ಬೆಂಗಳೂರು: ಗ್ಯಾರಂಟಿಯಿಂದ ಜನ ಸೋಂಬೇರಿಗಳಾಗ್ತಾರೆ. ಕರ್ನಾಟಕ ದಿವಾಳಿಯಾಗುತ್ತೆ ಎನ್ನುತ್ತಿದ್ದ ಬಿಜೆಪಿ ಇದೀಗ ಶಾಸಕರ ನೇತೃತ್ವದಲ್ಲಿಯೇ ಗ್ಯಾರಂಟಿ ಸಮಿತಿ ರಚನೆಯಾಗಬೇಕು ಎಂಬರ್ಥದಲ್ಲಿ ಮಾತನಾಡಿದ್ದಾರೆ. ಅಲ್ಲಿಗೆ ಕಾಂಗ್ರೆಸ್‌ನ ಗ್ಯಾರಂಟಿ ಲಾಭ ನಷ್ಟಗಳ ಲೆಕ್ಕಾಚಾರದ ನಡುವೆಯೂ ಗೆದ್ದಿದೆ ಎನ್ನಬಹುದು.
ಪ್ರತಿಪಕ್ಷ ನಾಯಕ ಆರ್.ಅಶೋಕ್, ಗ್ಯಾರಂಟಿ ಕಮಿಟಿಗಳಿಂದ ಶಾಸಕರ ಅಧಿಕಾರ ಮೊಟುಕುಗೊಳ್ಳುತ್ತಿದೆ ಎಂಬುದನ್ನು ಸದನದಲ್ಲಿ ಕೂಗಿ ಹೇಳಿದರು. ಶಾಸಕರು ಇದ್ದರೂ, ಗ್ಯಾರಂಟಿ ಸಮಿತಿಯ ಹಸರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಧಿಕಾರ ಚಲಾಯಿಸುತ್ತಿದ್ದಾರೆ ಎಂದು ಟೀಕಿಸಿದರು. ಅವರಿಗಾಗಿ ವಾರ್ಷಿಕವಾಗಿ ಕೋಟ್ಯಂತರ ರು. ಖರ್ಚು ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಆರ್.ಅಶೋಕ್ ಪ್ರಕಾರ ಗ್ಯಾರಂಟಿ ಸಮಿತಿಯ ಜಿಲ್ಲಾಧ್ಯಕ್ಷರಿಗೆ ಮಾಸಿಕ 50 ಸಾವಿರ ವೇತನ ನೀಡಲಾಗುತ್ತಿದೆ. ಉಪಾಧ್ಯಕ್ಷರಿಗೆ 10 ಸಾವಿರ ಕೊಡಲಾಗುತ್ತಿದೆ. ಇನ್ನೂ ತಾಲೂಕು ಅಧ್ಯಕ್ಷರಿಗೆ 20 ಸಾವಿರ, ಜತೆಗೆ ಎಲ್ಲ ಸದಸ್ಯರಿಗೂ ಪ್ರತಿ ಮಾಸಿಕ ಸಭೆಗೆ 2 ಸಾವಿರ ರು. ವೇತನ ನೀಡಲಾಗುತ್ತಿದೆ. ಇದಲ್ಲದೆ, ಈ ಹಿಂದೆ ಜಾರಿಗೆ ಬಂದಿರುವ ಎಲ್ಲ ಸರಕಾರಗಳ ಯೋಜನೆಗಳಿಗೆ ರಚನೆಯಾಗಿರುವ ಸಮಿತಿಗಳಿಗೆ ಶಾಸಕರೇ ಅಧ್ಯಕ್ಷರಾಗಿರುತ್ತಾರೆ. ಅಂತೆಯೇ ಗ್ಯಾರಂಟಿ ಸಮಿತಿಗೂ ಶಾಸಕರೇ ಅಧ್ಯಕ್ಷರಾಗಿರಬೇಕು ಎಂಬುದು ಅಶೋಕ್ ವಾದವಾಗಿತ್ತು.
