Menu
12

ಖಾತೆ ಬದಲಾವಣೆ ಯಾತನೆಗೆ ಯಾರು ಹೊಣೆ?

home

ಕೆರೆ, ಕುಂಟೆ, ಗೋಮಾಳ, ಗುಂಡು ತೋಪು ಮತ್ತು ಗ್ರೀನ್ ಬೆಲ್ಟ್ ವಲಯದಲ್ಲಿ ತಲೆಯೆತ್ತಿದ್ದ ಕಟ್ಟಡಗಳೆಲ್ಲವೂ ಎ ಖಾತೆಗಳಾಗಿ ಪರಿವರ್ತಿತವಾಗಿರುವುದು ಭ್ರಷ್ಟ ಅಧಿಕಾರಿಗಳ ಕೈಚಳಕದಿಂದ.

ಇದು ಆಸ್ತಿಗಳ ಖಾತೆ ಬದಲಾವಣೆಯೋ, ಬವಣೆಯೋ. ವ್ಯವಸ್ಥೆಯೋ, ದುರವಸ್ಥೆಯೋ. .? ರಾಜಧಾನಿ ಬೆಂಗಳೂರು ಸೇರಿದಂತೆ ನಾಡಿನ ಎಲ್ಲ ಕಡೆ ಸ್ಥಿರಾಸ್ತಿಗಳ ಖಾತೆ ಬದಲಾವಣೆಯ ಮಹಾ ಕಳವಳ ಶುರುವಾಗಿದೆ. ಅದರಲ್ಲಿಯೂ ಮುಖ್ಯವಾಗಿ ವಸತಿ ನಿವೇಶನಗಳ ಖಾತೆಗಳ ವಿಚಾರದಲ್ಲಿ ತಲೆದೋರಿರುವ ಗೊಂದಲ ಮತ್ತು ಸಂದಿಗ್ಧತೆಯನ್ನಿಲ್ಲಿ ಪ್ರಸ್ತಾಪಿಸಲಾಗುತ್ತಿದೆ. ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಸ್ಥಿರಾಸ್ತಿಗಳ ಹಣೆಬರಹವೇನು? ಯಾವುದು ಬಿ ಖಾತೆ ಮತ್ತು ಎ ಖಾತೆ? ಈ ಖಾತೆ ಸ್ವರೂಪವೇನು? ಡಿಸಿ ಪರಿವರ್ತನೆ ಹೊಂದಿದ ನಿವೇಶನಗಳ ಗ್ರಹಚಾರವೇನು? ಕಂದಾಯ ಭೂಮಿಯಲ್ಲಿ (ರೆವಿನ್ಯೂ ಲ್ಯಾಂಡ್) ಅಸಲಿಗೆ ಯಾವ ಮಂಜೂರಾತಿ ಅಥವಾ ಅನುಮತಿ ಇಲ್ಲದೆ ಮನೆ, ಮಂದಿರ, ಮಠ , ಮಸೀದಿ ಮತ್ತು ಅಪಾರ್ಟ್‌ಮೆಂಟುಗಳನ್ನು ರಾಜಾರೋಷವಾಗಿ ಕಟ್ಟಲು ಅನುಮತಿ ನೀಡಿದವರು ಯಾರು? ಇದರ ಹಿಂದೆ ಯಾರ್‍ಯಾರ ಕೈವಾಡವಿದೆ?

ಎರಡು ವಾರಗಳ ಹಿಂದೆ ರಾಜ್ಯ ಸಂಪುಟ ಸಭೆಗೆ ಕಂದಾಯ ಭೂಮಿಯಲ್ಲಿ ತಲೆಯೆತ್ತಿರುವ ಲಕ್ಷಾಂತರ ಕಟ್ಟಡಗಳಿಂದ ರಾಜ್ಯದ ಬೊಕ್ಕಸಕ್ಕೆ ಒಂದು ನಯಾಪೈಸೆ ತೆರಿಗೆಯೂ ಬರುತ್ತಿಲ್ಲ ಎಂಬ ಜ್ಞಾನೋದಯ ಆಯಿತು. ಸರ್ಕಾರಕ್ಕೆ ಇಂತಹ ಜ್ಞಾನೋದಯ ಆಗಲು ದಶಕಗಳೇ ಬೇಕಾಯಿತು! ಏಕೆಂದರೆ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ನಷ್ಟ ಉಂಟಾಗಲು ಸರ್ಕಾರಗಳೇ ಕಾರಣ. ಈ ಸತ್ಯವನ್ನು ಸರ್ಕಾರಗಳು ಈಗಲೂ ಒಪ್ಪಿಕೊಳ್ಳಲು ತಯಾರಿಲ್ಲ. ಏಕೆಂದರೆ ಕಿಂಗ್ ಈಸ್ ಎಬೋವ್ ದಿ ಲಾ ಅಲ್ಲವೇ?

