ನವದೆಹಲಿ: ಬೃಹತ್ ಪ್ರಮಾಣದ ಕ್ರಿಪ್ಟೋಕರೆನ್ಸಿ ವಂಚನೆಗಾಗಿ ಅಮೆರಿಕದಲ್ಲಿ ಬೇಕಾಗಿದ್ದ ಲಿಥುವೇನಿಯಾದ ವ್ಯಕ್ತಿಯನ್ನು ಕೇರಳದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಅಲೆಕ್ಸೆಜ್ ಬೆಸಿಯೊಕೊವ್, ರಾನ್ಸಮ್ವೇರ್, ಕಂಪ್ಯೂಟರ್ ಹ್ಯಾಕಿಂಗ್ ಮತ್ತು ಮಾದಕವಸ್ತು ವಹಿವಾಟುಗಳಂತಹ ಅಪರಾಧ ಚಟುವಟಿಕೆಗಳ ಆದಾಯವನ್ನು ಅಕ್ರಮವಾಗಿ ವರ್ಗಾಯಿಸಲು ’ಗ್ಯಾರಂಟೆಕ್ಸ್’ ಎಂಬ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರವನ್ನು ಸ್ಥಾಪಿಸಿದ್ದ.
ಬೆಸಿಯೊಕೊವ್, ದೇಶದಿಂದ ಪಲಾಯನ ಮಾಡಲು ಯೋಜಿಸುತ್ತಿದ್ದಾಗ ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುಎಸ್ ಸೀಕ್ರೆಟ್ ಸರ್ವಿಸ್ ದಾಖಲೆಗಳ ಪ್ರಕಾರ, ಬೆಸಿಯೊಕೊವ್ ಸುಮಾರು ಆರು ವರ್ಷಗಳ ಅವಧಿಯಲ್ಲಿ ಗ್ಯಾರಂಟೆಕ್ಸ್ ನ್ನು ನಿಯಂತ್ರಿಸಿ ನಿರ್ವಹಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಇದು ಅಂತರರಾಷ್ಟ್ರೀಯ ಕ್ರಿಮಿನಲ್ ಸಂಘಟನೆಗಳಿಂದ ಕನಿಷ್ಠ 96 ಬಿಲಿಯನ್ ಡಾಲರ್ (ರೂ. 8 ಲಕ್ಷ ಕೋಟಿಗೂ ಹೆಚ್ಚು) ಕ್ರಿಪ್ಟೋಕರೆನ್ಸಿ ವಹಿವಾಟುಗಳಲ್ಲಿ ಹಣ ವರ್ಗಾವಣೆಗೆ ಅನುಕೂಲ ಮಾಡಿಕೊಟ್ಟು ನಿರ್ಬಂಧಗಳನ್ನು ಉಲ್ಲಂಘಿಸಿದೆ.
“ಗ್ಯಾರಂಟೆಕ್ಸ್ ನೂರಾರು ಮಿಲಿಯನ್ ಕ್ರಿಮಿನಲ್ ಆದಾಯವನ್ನು ಪಡೆಯಿತು ಮತ್ತು ಹ್ಯಾಕಿಂಗ್, ರಾನ್ಸಮ್ವೇರ್, ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆ ಸೇರಿದಂತೆ ವಿವಿಧ ಅಪರಾಧಗಳನ್ನು ಸುಗಮಗೊಳಿಸಲು ಬಳಸಲಾಗುತ್ತಿತ್ತು, ಇದು ಸಾಮಾನ್ಯವಾಗಿ ಯುಎಸ್ ಸಂತ್ರಸ್ತರ ಮೇಲೆ ಗಣನೀಯ ಪರಿಣಾಮ ಬೀರುತ್ತದೆ” ಎಂದು ಅದು ಹೇಳಿದೆ.
ಬೆಸ್ಸಿಯೊಕೋವ್ ಗ್ಯಾರೆಂಟೆಕ್ಸ್ನ ಪ್ರಾಥಮಿಕ ತಾಂತ್ರಿಕ ನಿರ್ವಾಹಕರಾಗಿದ್ದರು ಮತ್ತು ವೇದಿಕೆಯ ನಿರ್ಣಾಯಕ ಮೂಲಸೌಕರ್ಯವನ್ನು ಪಡೆಯುವುದು ಮತ್ತು ನಿರ್ವಹಿಸುವುದು ಹಾಗೂ ವಹಿವಾಟುಗಳನ್ನು ಪರಿಶೀಲಿಸುವುದು ಮತ್ತು ಅನುಮೋದಿಸುವ ಜವಾಬ್ದಾರಿಯನ್ನು ಹೊಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುಎಸ್ ನಿಯಮ ಉಲ್ಲಂಘಿಸಿ ಹಣ ವರ್ಗಾವಣೆ ಮಾಡಲು ಪಿತೂರಿ, ಯುಎಸ್ ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆಯನ್ನು ಉಲ್ಲಂಘಿಸಲು ಪಿತೂರಿ ಮತ್ತು ಪರವಾನಗಿ ಪಡೆಯದ ಹಣ ಸೇವೆಗಳ ವ್ಯವಹಾರವನ್ನು ನಡೆಸಲು ಪಿತೂರಿ ಸೇರಿದಂತೆ ಹಲವು ಆರೋಪಗಳ ಮೇಲೆ ಬಂಧಿತ ವ್ಯಕ್ತಿ ಬೇಕಾಗಿದ್ದಾರೆ.