ಚಿನ್ನ ಕಳ್ಳಸಾಗಾಣೆ ಮಾಡುವಾಗ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.
ದುಬೈನಿಂದ 14 ಕೆಜಿ ಚಿನ್ನವನ್ನು ಅಕ್ರಮವಾಗಿ ತರುವಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಡಿಆರ್ ಐ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ರನ್ಯಾ ರಾವ್ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ನ್ಯಾಯಾಲಯ ತಿರಸ್ಕರಿಸಿತು.
ರನ್ಯಾ ರಾವ್ ಪ್ರಭಾವಿ ಆಗಿರುವುದರಿಂದ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇದೆ. ಅಲ್ಲದೇ ತನಿಖೆ ಇನ್ನೂ ಪ್ರಗತಿ ಹಂತದಲ್ಲಿ ಇರುವುದರಿಂದ ಜಾಮೀನು ನೀಡಬಾರದು ಎಂದು ಡಿಆರ್ ಐ ಪರ ವಕೀಲರು ಕೋರ್ಟ್ ಗೆ ಮನವಿ ಮಾಡಿದರು.
ರನ್ಯಾ ರಾವ್ ಚಿನ್ನ ಕಳ್ಳಸಾಗಾಣೆಯಿಂದ ಶೇ.38ರಷ್ಟು ತೆರಿಗೆ ವಂಚನೆ ಆಗಿದೆ. ಇದರಿಂದ ಸರ್ಕಾರಕ್ಕೆ ಸುಮಾರು 5 ಕೋಟಿಯಷ್ಟು ತೆರಿಗೆ ಕೈ ತಪ್ಪಿದೆ ಎಂದು ಆರೋಪಿಸಲಾಯಿತು. ಈ ಹಿನ್ನೆಲೆಯಲ್ಲಿ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಯಿತು.
ಇದೇ ವೇಳೆ ರನ್ಯಾ ರಾವ್ ಪತಿ ಜತಿನ್ ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ನಾಳೆ ಜತಿನ್ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ.