Menu
12

ಕೆಎಎಸ್ ಮರುಪರೀಕ್ಷೆ ಇಲ್ಲವೆಂದು ಸಿಎಂ ಸ್ಪಷ್ಟನೆ

ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಕನ್ನಡ ಪ್ರಶ್ನೆಪತ್ರಿಕೆಯಲ್ಲಿನ ಭಾಷಾಂತರಕ್ಕೆ ಸಂಬಂಧಿಸಿದ ಅಧ್ವಾನ ವಿಚಾರ ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ (ಕೆಎಟಿ) ವಿಚಾರಣೆಯಲ್ಲಿದೆ. ಈ ಹಂತದಲ್ಲಿ ಮರುಪರೀಕ್ಷೆಗೆ ಸೂಚನೆ ನೀಡಲು ಆಗುವುದಿಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯ ಉಭಯ ಸದನಗಳಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.

ವಿಧಾನಸಭೆಯಲ್ಲಿ ನಿಯಮ 69 ಮತ್ತು ವಿಧಾನ ಪರಿಷತ್ತಿನಲ್ಲಿ ನಿಯಮ 330ರ ಮೇರೆಗೆ ವಿಪಕ್ಷಗಳು ಎತ್ತಿದ್ದ ಕೆಪಿಎಸ್ಸಿ ವಿಚಾರಕ್ಕೆ ಉತ್ತರ ನೀಡಿದ ಸಿಎಂ, ಎರಡನೇ ಬಾರಿಯೂ ಆಗಿರುವ ತಪ್ಪುಗಳನ್ನು ಪರಿಶೀಲಿಸಲು ವಿಷಯತಜ್ಞರ ಸಮಿತಿಯನ್ನು ಕೆಪಿಎಸ್ಸಿ ರಚಿಸಿತ್ತು. ಪರಿಶೀಲನೆ ಬಳಿಕ 6 ಪ್ರಶ್ನೆಗಳಿಗೆ ಕೃಪಾಂಕ ನೀಡಲಾಗಿದೆ. ಇಂತಹ ಪ್ರಕರಣಗಳಲ್ಲಿ ವಿಷಯ ತಜ್ಞರ ಸಮಿತಿ ನೀಡುವ ಅಭಿಪ್ರಾಯಗಳನ್ನು ಪರಿಗಣಿಸುವುದನ್ನು ‘ಉತ್ತರ ಪ್ರದೇಶ ಸರ್ವಿಸ್ ಕಮಿಷನ್ ವಿರುದ್ಧ ರಾಹುಲ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಅಭ್ಯರ್ಥಿಗಳು ಕೂಡ ಕೆಎಟಿ ಮೊರೆ ಹೋಗಿರುವ ಕಾರಣ ಮರುಪರೀಕ್ಷೆಗೆ ಸೂಚನೆ ನೀಡಲು ಸಾಧ್ಯವಿಲ್ಲ ಎಂದರು.

ಪ್ರಶ್ನೆಪತ್ರಿಕೆಯಲ್ಲಿನ ಭಾಷಾಂತರದ ತಪ್ಪುಗಳಿಂದ ಕನ್ನಡದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ. ಮತ್ತೊಮ್ಮೆ ಪರೀಕ್ಷೆ ನಡೆಸಲು ನನ್ನ ತಕರಾರು ಇಲ್ಲ. ಕೆಎಟಿ ಆದೇಶ ಮಾಡಿದರೆ ಮರುಪರೀಕ್ಷೆ ನಡೆಸಲಾಗುತ್ತದೆ. ಇಲ್ಲದಿದ್ದರೆ ಸರ್ವಪಕ್ಷ ಸಭೆ ಕರೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಕನ್ನಡದ ಅಭ್ಯರ್ಥಿಗಳಿಗೆ ಆಗುವ ಅನ್ಯಾಯ ನೋಡಿಕೊಂಡು ಸುಮ್ಮನೆ ಸಹಿಸಿಕೊಂಡು ಕೂರುವುದಿಲ್ಲ ಎಂದು ಹೇಳಿದರು.

ಪೂರ್ವಭಾವಿ ಪರೀಕ್ಷೆ ಹಾಗೂ ಮರುಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿನ ಅಧ್ವಾನಗಳಿಗೆ ಕಾರಣರಾದ ವಿಷಯತಜ್ಞರನ್ನು ಕಪ್ಪುಪಟ್ಟಿಗೆ ಸೇರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಭಾಷಾಂತರಕಾರರ ಲೋಪವಿದ್ದರೆ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಕೆಪಿಎಸ್ಸಿಯಲ್ಲಿ 16 ಸದಸ್ಯರಿದ್ದು, ಅದನ್ನು ಕಡಿತಗೊಳಿಸುವುದು, ಸಿಬ್ಬಂದಿ ನೇಮಕ, ವರ್ಗಾವಣೆ ಇತ್ಯಾದಿಗಳ ವಿಚಾರ ಗಳ ಬಗ್ಗೆ ನಿಯಮಗಳಲ್ಲಿ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ. ಯುಪಿಎಸ್ಸಿ ಮಾದರಿಯನ್ನು ಕೆಪಿಎಸ್‌ಸಿಯಲ್ಲಿ ಅನುಸರಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಹೇಳಿದರು.

Related Posts

Leave a Reply

Your email address will not be published. Required fields are marked *