Menu
12

ಬೆಂಗಳೂರು ನಾಗರಿಕರಿಗೆ ಬಿಗ್ ಶಾಕ್: ನೀರಿನ ದರ ಲೀಟರ್ ಗೆ 1 ಪೈಸೆ ಏರಿಕೆ ಮಾಡಲು ರಾಜ್ಯ ಸರ್ಕಾರ ಚಿಂತನೆ

cauvery water

ಬೆಂಗಳೂರು: 2014ರ ನಂತರ ಬೆಂಗಳೂರಿನಲ್ಲಿ ನೀರಿನ ದರ ಪರಿಷ್ಕರಣೆ ಮಾಡಿಲ್ಲ. ಹೀಗಾಗಿ ಬೆಂಗಳೂರು ಜಲ ಮಂಡಳಿ (BWSSB)ಯು 7-8 ಪೈಸೆ ದರ ಏರಿಕೆಗೆ ಪ್ರಸ್ತಾಪ ನೀಡಿದ್ದು, ಸದ್ಯಕ್ಕೆ 1 ಪೈಸೆಯಷ್ಟು ಮಾತ್ರ ಏರಿಕೆ ಮಾಡಲು ಚಿಂತನೆ ಮಾಡಲಾಗಿದ್ದು. ಈ ಬಗ್ಗೆ ಸಧ್ಯದಲ್ಲೇ ನಗರದ ಶಾಸಕರ ಬಳಿ ಚರ್ಚಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನ ಪರಿಷತ್ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯರಾದ ರಾಮೋಜಿ ಗೌಡರು, ಬೇಸಿಗೆ ಆರಂಭವಾಗುತ್ತಿದ್ದು, ಬೆಂಗಳೂರಿನ ಪೂರ್ವ ಭಾಗದಲ್ಲಿ ಕುಡಿಯುವ ನೀರಿನ ಅಭಾವದಿಂದ ಖಾಸಗಿ ಟ್ಯಾಂಕರ್ ಗಳು ದುಪ್ಪಟ್ಟು ಹಣದ ಬೇಡಿಕೆ ಇಡುತ್ತಿದ್ದು, ಜನರಿಗೆ ಉಚಿತವಾಗಿ ನೀರು ಪೂರೈಸಬೇಕು ಹಾಗೂ ಕಾವೇರಿ ಸಂಪರ್ಕ ನೀಡಿರುವ ಮನೆಗಳಿಗೆ ಶೀಘ್ರ ನೀರು ಒದಗಿಸಬೇಕು ಎಂದು ಶುಕ್ರವಾರ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಶಿವಕುಮಾರ್ ಅವರು, “ಸದಸ್ಯರಾದ ರಾಮೋಜಿಗೌಡರು ಸೂಕ್ತ ಕಾಲದಲ್ಲಿ ಸೂಕ್ತ ವಿಚಾರ ಪ್ರಸ್ತಾಪಿಸಿದ್ದಾರೆ. ಶಿವರಾತ್ರಿ ಕಳೆದಿದ್ದು ಬೇಸಿಗೆ ತೀವ್ರತೆ ಹೆಚ್ಚಾಗಿ ಉಷ್ಣಾಂಶ ಏರಿಕೆಯಾಗಿದೆ. ಆದರೆ ಕಳೆದ ವರ್ಷ ಬಹಳ ಸಂಕಷ್ಟದ ಪರಿಸ್ಥಿತಿ ಎದುರಾಗಿತ್ತು. 7 ಸಾವಿರ ಕೊಳವೆಬಾವಿಗಳು ಬತ್ತಿದ್ದವು. ಹೀಗಾಗಿ ಖಾಸಗಿ ಟ್ಯಾಂಕರ್ ಗಳನ್ನು ಪಾಲಿಕೆ ಸುಪರ್ದಿಗೆ ತೆಗೆದುಕೊಳ್ಳಲಾಗಿತ್ತು. ಇದೇ 22ರಂದು ಜಲಸಂರಕ್ಷಣಾ ದಿನವಾಗಿದ್ದು ಒಂದು ತಿಂಗಳ ಕಾಲ ಜಲ ಸಂರಕ್ಷಣೆ ವಿಚಾರವಾಗಿ ಜಾಗೃತಿ ಅಭಿಯಾನ ಮಾಡಲು ತೀರ್ಮಾನಿಸಿದ್ದೇವೆ. ಕಾವೇರಿ 5ನೇ ಹಂತದ ಯೋಜನೆಯನ್ನು ಪೂರ್ಣಗೊಳಿಸಿ ನೀರನ್ನು ಹೊರ ತರಲಾಗಿದೆ. 110 ಹಳ್ಳಿಗಳಿಗೆ ನೀಡಲು ವ್ಯವಸ್ಥೆ ಮಾಡಲಾಗಿದೆ” ಎಂದು ತಿಳಿಸಿದರು.

