ಪಾಕಿಸ್ತಾನಿ ಸೇನೆ 30 ಗಂಟೆಗಳ ರೋಚಕ ಕಾರ್ಯಾಚರಣೆ ನಡೆಸುವ ಮೂಲಕ ಬಂಡುಕೋರರು ಹೈಜಾಕ್ ಮಾಡಿದ್ದ ರೈಲು ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಕಾರ್ಯಾಚರಣೆಯ ರೋಚಕ ಮಾಹಿತಿ ಒಂದೊಂದಾಗಿ ಹೊರಗೆ ಬರುತ್ತಿದೆ.
ಬಲೂಚಿಸ್ತಾನ್ ಲಿಬರಲ್ ಆರ್ಮಿ 30 ಪಾಕ್ ಸೈನಿಕರನ್ನು ಕೊಂದು ಜಾಫರ್ ರೈಲನ್ನು ಹೈಜಾಕ್ ಮಾಡಿ 180ಕ್ಕೂ ಹೆಚ್ಚು ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ತಮ್ಮ ವಿರುದ್ಧ ಕಾರ್ಯಾಚರಣೆ ಆರಂಭಿಸಿದರೆ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದು, ಆದಷ್ಟು ಬೇಗನೇ ಬಲೂಚಿಸ್ತಾನವನ್ನು ಸ್ವತಂತ್ರ ರಾಷ್ಟ್ರವಾಗಿ ಘೋಷಿಸುವಂತೆ ಆಗ್ರಹಿಸಿದ್ದರು.
ಪಾಕಿಸ್ತಾನ ಸೇನೆ ರೈಲು ಹೈಜಾಕ್ ಆಗುತ್ತಿದ್ದಂತೆ ಅಲರ್ಟ್ ಆದ ಪಾಕಿಸ್ತಾನ ಸೇನೆ ಪೂರ್ಣ ಪ್ರಮಾಣದ ಸೇನೆ ಬಳಸಿ ಕಾರ್ಯಾಚರಣೆ ಆರಂಭಿಸಿತು. ಕಾರ್ಯಾಚರಣೆ ವೇಳೆ ಆತ್ಮಾಹುತಿ ದಳದ ಸದಸ್ಯರು ಸೇರಿದಂತೆ 33 ಬಂಡುಕೋರರು, 21 ನಾಗರಿಕರು ಹಾಗೂ ನಾಲ್ವರು ಪಾಕಿಸ್ತಾನಿ ಸೈನಿಕರು ಮೃತಪಟ್ಟಿದ್ದಾರೆ.
ಜಾಫರ್ ಎಕ್ಸ್ ಪ್ರೆಸ್ ರೈಲಿನಲ್ಲಿ ೯ ಬೋಗಿಗಳು ಇದ್ದು, 400 ಪ್ರಯಾಣಿಕರು ಇದ್ದರು. ಗುಪ್ತಚರ ಇಲಾಖೆ ಅಫ್ಘಾನಿಸ್ತಾನ ಮೂಲದ ಉಗ್ರರ ಜೊತೆ ಸಂಪರ್ಕ ಹೊಂದಿರುವ ಉಗ್ರರು ರೈಲು ಹೈಜಾಕ್ ಮಾಡುವ ತಂತ್ರ ರೂಪಿಸುತ್ತಿರುವುದಾಗಿ ಮುನ್ಸೂಚನೆ ನೀಡಿತ್ತು.
ಕ್ವೆಟ್ಟಾದಿಂದ 160 ಕಿ.ಮೀ. ದೂರದ ಪರ್ವತಗಳ ನಡುವೆ ಇರುವ ಗುದಲಾರ್ ಸಮೀಪದ ಪಿರು ಕುನ್ರಿ ಎಂಬಲ್ಲಿ ರೈಲನ್ನು ನಿಲ್ಲಿಸಿಕೊಂಡಿದ್ದರು. ಬಂಡುಕೋರರು 214 ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದು, 51 ಪ್ರಯಾಣಿಕರನ್ನು ಕೊಂದಿರುವುದಾಗಿ ಪಾಕಿಸ್ತಾನಿ ಸೇನೆ ಕಾರ್ಯಾಚರಣೆ ಆರಂಭಿಸುವ ಮುನ್ನ ಹೇಳಿಕೆ ನೀಡಿತ್ತು.
ಬಿಎಲ್ ಎ ಸಂಘಟನೆ ಪಾಕಿಸ್ತಾನದ ಅತ್ಯಂತ ಪ್ರಬಲ ಬಂಡುಕೋರ ಸಂಘಟನೆ ಆಗಿದ್ದು, ಇರಾನ್, ಆಫ್ಘಾನಿಸ್ತಾನ ಮುಂತಾದ ದೇಶಗಳ ನಿಟಕ ಸಂಪರ್ಕ ಹೊಂದಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಸೇನೆ ಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯಾಚರಣೆ ಆರಂಭಿಸಿದ್ದು, 30 ಗಂಟೆಗಳ ಸುದೀರ್ಘ ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆ ವೇಳೆ ಉಗ್ರರು ಒತ್ತೆಯಾಳುಗಳ ಹಿಂದೆ ಅವಿತುಕೊಂಡಿದ್ದು, ಪ್ರಯಾಣಿಕರನ್ನು ಗುರಾಣಿಗಳಂತೆ ಬಳಸಿದ್ದರು ಎಂದು ಪಾಕಿಸ್ತಾನ ಸೇನೆ ಹೇಳಿಕೆ ನೀಡಿದೆ.