ತುಮಕೂರಿನ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಹಟ್ನ ಗ್ರಾಮದ ಹೊರವಲಯದ ತೋಪಿನಲ್ಲಿ ಇರುವ ಶಕ್ತಿ ದೇವತೆ ಕೆಂಪಮ್ಮ ದೇವಿ ದೇವಾಲಯದ ಎದುರು ದುಷ್ಕರ್ಮಿಗಳು ವಾಮಾಚಾರ ಎಸಗಿರುವುದು ಪತ್ತೆಯಾಗಿದೆ.
ವಾಮಾಚಾರದ ವಸ್ತುಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಬೆಂಕಿಯು ದೇಗುಲದ ಬಾಗಿಲನ್ನು ಸಂಪೂರ್ಣ ಆವರಿಸಿ ಬಾಗಿಲು ಸುಟ್ಟು ಕರಕಲಾಗಿದೆ. ಕೆಂಪಮ್ಮ ದೇವಿ ದೇವಾಲಯದಲ್ಲಿ ಮಂಗಳವಾರ ಸಂಜೆ ಯಾರೂ ಇಲ್ಲದ್ದನ್ನು ಗಮನಿಸಿ ಪಶ್ಚಿಮದ ಬಾಗಿಲಿಗೆ ದುಷ್ಕರ್ಮಿಗಳು ವಾಮಾಚಾರ ಮಾಡಿದ್ದಾರೆ. ಬುಧವಾರ( ಇಂದು) ಬೆಳಗ್ಗೆ ಪೂಜಾ ಕೈಂಕರ್ಯಗಳನ್ನು ನಡೆಸಲು ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಸ್ಥಳದಲ್ಲಿ ವಾಮಾಚಾರಕ್ಕೆ ಬಳಸಿದ್ದ ಬೊಂಬೆ, ಕುಂಕುಮ, ತಾಮ್ರದ ತಗಡು ವಸ್ತುಗಳು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಕಿಬ್ಬನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.