“ಗುತ್ತಿಗೆದಾರರು ದೊಡ್ಡ ದೊಡ್ಡ ಅಪಾರ್ಟ್ ಮೆಂಟ್ ಗಳನ್ನು ಕಟ್ಟಿದ್ದು, ಯಾರೊಬ್ಬರೂ ಬಿಡಬ್ಲ್ಯೂಎಸ್ಎಸ್ ಬಿ ಗೆ ನೀರಿನ ಸಂಪರ್ಕದ ಡೆಪಾಸಿಟ್ ಪಾವತಿ ಮಾಡಿಲ್ಲ. ಅನುಮತಿ ಪಡೆಯದೇ ಅಕ್ರಮವಾಗಿ ಸಂಪರ್ಕ ಪಡೆದಿದ್ದಾರೆ. ಅವರಿಗೆ ನೋಟೀಸ್ ನೀಡಲಾಗಿದೆ. 2014ರಿಂದ ಇಲ್ಲಿಯವರೆಗೂ ನೀರಿನ ದರ ಏರಿಕೆ ಮಾಡಿಲ್ಲ. ಹೀಗಾಗಿ ನಾವು ಕನಿಷ್ಠ ಪಕ್ಷ ಒಂದು ಪೈಸೆಯಾದರೂ ನೀರಿನ ದರ ಏರಿಕೆ ಮಾಡಲು ತೀರ್ಮಾನಿಸಿದ್ದೇವೆ. ಇದರಿಂದ ಮಂಡಳಿ ಪ್ರತಿ ವರ್ಷ ಅನುಭವಿಸುತ್ತಿರುವ ಸುಮಾರು 1 ಸಾವಿರ ಕೋಟಿ ನಷ್ಟವನ್ನು ತಪ್ಪಿಸಬಹುದಾಗಿದೆ. ಮಂಡಳಿಯ ವಿದ್ಯುತ್ ಬಿಲ್ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಮಂಡಳಿಯವರು 7-8 ಪೈಸೆ ಏರಿಕೆಗೆ ಮುಂದಾಗಿದ್ದರು. ನಾನು ಸಧ್ಯಕ್ಕೆ 1 ಪೈಸೆಯಷ್ಟು ಮಾಡಿ ಸಾಕು ಎಂದು ಹೇಳಿದ್ದೇನೆ. ಪಾಲಿಕೆ ಬಜೆಟ್ ಕುರಿತ ಸಭೆ ವೇಳೆ ಬೆಂಗಳೂರಿನ ಶಾಸಕರನ್ನು ಕರೆದು ಸಭೆ ಮಾಡಿ ಚರ್ಚೆ ಮಾಡಲಾಗುವುದು” ಎಂದು ತಿಳಿಸಿದರು.

