ಬೆಂಗಳೂರಿನ ಚಾಮರಾಜಪೇಟೆ ವ್ಯಾಪ್ತಿಯ ಆನಂದಪುರದಲ್ಲಿ ನೀರು ಹಿಡಿಯುವಾಗ ವಿದ್ಯುತ್ ಶಾಕ್ ಹೊಡೆದು ಮಹಿಳೆ ಮೃತಪಟ್ಟಿದ್ದಾರೆ. ಸೆಲ್ವಿ ಮೃತ ಮಹಿಳೆ.
ಕೆ.ಆರ್. ಮಾರ್ಕೆಟ್ ರಸ್ತೆಯ ಈ ಪ್ರದೇಶದಲ್ಲಿ ಯಾವ ಮನೆಗೂ ನೀರಿನ ಸಂಪರ್ಕ ಇಲ್ಲ. ದೊಡ್ಡ ಪೈಪ್‌ನಲ್ಲಿ ಅಲ್ಲಲ್ಲಿ ಮೋಟಾರ್ ಸಂಪರ್ಕ ನೀಡಲಾಗಿದೆ. ಗುರುವಾರ ಬೆಳಗ್ಗೆ ಐದು ಗಂಟೆಗೆ ಮೋಟಾರ್ ಸ್ಟಾರ್ಟ್ ಮಾಡುವಾಗ ವಿದ್ಯುತ್ ತಗುಲಿ ಮಹಿಳೆ ಮೃತಪಟ್ಟಿದ್ದಾರೆ.
ಆಕ್ರೋಶಗೊಂಡ ಸ್ಥಳೀಯರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುತ್ತಿದ್ದು, ಮಾರ್ಕೆಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಮೈಸೂರು ರಸ್ತೆ ಎರಡೂ ಕಡೆ ಸಂಪೂರ್ಣ ಬಂದ್ ಆಗಿದ್ದು, ನ್ಯಾಯ ಬೇಕು ಎಂದು ಘೋಷಣೆ ಕೂಗಿ ಸಾರ್ವಜನಿಕರು ಪ್ರತಿಭಟಿಸುತ್ತಿದ್ದಾರೆ. ಜಲಮಂಡಳಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವು ವರ್ಷಗಳಿಂದ ನೀರಿನ ಸಮಸ್ಯೆ ಬಗೆಹರಿದಿಲ್ಲ. ನೀರಿಗಾಗಿ ಪರದಾಟ ನಡೆಸುತ್ತಿದ್ದೇವೆ. ನೀರು ಕೇಳಿದರೆ ನಮ್ಮ ಮೇಲೆ ಕೇಸ್ ದಾಖಲಿಸುತ್ತಾರೆ, ನೀರು ಕೊಟ್ಟಿದ್ರೆ ನಾವ್ಯಾಕೆ ಮೋಟಾರ್ ಹಾಕ್ತೇವೆ ಎಂದು ಸ್ಥಳೀಯ ಶಾಸಕ ಜಮೀರ್ ವಿರುದ್ಧ ಜನರು ಕಿಡಿಕಾರಿದ್ದಾರೆ.
ಮಾಧ್ಯಮಗಳೊಂದಿಗೆ ಮಾತಾಡಿದ ಶಾಸಕ ಜಮೀರ್ , ಅಕ್ರಮವಾಗಿ ಮೂರ್ನಾಲ್ಕು ಅಂತಸ್ತು ಮನೆಕಟ್ಟಿ ನೀರು ಮೇಲೆ ಹತ್ತದ ಕಾರಣ ಅಕ್ರಮವಾಗಿ ಮೋಟಾ ರ್‌ಗಳನ್ನು ಬಳಸಿ ವಿದ್ಯುತ್ ಕಂಬದಿಂದ ಮೋಟಾರುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.