ಮುಂಬೈ: ಬೆನ್ನುನೋವಿನಿಂದ ಚೇತರಿಸಿಕೊಳ್ಳುತ್ತಿರುವ ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ಪರ ಐಪಿಎಲ್ ೨೦೨೫ ರ ಆರಂಭಿಕ ಸುತ್ತುಗಳಿಂದ ಹೊರಗುಳಿಯುವ ನಿರೀಕ್ಷೆಯಿದೆ.
ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಐದನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಸ್ಟಾರ್ ವೇಗಿ ಗಾಯಗೊಂಡರು, ಮತ್ತು ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸಲ್ಲಿ ಅವರಿಗೆ ಬೌಲಿಂಗ್ ಮಾಡಲು ಸಾಧ್ಯವಾಗಿರಲಿಲ್ಲ.
ಸರಣಿಯ ಮೊದಲ ಐದು ಪಂದ್ಯಗಳಲ್ಲಿ ೩೨ ವಿಕೆಟ್‌ಗಳನ್ನು ಪಡೆದ ಬುಮ್ರಾ, ಅಂದಿನಿಂದ ಆಟದಿಂದ ಹೊರಗುಳಿದಿದ್ದಾರೆ ಮತ್ತು ಭಾರತದ ವಿಜಯಶಾಲಿ ಚಾಂಪಿಯನ್ಸ್ ಟ್ರೋಫಿ ಅಭಿಯಾನವನ್ನು ತಪ್ಪಿಸಿಕೊಂಡಿದ್ದಾರೆ.
ಐಸಿಸಿ ಪಂದ್ಯಾವಳಿಗಾಗಿ ಭಾರತದ ತಾತ್ಕಾಲಿಕ ತಂಡದಲ್ಲಿ ಅವರನ್ನು ಹೆಸರಿಸಲಾಗಿದ್ದರೂ, ಅವರು ಸಮಯಕ್ಕೆ ಸರಿಯಾಗಿ ಸಂಪೂರ್ಣ ಫಿಟ್ನೆಸ್ ತಲುಪಲು ವಿಫಲರಾಗಿದ್ದರು.
ಈಗ ಅವರ ಚೇತರಿಕೆ ಪ್ರಗತಿಯಲ್ಲಿದೆ, ಆದರೆ ಗರಿಷ್ಠ ಫಿಟ್ನೆಸ್ ತಲುಪಲು ಅವರಿಗೆ ಇನ್ನೂ ಸ್ವಲ್ಪ ಸಮಯ ನೀಡುವುದು ಉತ್ತಮ. ಜೂನ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಭಾರತದ ಟೆಸ್ಟ್ ಸರಣಿ ಇದ್ದು, ಅದಕ್ಕಾಗಿ ಬುಮ್ರಾ ಅವರನ್ನು ಅಣಿಮಾಡಬೇಕಿದೆ.
ನೆಟ್ಸ್ ಮತ್ತು ಮ್ಯಾಚ್ ಸಿಮ್ಯುಲೇಶನ್‌ಗಳ ಮೂಲಕ ಬುಮ್ರಾ ಕ್ರಮೇಣ ತಮ್ಮ ಕೆಲಸದ ಹೊರೆಯನ್ನು ಹೆಚ್ಚಿಸುತ್ತಿದ್ದರೂ, ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನ ಫಿಸಿಯೋಥೆರಪಿಸ್ಟ್‌ಗಳು ಅವರ ಮರಳುವಿಕೆಗೆ ನಿರ್ದಿಷ್ಟ ಸಮಯವನ್ನು ನೀಡಿಲ್ಲ.
ಐಪಿಎಲ್ 2024 ಪಾಯಿಂಟ್ಸ್ ಟೇಬಲಲ್ಲಿ ೧೦ ನೇ ಸ್ಥಾನ ಪಡೆದ ನಂತರ ಪುಟಿದೇಳುವ ಗುರಿ ಹೊಂದಿರುವ ಮುಂಬೈ ಇಂಡಿಯನ್ಸ್‌ಗೆ ಬುಮ್ರಾ ಅನುಪಸ್ಥಿತಿಯು ದೊಡ್ಡ ಹಿನ್ನಡೆಯಾಗಿದೆ. ಮುಂಬೈನ ಐಪಿಎಲ್ ೨೦೨೫ ಅಭಿಯಾನವು ಮಾರ್ಚ್ 23 ರಂದು ಚೆನ್ನೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ.
ಬಳಿಕ ಮಾರ್ಚ್ 29 ರಂದು ಅಹಮದಾಬಾದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಮುಂಬೈ ಸೆಣಸಲಿದೆ. ಐದು ಬಾರಿಯ ಚಾಂಪಿಯನ್ ತಂಡವು ಮಾರ್ಚ್ ೩೧ರಂದು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯವನ್ನಾಡಲಿದೆ.
ಏಪ್ರಿಲ್ 4 ರಂದು ಲಕ್ನೋ ಸೂಪರ್ ಜೈಂಟ್ಸ್ ಮತ್ತು ಏಪ್ರಿಲ್ 7 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೆಣಸಲಿದೆ. ಸದ್ಯದ ಪರಿಸ್ಥಿತಿಯಲ್ಲಿ, ಬುಮ್ರಾ ಈ ಯಾವುದೇ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ, ಆದರೂ ಅವರು ಏಪ್ರಿಲ್ ಮೊದಲ ವಾರದಲ್ಲಿ ತಂಡಕ್ಕೆ ಮರಳಬಹುದು.