“ಇನ್ನು ಸದಸ್ಯರು ಪ್ರಸ್ತಾಪಿಸಿದ ನೀರಿನ ಸಂಪರ್ಕ ಹಾಗೂ ಟ್ಯಾಂಕರ್ ಗಳ ವಿಚಾರವಾಗಿ ಕ್ರಮ ಕೈಗೊಳ್ಳಲಾಗಿದ್ದು, ಟ್ಯಾಂಕರ್ ಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರು ನಗರ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಳ ಮಾಡುವ ಉದ್ದೇಶದಿಂದ ಬತ್ತಿರುವ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಮುಂದಾಗಿದ್ದೇವೆ. ಖಾಸಗಿ ಟ್ಯಾಂಕರ್ ಗಳದ್ದು ದೊಡ್ಡ ದಂಧೆಯಾಗಿದೆ. ಹೀಗಾಗಿ ಇದಕ್ಕಾಗಿ ಕನಿಷ್ಠ ದರ ನಿಗದಿ ಮಾಡಲಾಗಿದೆ. ಎಲ್ಲಿ ತುರ್ತಾಗಿ ನೀರನ್ನು ಪೂರೈಸಬಹುದೋ ಅದಕ್ಕೆ ಕ್ರಮ ಕೈಗೊಳ್ಳಲಾಗುವುದು. ಇದರ ಜತೆಗೆ ಭವಿಷ್ಯದ ಉದ್ದೇಶದಿಂದ ಕಾವೇರಿ 6ನೇ ಹಂತದ ಕುಡಿಯುವ ನೀರಿನ ಯೋಜನೆಗೆ ಪ್ಲಾನ್ ಸಿದ್ಧವಾಗಿದ್ದು, ಅದನ್ನು ಸಚಿವ ಸಂಪುಟದ ಮುಂದೆ ಪ್ರಸ್ತಾಪಿಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗುವುದು. ಜಲ ಸಂರಕ್ಷಣಾ ಅಭಿಯಾನದಲ್ಲಿ ನೀವೆಲ್ಲರೂ ಭಾಗವಹಿಸಬೇಕು. ಸಾರ್ವಜನಿಕರು ಹೆಚ್ಚಾಗಿ ಇದರಲ್ಲಿ ಭಾಗವಹಿಸುವಂತೆ ಮಾಡಬೇಕು. ಕುಡಿಯುವ ಉದ್ದೇಶಕ್ಕೆ ನೀಡುತ್ತಿರುವ ನೀರನ್ನು ಕರು ತೊಳೆಯಲು, ಗಿಡಗಳಿಗೆ ನೀರುಣಿಸಲು ಬಳಸಲಾಗುತ್ತಿದೆ. ಇನ್ನು ಮಳೆನೀರು ಕೊಯ್ಲು ಪದ್ಧತಿಯಲ್ಲಿ 3 ಅಡಿ ಜಾಗ ಬಿಡುವಾಗ ಅದರ ಮೇಲೆ ಕಾಂಕ್ರೀಟ್ ಹಾಕುತ್ತಿದ್ದಾರೆ. ಇದನ್ನು ತಪ್ಪಿಸಲು ಕಡ್ಡಾಯ ನಿಯಮ ರೂಪಿಸಲಾಗುತ್ತಿದೆ” ಎಂದು ತಿಳಿಸಿದರು.

ದೆಹಲಿಗೆ ಸರ್ವಪಕ್ಷದ ನಿಯೋಗ ಹೋಗಿ ಮನವಿ ಮಾಡೋಣ

ಬಿಜೆಪಿ ಸದಸ್ಯ ಕೇಶವ ಪ್ರಸಾದ್ ಅವರು, ಆಲಮಟ್ಟಿ ಸಂತ್ರಸ್ತರಿಗೆ ಒಂದೇ ಬಾರಿಗೆ ಪರಿಹಾರ ನೀಡುವ ಹಾಗೂ ಮಹಾರಾಷ್ಟ್ರ ತಗಾದೆ ಎತ್ತಿರುವ ವಿಚಾರದ ಬಗ್ಗೆ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಲಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು, “ಮಾನ್ಯ ಸದಸ್ಯರು ಪ್ರಶ್ನೆಯನ್ನು ಹಾಕುವುದರ ಜತೆಗೆ ಉತ್ತರವನ್ನು ಅವರೇ ಕೊಟ್ಟಿದ್ದಾರೆ. ಅವರಿಗೆ ಸಮಸ್ಯೆ ಏನಿದೆ ಎಂದು ಗೊತ್ತಾಗಿದೆ. ಅವರು ಉತ್ತಮ ಸಂಶೋಧನೆ ನೀಡಿದ್ದಾರೆ. ಈ ವಿಚಾರವಾಗಿ ನಾನು ಹೇಳುವುದೆಂದರೆ ಎಲ್ಲಾ ಪಕ್ಷದವರು ಸೇರಿ ನಿಯೋಗದ ಮೂಲಕ ದೆಹಲಿಗೆ ಭೇಟಿ ಮಾಡಿ ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗೆ ಅಧಿಸೂಚನೆ ಹೊರಡಿಸುವಂತೆ ಮನವಿ ಮಾಡೋಣ. ಇದು ತಾಂತ್ರಿಕ ವಿಷಯವಾಗಿದ್ದು ಈ ವಿಚಾರವಾಗಿ ಸೋಮವಾರ ವಿಸ್ತೃತವಾದ ಉತ್ತರ ನೀಡಲಾಗುವುದು” ಎಂದು ತಿಳಿಸಿದರು.

