Menu
12

ಬಿಜೆಪಿಯನ್ನು ಕಪಟಿ ಎಂದ ಗಾಂಧೀಜಿ ಮರಿಮೊಮ್ಮಗನ ಮೇಲೆ ಬಿಜೆಪಿ ಕೆಂಗಣ್ಣು

tushar gandhi

ತಿರುವನಂತಪುರ: ಮಹಾತ್ಮ ಗಾಂದಿ ಮರಿಮೊಮ್ಮಗ ತುಷಾರ್ ಗಾಂಧಿ ಮೇಲೆ ಬಿಜೆಪಿಯ ವಕ್ರದಷ್ಟಿ ಬಿದ್ದಿರುವಂತಿದೆ. ಸಂಘಟನೆಯ ಬಗ್ಗೆ ಅವರು ಇತ್ತೀಚೆಗೆ ನೀಡಿರುವ ಹೇಳಿಕೆಗಳಿಗಾಗಿ ಬಿಜೆಪಿ ಆರ್‌ಎಸ್‌ಎಸ್ ಕಾರ್ಯಕರ್ತರು ಅವರನ್ನು ಗುರಿ ಮಾಡಿದ್ದಾರೆ.

ಆದರೆ ತಮ್ಮ ಹೇಳಿಕೆಗಳನ್ನು ಹಿಂಪಡೆಯುವುದಿಲ್ಲ ಅಥವಾ ಕ್ಷಮೆಯಾಚಿಸುವುದಿಲ್ಲ ಎಂದು ಮಹಾತ್ಮ ಗಾಂಧಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ ಶುಕ್ರವಾರ ಹೇಳಿದ್ದಾರೆ.

ಕೇರಳದ ತಿರುವನಂತಪುರದ ನಯ್ಯಟ್ಟಿಂಕರದಲ್ಲಿ ಗಾಂಧಿವಾದಿ ಪಿ. ಗೋಪಿನಾಥನ್ ನಾಯರ್ ಅವರ ಪ್ರತಿಮೆ ಅನಾವರಣ ಸಂದರ್ಭದಲ್ಲಿ ತುಷಾರ್ ಮಾತನಾಡಿದ್ದರು. ಬಿಜೆಪಿ ಮತ್ತು ಆರ್‌ಎಸ್‌ಎಸ್ ಎರಡೂ ಅಪಾಯಕಾರಿ ಹಾಗೂ ಕಪಟತನವಿರುವ ಶತ್ರುಗಳು. ಆರ್‌ಎಸ್‌ಎಸ್ ಎಂದರೆ ವಿಷವಿದ್ದಂತೆ ಎಂದು ಅವರು ನುಡಿದಿದ್ದರು.

ತುಷಾರ್ ಅವರ ಈ ಹೇಳಿಕೆ ಖಂಡಿಸಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರು, ಅವರಿದ್ದ ಕಾರನ್ನು ತಡೆದು, ಘೋಷಣೆ ಕೂಗಿದ್ದರು.
ಕೊಚ್ಚಿ ಬಳಿಯ ಅಲುವದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ತುಷಾರ್, ‘ನಾನು ಒಮ್ಮೆ ನೀಡಿದ ಹೇಳಿಕೆಯನ್ನು ಹಿಂಪಡೆಯುವುದಿಲ್ಲ. ವಿಷಾದವನ್ನೂ ವ್ಯಕ್ತಪಡಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ನನ್ನ ಹೇಳಿಕೆ ನಂತರ ನಡೆದ ಬೆಳವಣಿಗೆಗಳು ಈ ದೇಶದ್ರೋಹಿಗಳನ್ನು ಬಯಲಿಗೆಳಯಲು ಇನ್ನಷ್ಟು ಪ್ರೇರೇಪಿಸಿ, ಬಲಿಷ್ಠಗೊಳಿಸಿವೆ.
ಈ ಎರಡೂ ಸಂಸ್ಥೆಗಳ ವಿರುದ್ಧ ಕೈಗೊಳ್ಳಬೇಕಾದ ಹೋರಾಟವು ಸ್ವಾತಂತ್ರ್ಯ ಹೋರಾಟಕ್ಕಿಂತ ಅತ್ಯಗತ್ಯವಾಗಿದೆ. ‘ಸಂಘ’ ಎಂಬುದು ನಮ್ಮೆಲ್ಲರ ಸಮಾನ ಶತ್ರುವಾಗಿದೆ. ಅದರ ಮುಖವಾಡವನ್ನು ಕಳಚಲೇಬೇಕು’ ಎಂದು ಗುಡುಗಿದ್ದಾರೆ.