ಬಿಡಿಎ ಮತ್ತು ಗೃಹ ಮಂಡಳಿ ಅಲ್ಲದೆ ಪಂಚಾಯ್ತಿ ಮತ್ತು ಪುರಸಭೆ, ನಗರಸಭೆಗಳಲ್ಲಿ ಯಾವಾಗ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ಶುರುವಾಯಿತೋ, ಅಂದೇ ಕಂಟ್ರಿ ಅಂಡ್ ಟೌನ್ ಪ್ಲಾನಿಂಗ್ ಕಾಯಿದೆಯ ಎಲ್ಲ ನಿಯಮಾವಳಿಗಳು ನೆಲಸಮಾಧಿ ಆದವು. ಇದೊಂದು ರೀತಿಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದ ಕತೆ! ಹೇಗೆಂದರೆ, ನಗರ ಮತ್ತು ಪಟ್ಟಣಗಳ ಆರೋಗ್ಯಕರ ಬೆಳವಣಿಗೆಯನ್ನು ಸಂರಕ್ಷಿಸಬೇಕಿರುವ ಸ್ಥಳೀಯ ಸಂಸ್ಥೆಗಳೇ ದುಡ್ಡಿನ ಆಸೆಗಾಗಿ ಬೇಕಾಬಿಟ್ಟಿ ಕಟ್ಟಡಗಳ ನಿರ್ಮಾಣಕ್ಕೆ ರೆಡ್ ಕಾರ್ಪೆಟ್ ಹಾಕಿದ್ದರಿಂದ ರಿಯಲ್ ಎಸ್ಟೇಟ್ ಎಂಬ ಬ್ರಹ್ಮರಾಕ್ಷಸನ ಅಟ್ಟಹಾಸಗಳ ಪರ್ವ ಶುರುವಾಗಲು ಕಾರಣವೂ ಆಗಿದೆ. ಸಮಾಜಕ್ಕೆ ಮತ್ತು ರಾಜ್ಯಕ್ಕೆ ಮಹಾಕಂಟಕವಾದ ಈ ರಾಕ್ಷಸನನ್ನು ಒಂದೇ ಏಟಿಗೆ ಸಂಹರಿಸುವ ಧೀರ ಮತ್ತು ಪ್ರಜಾಹಿತ ಸರ್ಕಾರ ಇದುವರೆಗೆ ನಮಗೆ ದಕ್ಕದೆ ಇರುವುದು ಈ ಜನತೆ ಮಾಡಿಕೊಂಡ ಮಹಾದೌರ್ಭಾಗ್ಯ!