ಜನರನ್ನು ಸಂತೋಷವಾಗಿಡುವುದೇ ಈಶ್ವರನ ಸೇವೆ ಎಂದು ಕಾಲೆಳೆದ ಡಿಸಿಎಂ

ಈ ಸಂದರ್ಭದಲ್ಲಿ ಮಾತನಾಡಿದ ಸಿ.ಟಿ ರವಿ ಅವರು ಇಂದು ನೀವು ಬಹಳ ಪ್ರಸನ್ನರಾಗಿದ್ದು, ಬಹಳ ಲವಲವಿಕೆಯಿಂದ ಶುಭ ಶಕುನ ಏನಾದರೂ ಸಿಕ್ಕಿದೆಯೇ ಎಂದು ಕಾಲೆಳೆಯುವ ಪ್ರಯತ್ನ ಮಾಡಿದರು. ಈ ಮಧ್ಯೆ ವಿರೋಧ ಪಕ್ಷಗಳ ಇತರ ಶಾಸಕರು ನಿನ್ನೆಯಷ್ಟೇ ಭೋಜನ ಕೂಟ ಏರ್ಪಡಿಸಿದ್ದು ಶುಭ ಸುದ್ದಿ ಸಿಕ್ಕಿದೆಯೇ ಎಂದು ಧ್ವನಿಗೂಡಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಸಂತೋಷಂ ಜನೇತ್‌ ಪ್ರಾಜ್ಞಃ ತದೈವ ಈಶ್ವರಂ ಪೂಜ್ಯಂ ಎಂಬ ಶ್ಲೋಕವು ಜನರನ್ನು ಸಂತೋಪಡಿಸುವುದೇ ನಿಜವಾದ ಈಶ್ವರನ ಪೂಜೆ ಎಂಬ ಸಂದೇಶ ನೀಡುತ್ತದೆ. ಅದೇ ರೀತಿ ನಿಮಗೆ ಸಂತೋಷಪಡಿಸಿದರೆ ನಾನು ಸಂತೋಷ ಪಟ್ಟಂತೆ. ಆ ಪ್ರಯತ್ನದಲ್ಲಿ ನಾನಿದ್ದೇನೆ” ಎಂದು ನಗುತ್ತಲೇ ತಿರುಗೇಟು ನೀಡಿದರು.

ನಿಮಗೆ ಸಂತೋಷವಾಗುವ ಸುದ್ದಿ ಬರುವುದು ಯಾವಾಗ ಎಂದು ರವಿಕುಮಾರ್ ಅವರು ಮರು ಪ್ರಶ್ನೆ ಬಂದಾಗ, “ನಾನು 1984ರಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದು, ಅಂದಿನಿಂದ ಇಲ್ಲಿಯವರೆಗೂ ಹಂತ ಹಂತವಾಗಿ ಮೇಲೇರುತ್ತಿದ್ದೇನೆ. ನಿಮ್ಮ ಸಹಕಾರ, ಶುಭ ಹಾರೈಕೆ ಇರಲಿ. ನಿಮ್ಮ ಕಾಟದಿಂದಲೇ ನಾನು ಸ್ವಲ್ಪ ಕೆಳಗೆ ಕುಸಿದಿದ್ದೇನೆ. ನನ್ನನ್ನು ತಿಹಾರ್ ಜೈಲಿಗೆ ಕಳುಹಿಸಿ ಈಗ ಈ ರೀತಿ ಕೇಳುತ್ತಿದ್ದಾರೆ” ಎಂದು ಕಾಲೆಳೆದರು.