ಗ್ಯಾರಂಟಿಯಿಂದ ರಾಜ್ಯ ದಿವಾಳಿಯಾಗುತ್ತಿದೆ ಎಂದು ಪ್ರತಿಭಟನೆ ನಡೆಸಿದ್ದ ಬಿಜೆಪಿ ಮತ್ತು ಜೆಡಿಎಸ್ ಶಾಸಕರು, ಇಂದು ಗ್ಯಾರಂಟಿ ಸಮಿತಿ ಶಾಸಕರ ಅಧ್ಯಕ್ಷತೆಯಲ್ಲೇ ರಚನೆ ಮಾಡಬೇಕು ಎಂದು ಒತ್ತಾಯಿಸಿ, ಪ್ರತಿಭಟನೆ ನಡೆಸಿದರು. ಆ ಮೂಲಕ ಗ್ಯಾರಂಟಿಗಳನ್ನು ರಾಜ್ಯದ ಜನತೆ ಒಪ್ಪಿದ್ದಾರೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡರು. ಗ್ಯಾರಂಟಿಗಳ ಮೂಲಕ ಅನುಷ್ಠಾನ ಸಮಿತಿ ಅಧ್ಯಕ್ಷರು ಮತ್ತು ತಮ್ಮ ವಿರುದ್ಧ ಸೋತಿರುವ ಮತ್ತು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಹಣಿಯಾಗುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು ಬಲಾಢ್ಯರಾಗುತ್ತಿದ್ದಾರೆ ಎಂಬ ಭಯವನ್ನು ಹೊರಹಾಕಿದರು ಎನ್ನಬಹುದು.
ಬಿಜೆಪಿ, ಜೆಡಿಎಸ್ ಶಾಸಕರ ಕಾಡುತ್ತಿದೆ ಗ್ಯಾರಂಟಿ ಭಯ: ಪ್ರತಿ ಕೆಲಸಕ್ಕೂ ಜನರು ಸ್ಥಳೀಯ ಶಾಸಕರ ಬಳಿ ಹೋಗುವುದು ಸರ್ವೇ ಸಾಮಾನ್ಯ. ಆದರೆ, ಗ್ಯಾರಂಟಿ ಯೋಜನೆಯೇ ಈ ಸರಕಾರದ ಬಹುಮುಖ್ಯ ಅಭಿವೃದ್ಧಿಯ ಮಾನದಂಡವಾಗಿದ್ದು, ಇದರ ಸಮಸ್ಯೆಗಳನ್ನು ಹೊತ್ತ ಜನತೆ ಶಾಸಕರ ಬದಲಾಗಿ ಗ್ಯಾರಂಟಿ ಸಮಿತಿಯ ಅಧ್ಯಕ್ಷರ ಮುಂದೆ ಹೋಗುತ್ತಿದ್ದಾರೆ. ಅಧಿಕಾರಿಗಳು ಕೂಡ ಗ್ಯಾರಂಟಿ ಅನುಷ್ಠನಕ್ಕೆ ಸಂಬಂಧಿಸಿದಂತೆ ಸಮಿತಿಯ ಅಧ್ಯಕ್ಷರಿಗೆ ಅಧಿಕೃತವಾಗಿ ಮಣೆಹಾಕುತ್ತಿದ್ದಾರೆ. ಇದರಿಂದಾಗಿ ಜೆಡಿಎಸ್ ಮತ್ತು ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ಶಾಸಕರ ವರ್ಚಸ್ಸು ಕುಗ್ಗುತಿದೆ. ಇದೇ ಕಾರಣಕ್ಕೆ ಈ ಎರಡು ಪಕ್ಷದ ಶಾಸಕರು ಗ್ಯಾರಂಟಿ ಸಮಿತಿಯಲ್ಲಿ ತಮಗೆ ಸ್ಥಾನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಗ್ಯಾರಂಟಿ ಸಮಿತಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ: ಈ ನಡುವೆ ಪ್ರತಿಪಕ್ಷಗಳ ಟೀಕೆ, ಸಭಾತ್ಯಾಗ, ಪ್ರತಿಭಟನೆಯ ನಡುವೆಯೂ ಸಿಎಂ ಸಿದ್ದರಾಮಯ್ಯ ತಾವು ರಚನೆ ಮಾಡಿರುವ ಗ್ಯಾರಂಟಿ ಸಮಿತಿ ಕಾನೂನುಬದ್ಧವಾಗಿಯೇ ಇದ್ದು, ನಮ್ಮ ಪಕ್ಷ ಘೋಷಿಸಿದ ಯೋಜನೆಗಳನ್ನು ಜನರಿಗೆ ತಲುಪಿಸುವುದು ನಮ್ಮ ಕಾರ್ಯಕರ್ತರ ಕರ್ತವ್ಯವೇ ಆಗಿದ್ದು, ಅದನ್ನು ಬದಲಾವಣೆ ಮಾಡುವ ಯಾವುದೇ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಪ್ರತಿಭಟನೆಗೆ ಯಾವುದೇ ಕಿಮ್ಮತ್ತು ನೀಡದೆ, ತಮ್ಮ ಕನಸಿನ ಗ್ಯಾರಂಟಿ ಯೋಜನೆಗಳ ಸಕಾರಕ್ಕೆ ದುಡಿಯುತ್ತಿರುವ ಪಕ್ಷದ ಕಾರ್ಯಕರ್ತರ ಬೆನ್ನಿಗೆ ನಿಂತಿದ್ದಾರೆ. ಗ್ಯಾರಂಟಿ ಸಮಿತಿಗಳು ಮುಂದೆಯೂ ಅನುಷ್ಠಾನದಲ್ಲಿದ್ದು, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿವೆ ಎಂಬ ಮುನ್ಸೂಚನೆ ನೀಡಿದ್ದಾರೆ.
ಆರ್.ಅಶೋಕ್‌ಗೆ ಗ್ಯಾರಂಟಿ ಸಮಿತಿ ಮೇಲೇಕೆ ಕೋಪ: ಗ್ಯಾರಂಟಿ ಸಮಿತಿಗಳ ವಿರುದ್ಧ ಮೊದಲು ದನಿಯೆತ್ತಿರುವುದು ವಿಪಕ್ಷ ನಾಯಕ ಆರ್.ಅಶೋಕ್. ಅವರಿಗೆ ಗ್ಯಾರಂಟಿ ಸಮಿತಿಯ ಮೇಲೆ ಇಷ್ಟೊಂದು ಕೋಪ ಯಾಕೆ ಎಂದರೆ, ಅವರ ಕ್ಷೇತ್ರದ ಗ್ಯಾರಂಟಿ ಸಮಿತಿಯ ಕಾರ್ಯವೈಖರಿ. ಪದ್ಮನಾಭ ನಗರದ ಗ್ಯಾರಂಟಿ ಸಮಿತಿ ಅಧ್ಯಕ್ಷ ಪ್ರಮೋದ್ ಶ್ರೀನಿವಾಸ್, ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲು ಅನುಸರಿಸುತ್ತಿರುವ ಮಾರ್ಗ ಆರ್.ಅಶೋಕ್ ನಿದ್ದೆಗೆಡಿಸಿದೆ. ಪದ್ಮನಾಭ ನಗರ ರಾಜ್ಯಕ್ಕೆ ಗ್ಯಾರಂಟಿ ಅನುಷ್ಠಾನಕ್ಕೆ ಮಾಡೆಲ್ ಎನಿಸಿಕೊಂಡು, ಗ್ಯಾರಂಟಿ ಸಮಿತಿಯ ಜಿಲ್ಲಾಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರಿಂದ ಮೆಚ್ಚುಗೆ ಗಳಿಸಿದೆ. ಸಿಎಂ ಮತ್ತು ಡಿಸಿಎಂ ಕೂಡ ಪದ್ಮನಾಭ ನಗರದ ಗ್ಯಾರಂಟಿ ಸಮಿತಿಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಹೀಗಾಗಿ, ಆರ್.ಅಶೋಕ್ ಗ್ಯಾರಂಟಿ ಸಮಿತಿಯ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಎಂಬುದು ಸುಳ್ಳಲ್ಲ.
ಗೆದ್ದಿದೆಯೇ ಗ್ಯಾರಂಟಿ: ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಾಗ ಬಿಜೆಪಿ, ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗುವುದು ಗ್ಯಾರಂಟಿ ಎಂದು ಭವಿಷ್ಯ ನುಡಿದಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನ ಚುನಾವಣೆಯಲ್ಲಿ ಕರ್ನಾಟಕದ ಗ್ಯಾರಂಟಿ ಯೋಜನೆಯ ಕುರಿತು ಗೇಲಿ ಮಾಡಿದ್ದರು.
ಗ್ಯಾರಂಟಿಗಳಿಂದ ಕರ್ನಾಟಕದ ಆರ್ಥಿಕ ಪರಿಸ್ಥಿತಿ ನಿವಾಶಕ್ಕೆ ಹೋಗಲಿದೆ ಎಂದು ಹೇಳಿದ್ದರು. ಇದೀಗ ಬಿಜೆಪಿ ನಾಯಕರೇ ಗ್ಯಾರಂಟಿ ಅನುಷ್ಠಾನ ಸಮಿತಿಗಳಲ್ಲಿ ತಾವಿರಬೇಕು ಎನ್ನುವ ಮೂಲಕ ಗ್ಯಾರಂಟಿ ಗೆದ್ದಿದೆ ಎಂಬ ಸಂದೇಶವನ್ನು ಪರೋಕ್ಷವಾಗಿ ನೀಡಿದ್ದಾರೆ. ಅಷ್ಟರಮಟ್ಟಿಗೆ ಕಾಂಗ್ರೆಸ್ ಸರಕಾರ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದೆ ಎನ್ನುವ ಸಂದೇಶ ಇದೀಗ ರವಾನೆಯಾದಂತಾಗಿದೆ.