ಹತ್ತು ವರ್ಷಗಳ ಹಿಂದೆ ಸುಪ್ರೀಂಕೋರ್ಟ್ ಮುಂದೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಅಕ್ರಮ ಕಟ್ಟಡಗಳಿಗೆ ಸಂಬಂಧಿಸಿದ ರಿಟ್ ಅರ್ಜಿ ವಿಚಾರಣೆ ನಡೆದ ಸಂದರ್ಭದಲ್ಲಿ, ನ್ಯಾಯಾಧೀಶರು ರಾಜ್ಯದ ಅಂದಿನ ಅಡ್ವೋಕೇಟ್ ಜನರಲ್ ( ಉದಯ್ ಹೊಳ್ಳ) ಅವರಿಗೆ ಕೇಳಿದ ಪ್ರಶ್ನೆ ಇದು. ಕಟ್ಟಡ ಅನುಮೋದನೆಯೇ ಇಲ್ಲದೆ ಬೆಂಗಳೂರಿನಲ್ಲಿ ಲಕ್ಷಾಂತರ ಅಕ್ರಮ ಕಟ್ಟಡಗಳು ತಲೆಯತ್ತಿದ್ದು ಹೇಗೆ? ಅದಕ್ಕೆ ಸರ್ಕಾರದ ಕಡೆಯಿಂದ ಬಂದ ಉತ್ತರಗಳನ್ನು ಕೋರ್ಟ್ ಒಪ್ಪಲಿಲ್ಲ. ಒಂದಲ್ಲ, ಎರಡಲ್ಲ, ಬೆಂಗಳೂರಿನ ಎಂಟೂ ದಿಕ್ಕುಗಳಲ್ಲಿ ಕಳೆದ ಇಪ್ಪತ್ತು ವರ್ಷಗಳ ಅವಧಿಯಲ್ಲಿ ತಲೆ ಎತ್ತಿದ ಅಕ್ರಮ ಕಟ್ಟಡಗಳ ಸಂಖ್ಯೆ ಶೇ. ಐವತ್ತರಷ್ಟು.. ! ಇದು ಸಾಮಾನ್ಯ ವಿಷಯವೇನಲ್ಲ. ಶೇ ೫೦ಕ್ಕೂ ಅಧಿಕ ಪ್ರಮಾಣದಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತಿವೆ ಎಂದರೆ ಇದಕ್ಕೆ ಯಾರ್‍ಯಾರ ಕೊಡುಗೆ ಇದೆ ಎಂಬುದು ಇಲ್ಲಿ ಅತಿ ಮುಖ್ಯ. ಬೆಂಗಳೂರಿನಂತಹ ಮಹಾನಗರದಲ್ಲಿ ಒಂದು ರೆವಿನ್ಯೂ ಸೈಟಿನಲ್ಲಿ ಬಿಲ್ಡಿಂಗ್ ಪ್ಲಾನ್ ಮಂಜೂರಾತಿ ಇಲ್ಲದೆ ಮನೆಯೊಂದು ನಿರ್ಮಾಣ ಆಗುವುದೆಂದರೆ ಇದರಲ್ಲಿ ಓರ್ವ ಕಟ್ಟಡ ಮಾಲಿಕ ಅಥವಾ ಓರ್ವ ಇಂಜನಿಯರ್ ಮಾತ್ರವೇ ಭಾಗಿಗಳೆಂಬುದು ಸುಳ್ಳು.