ಯಾರ ಬದುಕನ್ನು ಹೀಯಾಳಿಸಬಾರದು

ಶೂನ್ಯ ವೇಳೆ ನಂತರ ಅರ್ಧತಾಸು ಕಾಲಾವಧಿ ಚರ್ಚೆ ವೇಳೆ ಗ್ಯಾರಂಟಿ ಅನುಷ್ಠಾನ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಸದಸ್ಯರಾದ ಶರವಣ ಅವರು ಚರ್ಚೆ ಆರಂಭಿಸಿದರು. ನಂತರ ಕಾಂಗ್ರೆಸ್ ಸದಸ್ಯರು ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರು ಶರವಣ ಅವರು ಸರ್ಕಾರದಿಂದ ಯಾವ ನಿಯಮ ಉಲ್ಲಂಘನೆಯಾಗಿದೆ ಎಂದು ನೇರವಾಗಿ ಉಲ್ಲೇಖಿಸಿ ಪ್ರಶ್ನೆ ಮಾಡುತ್ತಿಲ್ಲ. ಹೀಗಾಗಿ ಅವರ ಪ್ರಶ್ನೆ ಅರ್ಥವಾಗುತ್ತಿಲ್ಲ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶರವಣ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರು ಬಹಳ ಬುದ್ಧಿವಂತರು. ಅವರು ಹಾಲು ಕುಡಿದಿರುವಷ್ಟು, ನಾನು ನೀರು ಕುಡಿದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು. ಇದರಿಂದ ಕೆಂಡವಾದ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಶರವಣ ಅವರ ಮಧ್ಯೆ ವಾಗ್ವಾದ ನಡೆಯಿತು.

ಈ ವೇಳೆ ಮಾತನಾಡಿದ ಶಿವಕುಮಾರ್ ಅವರು “ನಮ್ಮ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಹಿರಿಯ ಸದಸ್ಯರು, ಶರವಣ ಅವರೂ ಹಿರಿಯ ಸದಸ್ಯರು. ಆದರೆ ನೀರು ಹಾಗೂ ಹಾಲಿನ ಹೋಲಿಕೆ ಮಾಡುವುದು ಸರಿಯಲ್ಲ. ಹಾಲು ಕುಡಿಯಬಾರದಾ? ಕೆಲವರು ಹಾಲು ಕುಡಿದೇ ಬೆಳೆಯುತ್ತಾರೆ. ಹಾಗೆಂದು ಅವರ ಜೀವನವನ್ನು ಹೀಯಾಳಿಸಬಾರದು. ಉದಾಹರಣೆಗೆ ನಾನು ದಿನಾ ಬೆಳಗ್ಗೆ ವಿಸ್ಕಿಯನ್ನೇ ಕುಡಿಯುತ್ತೇನೆ ಎಂದು ಭಾವಿಸಿ. ಹಾಗೆಂದು ಚುಚ್ಚು ಮಾತುಗಳನ್ನು ಆಡಬಾರದು. ಪ್ರಿಯಾಂಕ್ ಖರ್ಗೆ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಅನೇಕ ತ್ಯಾಗ ಬಲಿದಾನದೊಂದಿಗೆ ಬೆಳೆದು ಬಂದಿದ್ದಾರೆ. ಅವರ ಕುಟುಂಬ ಹೋರಾಟ ಮಾಡಿಕೊಂಡೇ ಈ ಮಟ್ಟಕ್ಕೆ ಬಂದಿದೆ.

ಮಲ್ಲಿಕಾರ್ಜುನ ಖರ್ಗೆ ಅವರು ವಿಧಾನಸಭೆಯಲ್ಲಿ 50 ವರ್ಷಗಳ ಕಾಲ ಪ್ರತಿನಿಧಿಸಿದ್ದು, ಬ್ಲಾಕ್ ಅಧ್ಯಕ್ಷ ಸ್ಥಾನದಿಂದ ಇಂದು ರಾಷ್ಟ್ರಮಟ್ಟದವರೆಗೂ ಬೆಳೆದಿದ್ದಾರೆ. ಅವರು ನಮ್ಮ ಪಕ್ಷ ಹಾಗೂ ಸರ್ಕಾರದ ಧ್ವನಿ. ಪ್ರಿಯಾಂಕ್ ಖರ್ಗೆ ಅವರು ತಪ್ಪು ಮಾಡಿದ್ದರೆ ಅದನ್ನು ನೇರವಾಗಿ ಟೀಕೆ ಮಾಡಲಿ. ನಾವು ಶರವಣ ಅವರಿಗೆ ನೀವು ಚಿನ್ನ ಮಾರುತ್ತಿದ್ದೀರಿ, ನೀವು ಚಿನ್ನಕ್ಕೆ ಬೆಳ್ಳಿ, ತಾಮ್ರ, ಕಬ್ಬಿಣ ಹಾಕುತ್ತೀಯಾ ಎಂದು ಹೇಳಲು ಸಾಧ್ಯವಿಲ್ಲ” ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರ ಬೆಂಬಲಕ್ಕೆ ನಿಂತರು.

Related Posts

Leave a Reply

Your email address will not be published. Required fields are marked *