ಮೈಸೂರು: ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಮೈಸೂರು ಜಿಲ್ಲೆ ಐದನೇ ಸ್ಥಾನ, ಚಾಮರಾಜನಗರ ಒಂದನೇ ಸ್ಥಾನದಲ್ಲಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಪುಷ್ಪ ಅಮರನಾಥ್ ತಿಳಿಸಿದರು.
ಮೈಸೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ತಿಂಗಳು ತಾಲ್ಲೂಕು ಸಮಿತಿ ಸಭೆ ನಡೆಸಿ ಗ್ಯಾರಂಟಿ ಅನುಷ್ಠಾನದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಚಾಮರಾಜನಗರ ವೀಕ್ಷಣೆ ವೇಳೆ ಸೋಲಿಗರ ಕಾಲೋನಿಗೆ ಗ್ಯಾರಂಟಿ ಅನುಷ್ಠಾನ ಆಗಿರಲಿಲ್ಲ. ಬಳಿಕ ಎಲ್ಲರಿಗೂ ಅದನ್ನು ತಲುಪವಂತೆ ಮಾಡಲಾಯಿತು. ಹೀಗಿ ತಾಲ್ಲೂಕು ಸಮಿತಿ ಮುಂದಿನ ದಿನಗಳಲ್ಲಿ ಗ್ಯಾರಂಟಿ ನಡೆ ಪ್ರತಿ ಮನೆ ಕಡೆ ಎಂದು ಪಂಚಾಯಿತಿ ಹಂತಕ್ಕೂ ತಲುಪುವ ದೊಡ್ಡ ಮಟ್ಟದ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರದ್ದಿಗೆ ಬಿಜೆಪಿ ಆಗ್ರಹಿಸುತ್ತಿರುವುದು ಅವರೊಳಗಿನ ಭಯವನ್ನು ತೋರಿಸುತ್ತಿದೆ. ಆದರೆ, ಈ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಯಾವುದೇ ಕಾರಣಕ್ಕೂ ಸಮಿತಿ ನಿಲ್ಲಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಅಲ್ಲಿ ಕಾರ್ಯಕರ್ತರ ಮೂಲಕವೇ ಪರಿಶೀಲನೆ ನಡೆಸುತ್ತಿದೆ. ಹೀಗಿದ್ದರೂ ರಾಜಕೀಯಕ್ಕೆ ಸಮಿತಿ ವಿರೋಧಿಸುವ ಕೆಲಸ ಮಾಡುತ್ತಿದ್ದಾರೆ. ಸಮಿತಿಯಿಂದ ಶಾಸಕ, ಸಂಸದರ ಯಾವುದೇ ಹಕ್ಕು ಚ್ಯುತಿ ಆಗುವುದಿಲ್ಲ. 54 ಸಾವಿರ ಕೋಟಿ ಬೃಹತ್ ಹಣ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸೇವೆ ಮಾಡುವ ಉದ್ದೇಶದಿಂದ ಸರ್ಕಾರ ಸಮಿತಿ ರಚಿಸಿದೆ ಎಂದರು.
ಸದ್ಯ ಎಲ್ಲಾ ಕಡೆ ಸಮಿತಿ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿ ಜನರಿಗೆ ಯೋಜನೆ ತಲುಪಿಸುತ್ತಿರುವುದನ್ನು ನೋಡಿ ಸಹಿಸಲಾಗದ ಬಿಜೆಪಿ ಸಮಿತಿ ತೆಗೆಯುವ ಪ್ರಸ್ತಾಪ ಮಾಡಿದ್ದಾರೆ. ಇವರ ಪ್ರಶ್ನೆಗೆ ನಾವು ಮತ್ತಷ್ಟು ಜನರ ಬಳಿಗೆ ತೆರಳಿ ಅಭಿವೃದ್ಧಿ, ಯೋಜನೆ ಕೊಂಡೊಯ್ಯುವ ಕೆಲಸದ ಮೂಲಕ ಬಿಜೆಪಿಗೆ ಉತ್ತರ ನೀಡುತ್ತೇವೆ. ಸಮಿತಿಗೆ ನೀಡುತ್ತಿರುವ ಗೌರವಧನ ಎನೇನೂ ಅಲ್ಲ. ಅದಾಗಿಯೂ ಸಮಿತಿ ಅಧ್ಯಕ್ಷ, ಸದಸ್ಯರು ಜನರಿಗಾಗಿ ನಿರಂತರ ದುಡಿಮೆಯಲ್ಲಿದ್ದಾರೆಂದು ಹೇಳಿದರು.
ಕೇವಲ 60 ದಿನ ಕೊಡಿ ಭವಿಷ್ಯ ಬದಲಿಸುತ್ತೆವೆಂದು ಆಡಳಿತಕ್ಕೆ ಬಂದ ಕೇಂದ್ರ ಬಿಜೆಪಿ ಪೆಟ್ರೋಲ್, ಅನಿಲ ದರ ಏರಿಕೆ ಮಾಡಿವೆ. ಯಾವುದೇ ಉದ್ಯೋಗ ಸೃಷ್ಠಿ ಮಾಡದೇ ಜನ ಸಂಕಷ್ಟದಲ್ಲಿದ್ದಾರೆ. ಈಗ ದೇಶದಲ್ಲಿ ಕೈ ಹಿಡಿದಿರುವುದು ಎರಡೇ ಒಂದು ಅನ್ನಭಾಗ್ಯ ಮತ್ತೊಂದು ನರೇಗಾ ಯೋಜನೆಗಳಾಗಿದ್ದು ಅದು ಕಾಂಗ್ರೆಸ್ ಬದುಕು ಕಟ್ಟಿಕೊಡುವ ಯೋಜನೆಗಳಾಗಿವೆ ಎಂದು ಹೇಳಿದರು.
ಗೃಹ ಲಕ್ಷ್ಮಿ ಹಣ ಮೂರು ತಿಂಗಳಿಂದ ನಿಂತಿತ್ತು, ಈಗ ಹಂತ ಹಂತವಾಗಿ ಬಿಡುಗಡೆಯಾಗಲಿದೆ. ಇನ್ನೂ ತಾಂತ್ರಿಕ ಸಮಸ್ಯೆಗಳಿಗೂ ಸಮಿತಿ ಪರಿಹಾರ ಕಲ್ಪಿಸಲಾಗುತ್ತಿದೆ. ಅರ್ಹತರಿದ್ದು, ದಾಖಲೆಗಳು ಸಮಂಜಸವಾಗಿದ್ದಾರೆ. ಅಂತಹವರಿಗೆ ಗ್ಯಾರಂಟಿ ಯೋಜನೆ ತಲುಪದಿರಲು ಅಸಾಧ್ಯ. ಅಂತಹ ಪ್ರಕರಗಳಿದ್ದರೆ ಸಮಿತಿ ಬಗೆಹರಿಸಲಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣ ಅಂಕಿ- ಅಂಶ ಕೊಡುವುದಾಗಿ ಹೇಳಿದರು.
16ನೇ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಎಲ್ಲರ ಪರವಾಗಿ ಅಭಿನಂದಿಸುತ್ತೇನೆ. ದೇಶವೇ ಮೆಚ್ಚುವ ಸಮತೋಲನ ಸಿದ್ಧಾಂತ ಇಟ್ಟುಕೊಂಡ ದೂರದೃಷ್ಟಿಯ ಬಜೆಟ್ ಕೊಡುಗೆ ನೀಡಿದ್ದಾರೆ. ಬಿಜೆಪಿ ಧರ್ಮ ರಾಜಕಾರಣಕ್ಕೆ ಅಲ್ಪಸಂಖ್ಯಾತರ ಬಜೆಟ್ ಎನ್ನುತ್ತಿದ್ದಾರೆ.
ಅಲ್ಪಸಂಖ್ಯಾತರೆಂದರೆ ಜೈನ, ಬೌದ್ಧ, ಕ್ರೈಸ್ತರೂ ಸೇರಿದ್ದಾರೆ. 4 ಲಕ್ಷ ಕೋಟಿ ಬಜೆಟ್ ನಲ್ಲಿ 4 ಸಾವಿರ ಕೋಟಿಯನ್ನಷ್ಟೇ ನೀಡಲಾಗಿದೆ. ಬಿಜೆಪಿ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಈ ಬಗ್ಗೆ ಮುಕ್ತ ಚರ್ಚೆಗೂ ಸವಾಲು ಹಾಕುತ್ತೇನೆಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಅರುಣ್ ಕುಮಾರ್, ವಕೀಲರಾದ ಚಂದ್ರಶೇಖರ್, ಮುಖಂಡರಾದ ಬಸವಣ್ಣ, ಲತಾ ಇನ್ನಿತರರು ಉಪಸ್ಥಿತರಿದ್ದರು.