ನೀವು ಮನೆ ಅಥವಾ ಅಪಾರ್ಟ್‌ಮೆಂಟ್ ಕಟ್ಟಿ. ನಿಮಗೆ ಸದ್ಯ ಕರೆಂಟ್ ನೀರು ಕೊಡ್ತೇವೆ. ಮುಂದೆ ಅಕ್ರಮ ಸಕ್ರಮ ಸ್ಕೀಂನಲ್ಲಿ ನಿಮ್ಮ ಕಟ್ಟಡ ಲೀಗಲೈಸ್ ಆಗುತ್ತೆ.. ಈ ರೀತಿ ಭರವಸೆಗಳನ್ನು ಬರೀ ಒಬ್ಬ ಕಾರ್ಪೋರೇಷನ್ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜನಿಯರ್ ಮಾತ್ರ ಕೊಡಲು ಸಾಧ್ಯವಿಲ್ಲ. ಅಂತಹ ಮನೆ ಅಥವಾ ಅಪಾರ್ಟ್‌ಮೆಂಟ್ ಬರುವ ವಾರ್ಡ್‌ನ ಕಾರ್ಪೋರೇಟರ್, ಕೌನ್ಸಿಲರ್, ಶಾಸಕ ಇವರೆಲ್ಲರೂ ಭಾಗಿಗಳೇ! ಇದು ಇಲ್ಲಿಗೇ ನಿಲ್ಲಲಿಲ್ಲ. ಕಳೆದ ಎರಡು ದಶಕಗಳಲ್ಲಿ ಇಂತಹ ಅಕ್ರಮ ಕಟ್ಟಡಗಳ ಸರಮಾಲೆಯೇ ಮಿತಿಮೀರಿದಾಗಲೂ ಯಾವೊಬ್ಬ ಜನಪ್ರತಿನಿಧಿಯೂ ಇದರ ಮಾರಕತ್ವದ ಬಗ್ಗೆ ಶಾಸನಸಭೆಗಳಲ್ಲಿ ಚರ್ಚೆ ಮಾಡಲಿಲ್ಲ. ಅಕ್ರಮ ಕಟ್ಟಡಗಳು ತಲೆ ಎತ್ತಲು ಯಾರು ಕಾರಣ? ಬೆಂಗಳೂರು ಯಾಕಿಂದು ಅಕ್ರಮ ಕಟ್ಟಡಗಳ ಮಹಾನರಕ ನಗರವಾಗಿದೆ? ಇದಕ್ಕೆ ಮzನು? ಅಕ್ರಮಗಳನ್ನು ನಿವಾರಿಸಲು ಸರ್ಕಾರದ ಬಳಿಯಿರುವ ಕಾನೂನಾತ್ಮಕ ಪರಿಹಾರವೇನು? ಸುಪ್ರೀಂಕೋರ್ಟ್ ಮುಂದೆ ಅಡ್ವೋಕೇಟ್ ಜನರಲ್ ಸರ್ಕಾರದ ಪರವಾಗಿ ವಾದವನ್ನು ಮಂಡಿಸುವ ಸಂದರ್ಭದಲ್ಲಿ ಶೇ.೫೦ರಷ್ಟು ಬೆಂಗಳೂರಿನಲ್ಲಿ ಇಂತಹ ಕಟ್ಟಡಗಳೇ ತುಂಬಿವೆ ಎಂದಿದ್ದು ನಿಜ. ಇದಕ್ಕೆ ನ್ಯಾಯಪೀಠ ಕೆಂಡಾಮಂಡಲವಾಗಿದ್ದೂ ನಿಜ. ಅಕ್ರಮಗಳನ್ನು ಸಕ್ರಮಗೊಳಿಸುವ ಕೆಲಸಕ್ಕೆ ನಾವಂತೂ ಅವಕಾಶ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಖಡಾಖಂಡಿತವಾಗಿ ಹೇಳಿ ಒಂದು ದಶಕವೇ ಕಳೆದಿದೆ. ಇನ್ನು ಸರ್ಕಾರಗಳು ಅಕ್ರಮ, ಸಕ್ರಮಕ್ಕೆ ಕೈ ಹಾಕುವುದಾದರೂ ಹೇಗೆ?