‘ನನ್ನ ಮುತ್ತಜ್ಜನ ಕೊಲೆಗಾರರ ವಂಶದವರು ಮಹಾತ್ಮಾ ಗಾಂಧಿ ಅವರ ಭಾವಚಿತ್ರದ ಬಳಿ ಹೋಗಿ ಬಂದೂಕು ಇಟ್ಟು ಗುಂಡು ಹಾರಿಸುತ್ತಾರೆ’ ಎಂದು ತುಷಾರ್ ಕಳವಳ ವ್ಯಕ್ತಪಡಿಸಿದ್ದಾರೆ.

ತುಷಾರ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ‘ಮಹಾತ್ಮಾ ಗಾಂಧಿ ಅವರ ಮರಿ ಮೊಮ್ಮಗನಾಗಿ ಹುಟ್ಟಿರುವುದನ್ನೇ ಬಂಡವಾಳ ಮಾಡಿಕೊಳ್ಳಲು ಇವರು ಯತ್ನಿಸುತ್ತಿದ್ದಾರೆ. ಪ್ರತಿಮೆ ಅನಾವರಣಕ್ಕೆ ತುಷಾರ್ ಅವರನ್ನು ಆಹ್ವಾನಿಸಿದವರಿಗೆ ಅವರ ಹಿನ್ನೆಲೆಯ ಪರಿಚಯವಿದ್ದಿರಲಿಲ್ಲ ಎಂದೆನಿಸುತ್ತದೆ’ ಎಂದಿದೆ.

‘ಗಾಂಧಿ ಎಂಬ ಉಪನಾಮ ಇದ್ದ ಮಾತ್ರಕ್ಕೆ ರಾಷ್ಟ್ರಪಿತ ಸ್ಥಾನಮಾನ ಸಿಗುತ್ತದೆ ಎಂದು ಭಾವಿಸುವುದು ಭ್ರಮೆ. ಪಕ್ಷದ ವಿರುದ್ಧ ನೀಡಿದ ಹೇಳಿಕೆಗಾಗಿ ಇವರನ್ನು ಬಂಧಿಸಬೇಕು’ ಎಂದು ಬಿಜೆಪಿಯ ಮುರಳೀಧರನ್ ಆಗ್ರಹಿಸಿದ್ದಾರೆ.

ಬಿಜೆಪಿ ಕಾರ‍್ಯಕರ್ತರ ಮೇಲೆ ಕೇಸು

ಈ ಮಧ್ಯೆ ಮಹಾತ್ಮಾ ಗಾಂಧಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ ವಿರುದ್ಧ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಐವರು ಆರ್‌ಎಸ್‌ಎಸ್-ಬಿಜೆಪಿ ಕಾರ್ಯಕರ್ತರ ಮೇಲೆ ಗುರುವಾರ ಕೇಸ್ ದಾಖಲಿಸಲಾಗಿದೆ.

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 189 (2), 191 (2), 190 ಮತ್ತು 126 (2) ಅಡಿಯಲ್ಲಿ ಕಾನೂನುಬಾಹಿರ ಸಭೆ, ಗಲಭೆ ಮತ್ತು ಅಕ್ರಮ ನಿರ್ಬಂಧದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತ ತನಿಖೆ ನಡೆಯುತ್ತಿದ್ದು, ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *