ನೀವು ಮೋದಿ ಮೋದಿ ಅಂತ ಹೊಗಳ್ತಿರಲ್ಲ, ನಿಮ್ಮ ಮೋದಿ ಎಷ್ಟು ಸಾಲ ಮಾಡಿದ್ದಾರೆ ಗೊತ್ತಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷ ಬಿಜೆಪಿ ಸದಸ್ಯರನ್ನು ಪ್ರಶ್ನಿಸಿದರು.
ವಿಧಾನಸಭೆಯಲ್ಲಿ ಬಜೆಟ್ ಮೇಲೆ ಗುರುವಾರ ನಡೆದ ಚರ್ಚೆಯಲ್ಲಿ ಬಜೆಟ್ ಸಾಲದ ಕುರಿತು ಪ್ರಶ್ನಿಸಿದ ಬಿಜೆಪಿ ಸದಸ್ಯರಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಸಿದ್ದರಾಮಯ್ಯ ಅತೀ ಹೆಚ್ಚು ಸಾಲ ಮಾಡಿದ ಮುಖ್ಯಮಂತ್ರಿ. ಯಾವುದೇ ಶಾಶ್ವತ ಯೋಜನೆ ಪ್ರಕಟಿಸದೇ ತಾತ್ಕಾಲಿಕವಾಗಿ ಹಂಚಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ಎಷ್ಟು ಸಾಲ ಮಾಡಿದ್ದೇನೆ ಅಂತ ಗೊತ್ತಾ? ನಿಯಮದ ಒಳಗೆ ಸಾಲ ಮಾಡಿದ್ದೇನೆ. 4.5 ಲಕ್ಷ ಕೋಟಿ ತೆರಿಗೆಯನ್ನು ಕರ್ನಾಟಕ ಕೇಂದ್ರ ಸರ್ಕಾರಕ್ಕೆ ಕರ್ನಾಟಕದಿಂದ ಹೋಗುತ್ತಿದೆ. ಆದರೆ ಕೇಂದ್ರ ರಾಜ್ಯಕ್ಕೆ ಸೂಕ್ತ ಪಾಲು ನೀಡದೇ ತಾರತಮ್ಯ ಮಾಡುತ್ತಿದೆ ಎಂದರು.
ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ರಾಜ್ಯಗಳಿಗೆ ತೆರಿಗೆ ಪಾಲು ಸರಿಯಾಗಿ ಕೊಡಬೇಕು. ಸರಿಯಾಗಿ ಕೊಡದೇ ಇರುವುದರಿಂದ ಬಜೆಟ್ ಸರಿದೂಗಿಸುವ ಪ್ರಯತ್ನ ಮಾಡಲಾಗಿದೆ. ಆದರೂ ಫಿಸಿಕಲ್ ಡೆಫಿಸಿಟ್ ಒಳಗೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.
ಕೇಂದ್ರ ಸರ್ಕಾರದ ಸಾಲದ ಬಗ್ಗೆ ಇಲ್ಲಿ ಮಾತನಾಡುವಂತಿಲ್ಲ. ಒಂದು ವೇಳೆ ಇದನ್ನು ಪ್ರಶ್ನೆ ಮಾಡಬೇಕು ಅಂದರೆ ನೀವು ಲೋಕಸಭೆಗೆ ಸ್ಪರ್ಧಿಸಿ ಗೆದ್ದು ಅಲ್ಲಿ ಹೋಗಿ ಪ್ರಶ್ನೆ ಮಾಡಿ ಎಂದು ಅಶೋಕ್ ಕಾಲೆಳೆದರು.
ನಿಮ್ಮ ಭಂಡತನದ ಮಾತುಗಳಿಂದ ನಾನು ವಿಚಲಿತನಾಗುವುದಿಲ್ಲ. ನಾಟಕೀಯ ಮಾತುಗಳಿಂದ ಹೆದರುವುದೂ ಇಲ್ಲ. ಜನರಿಗೆ ಸತ್ಯ ಹೇಳಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.