ಹೌದು. ಬೆಂಗಳೂರಿಂದು ದೇಶದ ರಾಜಧಾನಿ ದೆಹಲಿಗಿಂತಲೂ ದೇಶ ವಿದೇಶಿಗರಿಗೆ ಸಮೀಪವಾಗಿದೆ. ರಿಯಲ್ ಎಸ್ಟೇಟ್‌ದಾರರ ಪಾಲಿಗಂತೂ ಇದು ಸ್ವರ್ಗವೇ ಆಗಿದೆ ! ಭ್ರಷ್ಟತೆಯನ್ನು ಮೆರೆಯುತ್ತಿರುವ ಅಧಿಕಾರಿಗಳು ಮತ್ತು ರಾಜಕಾರಣಿಗಳ ಪಾಲಿಗೂ ಇದು ಚಿನ್ನದ ಮೊಟ್ಟೆ ಆಗಿದೆ. ಸಿಕ್ಕ ಸಿಕ್ಕ ಕಡೆ ಗಗನಚುಂಬಿ ಕಟ್ಟಡಗಳು ಮಿಂಚಿನ ವೇಗದಲ್ಲಿ ತಲೆ ಎತ್ತುತ್ತಿವೆ. ರಾಜಧಾನಿ ಸುತ್ತಮುತ್ತಲಿನ ಕೃಷಿಭೂಮಿಗಳ ಮೂಲ ಸ್ವರೂಪವಂತೂ ಅನಾಹುತಕಾರಿ ಪ್ರಮಾಣದಲ್ಲಿ ಬದಲಾಗಿವೆ, ಕೆರೆ, ಕುಂಟೆಗಳು ಮತ್ತು ರಾಜಕಾಲುವೆಗಳು ಇರಬೇಕಾದ ಜಾಗದಲ್ಲಿ ವೈಭವೀ ವಿಲಾಸಿ ಮತ್ತು ಹೈಟೆಕ್ ಕಟ್ಟಡಗಳು ಹರಡಿಕೊಂಡಿವೆ. ಇವುಗಳ ನಿರ್ಮಾಣಕ್ಕೆ ಕಾನೂನಿನಡಿ ಅವಕಾಶವಿಲ್ಲ. ಹಸಿರು ವಲಯದಲ್ಲಿ ರಾಜಾರೋಷವಾಗಿ ಕಟ್ಟಡಗಳು ಬೃಹಾದಾಕಾರ ಪ್ರಮಾಣದಲ್ಲಿ ಎದ್ದು ನಿಂತಿವೆ! ಕೃಷಿ ಭೂಮಿಯನ್ನು ಕೃಷಿಯೇತರ ಉzಶಕ್ಕೆ ಬಳಸಲಾಗುವುದೆಂಬ ನಿಂiiಮಾವಳಿಗಳೂ ವ್ಯಾಪಕ ಅಕ್ರಮ ಮತ್ತು ಲಂಚಗುಳಿತನಕ್ಕೆ ಕಾರಣವಾಗಿದೆ. ಮಿಗಿಲಾಗಿ ಯೋಜನಾ ಪ್ರಾಧಿಕಾರ ರೂಪಿಸಿರುವ ಕಟ್ಟುನಿಟ್ಟಿನ ನಿಯಮಾವಳಿಗಳಿಗೆ ತದ್ವಿರುದ್ಧವಾಗಿ ಭ್ರಷ್ಟ ರಿಯಲ್ ಎಸ್ಟೇಟ್ ಕಪಿಮುಷ್ಠಿ ಮತ್ತು ಪಾರುಪತ್ಯ ಮುಂದುವರಿದಿದೆ. ಒಟ್ಟಿನಲ್ಲಿ ಇದರಿಂದ ಸರ್ಕಾರಕ್ಕೆ ಇದುವರೆಗೂ ಆಗಿರುವ ನಷ್ಟದ ಪ್ರಮಾಣವೆಷ್ಟು ಅಪಾರ. ಇಂತಹ ಲಕ್ಷಾಂತರ ಕಟ್ಟಡಗಳಿಂದ ಸರ್ಕಾರಕ್ಕೆ ಬರಬೇಕಿರುವ ತೆರಿಗೆಯೇ ಸಂಪೂರ್ಣ ಸ್ಥಗಿತಗೊಂಡಿದೆ. ಆಸ್ತಿ ತೆರಿಗೆಯನ್ನು ಸರ್ಕಾರ ಕಟ್ಟಡ ಮಾಲಿಕರಿಂದ ವಸೂಲು ಮಾಡಬೇಕಾದರೆ ಇವೆಲ್ಲ ಆಸ್ತಿಗಳ ಖಾತೆ ನೋಂದಣಿ ಸಕ್ರಮವಾಗಿಸಬೇಕು. ಕಟ್ಟಡಗಳ ಮಾಲಿಕರಿಗೆ ಕಾನೂನುಬದ್ಧವಾದ ಖಾತೆಗಳನ್ನು ನೀಡುವುದು ಸರ್ಕಾರದ ಹೊಣೆಗಾರಿಕೆ. ಆದರ ಈ ವಿಚಾರದಲ್ಲಿ ಸರ್ಕಾರದ ಜಾಣಕುರುಡುತನದಿಂದ ತಾನು ಮಾಡಿದ ಕರ್ಮವನ್ನು ತಾನೇ ಈಗ ಅನುಭವಿಸುವಂತಾಗಿ ಖೆಡ್ಡದಲ್ಲಿ ಬಿದ್ದಿದೆ.

