಪುರೇಷೆ, ಮಾನವ ಮತ್ತು ಶಸ್ತ್ರಾಸ್ತ್ರ ಸಾಗಾಟದ ನೇತೃತ್ವ ವಹಿಸಿದ್ದ ಎಂದು ಅಮೆರಿಕ ಸೇನೆ ಹೇಳಿದೆ.
ಇರಾಕ್ ನ ಉಗ್ರರ ನೆಲೆಗಳ ಮೇಲೆ ನಡೆಸಿದ ವಾಯು ದಾಳಿಯ ವೀಡಿಯೋವನ್ನು ಅಮೆರಿಕ ಹಂಚಿಕೊಂಡಿದೆ. ದಾಳಿಯ ವೇಳೆ ಅಬು ಸೇರಿದಂತೆ ಇಬ್ಬರು ದೇಹಕ್ಕೆ ಬಾಂಬ್ ಗಳನ್ನು ಸುತ್ತಿಕೊಂಡಿದ್ದು, ಆತ್ಮಹುತಿ ದಾಳಿಗೆ ತಂತ್ರ ರೂಪಿಸಿದ್ದರು. ದಾಳಿಯಲ್ಲಿ ಹತ್ಯೆ ಆಗಿರುವುದು ಅಬು ಎಂಬುದು ಡಿಎನ್ ಎ ಮಾದರಿ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಅಮೆರಿಕ ತಿಳಿಸಿದೆ.
ಜಗತ್ತಿನ ಅತ್ಯಂತ ಅಪಾಯಕಾರಿ ಉಗ್ರರ ಮುಖಂಡರಲ್ಲಿ ಅಬು ಕೂಡ ಒಬ್ಬರಾಗಿದ್ದು, ಅಮೆರಿಕ ಉಗ್ರರ ಮೇಲಿನ ದಾಳಿಯನ್ನು ಮುಂದುವರಿಸಲಿದೆ. ಮತ್ತಷ್ಟು ಉಗ್ರರನ್ನು ಸದೆಬಡಿಯಲಿದೆ ಎಂದು ಪ್ರಕಟಣೆಯಲ್ಲಿ ಎಚ್ಚರಿಸಲಾಗಿದೆ.