ಬಹಳಷ್ಟು ಕಡೆ ಗೋಮಾಳ ಮತ್ತು ಭೂ ಮಂಜೂರಾತಿ (ಲ್ಯಾಂಡ್ ಗ್ರಾಂಟ್) ಅನ್ವಯ ಮಂಜೂರಾದ ಜಮೀನುಗಳಲ್ಲಿ ಮತ್ತು ಗುಂಡು ತೋಪು ಮತ್ತು ಸಾಮಾಜಿಕ ಅರಣ್ಯದ ಜಾಗಗಳಲ್ಲಿ ಕಟ್ಟಡಗಳು ತಲೆ ಎತ್ತಿವೆ. ಹೇಳಬೇಕೆಂದರೆ ಹಿಂದಿನ ದೇವರಾಜ ಅರಸು ಸರ್ಕಾರ ವಸತಿ ಹೀನರು ಅವರು ಸ್ವಂತ ಸೂರು ಹೊಂದಿರಲೆಂದು ನಾಡಿನ ಬಡವರು ಮತ್ತು ನಿರ್ಗತಿಗರಿಗೆ ಸರ್ಕಾರ ಉಚಿತವಾಗಿ ನೀಡಿದ್ದ ಭೂಮಿ. ಇಂತಹ ನಿವೇಶನಗಳನ್ನು ಮೂಲ ಫಲಾನುಭವಿ ಬೇರೆಯವರಿಗೆ ಪರಭಾರೆ ಮಾಡುವುದು ಕಾನೂನುಬಾಹಿರ. ಹಾಗಾದರೆ ಇಂತಹ ಜಮೀನುಗಳಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ತಲೆ ಎತ್ತಿರುವುದು ಹೇಗೆ? ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರವನ್ನ ಪ್ರತಿ ಹಿಯರಿಂಗ್‌ನಲ್ಲಿ ಕೇಳುತ್ತಿರುವ ಪ್ರಶ್ನೆ ಇದೇ. ಇದಕ್ಕೆ ಸರಿಯಾದ ಉತ್ತರವಂತೂ ಸರ್ಕಾರದ ಬಳಿ ಇಲ್ಲ. ವಸ್ತು ಸ್ಥಿತಿ ಹೀಗಿರಬೇಕಾದರೆ ಇಂತಹ ಜಾಗದಲ್ಲಿ ತಲೆ ಎತ್ತಿದ ಕಟ್ಟಡಗಳಿಗೆ ಬಿಬಿಎಂಪಿ ಅಥವಾ ನಗರಸಭೆಗಳು ಎ ಖಾತೆ ನೀಡಲು ಹೇಗೆ ಸಾಧ್ಯ? ರಾಜ್ಯದ ಹಿಂದಿನ ರಾಜ್ಯಪಾಲರೂ ಆಗಿದ್ದ ಎಚ್ ಆರ್ ಭಾರದ್ವಾಜ್, ಕಟ್ಟಡಗಳ ಅಕ್ರಮ-ಸಕ್ರಮದ ವಿಚಾರದಲ್ಲಿ ಅಂದಿನ ಸರ್ಕಾರಕ್ಕೆ ನೀಡಿದ್ದ ಒಂದು ಎಚ್ಚರಿಕೆಯನ್ನು ಇಲ್ಲಿ ಗಮನಿಸಬೇಕಿದೆ. ಅಕ್ರಮವಾಗಿ ತಲೆಯೆತ್ತಿರುವ ಕಟ್ಟಡಗಳ ಸಕ್ರಮೀಕರಣಕ್ಕೆ ನಾನು ರಾಜ್ಯಪಾಲನಾಗಿ ಒಪ್ಪಿಗೆ ನೀಡಿದರೆ, ಇದರಿಂದ ಅನ್ಯಾಯಗಳ ಫ್ಲಡ್‌ಗೇಟ್‌ಗಳನ್ನೇ ತೆರೆದಂತಾಗುತ್ತದೆ. ಭ್ರಷ್ಟ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸರ್ಕಾರವೇ ಕುಮ್ಮಕ್ಕು ನೀಡಿದಂತಾಗುತ್ತೆ. ಸರ್ಕಾರದ ಈ ಪ್ರಸ್ತಾವನೆಯೇ ಸಂವಿಧಾನಬಾಹಿರ. ಖಾತೆ ಬದಲಾವಣೆಗಳ ಕರ್ಮಕಾಂಡ ಇಲ್ಲಿಗೇ ಮುಗಿಯುವುದಿಲ್ಲ. ಕಳೆದ ಎರಡು ದಶಕಗಳ ಅವಧಿಯಲ್ಲಿ ಗ್ರೀನ್ ಬೆಲ್ಟ್ ನುಂಗಿ ನೀರಿಳಿಸಿದವರು ಮತ್ತು ಇದಕ್ಕೆ ಕುಮ್ಮಕ್ಕು ನೀಡಿದವರು, ರೆವಿನ್ಯೂ ಜಮೀನಿನಲ್ಲಿ ಎಗ್ಗಿಲ್ಲದೆ ಕಟ್ಟಡ ನಿರ್ಮಿಸಲು ಕಾರಣರಾದವರ ಜಾತಕ ಬಯಲಾಗುವ ಕಾಲ ಸನ್ನಿಹಿತವಾದಂತಿದೆ. ಪ್ರಾಯಶಃ ಇದಕ್ಕೆ ಖಾತೆ ಬದಲಾವಣೆಯ ನೂರೊಂದು ಬವಣೆಗಳೇ ಕಾರಣವಾಗಬಹುದು.

ಕಾಲಯಾನ
ಪಿ.ರಾಜೇಂದ್ರ. ಹಿರಿಯ ಪತ್ರಕರ್ತ

Related Posts

Leave a Reply

Your email address will not be published. Required fields are marked *