ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಬಳಿಕ ನಟ ದರ್ಶನ್ ಬಂಧನವಾಗಿದ್ದ ಕಾರಣ ನಿಂತು ಹೋಗಿದ್ದ ಡೆವಿಲ್ ಚಿತ್ರದ ಶೂಟಿಂಗ್ ಆರಂಭಗೊಂಡಿದೆ. ಇಂದಿನಿಂದ ಮಾರ್ಚ್ 15 ರವರೆಗೆ ಡೆವಿಲ್ ಶೂಟಿಂಗ್ ನಡೆಯಲಿದೆ.
ಮಿಲನ ಪ್ರಕಾಶ್ ಆಕ್ಷನ್ ಕಟ್ ಹೇಳುತ್ತಿರುವ ಡೆವಿಲ್ ಚಿತ್ರದಲ್ಲಿ ದರ್ಶನ್ ನಾಯಕ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗ ಮೈಸೂರಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ನಂತರ ರಾಜಸ್ಥಾನ, ಹೈದರಾಬಾದ್ ನಲ್ಲಿ ಚಿತ್ರೀಕರಣಕ್ಕೆ ಪ್ಲಾನ್ ಆಗಿದೆ. ಮಾರ್ಚ್ 14ರ ವರೆಗೆ ಮೈಸೂರು ಸರ್ಕಾರಿ ಅಥಿತಿ ಗೃಹದಲ್ಲಿ ‘ದಿ ಡೆವಿಲ್’ ಶೂಟಿಂಗ್ ಮಾಡಲು ಅನುಮತಿ ನೀಡಲಾಗಿದೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಚಿತ್ರೀಕರಣ ಮಾಡುವುದಕ್ಕೆ ಮತ್ತು ಮಾರ್ಚ್ 15ರಂದು ಲಲಿತ ಮಹಲ್ ಪ್ಯಾಲೇಸ್‌ನಲ್ಲಿ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆ ವರೆಗೂ ಶೂಟಿಂಗ್ ಮಾಡಲು ಅನುಮತಿ ನೀಡಲಾಗಿದೆ.
ಒಂದು ಪಾಳಿಯಲ್ಲಿ 10 ಮಂದಿ ಪೊಲೀಸ್ ಸಿಬ್ಬಂದಿಯಂತೆ ಒಟ್ಟು 32 ಪೊಲೀಸ್ ಸಿಬ್ಬಂದಿ ಶೂಟಿಂಗ್ ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಭದ್ರತೆಗಾಗಿ 1.64 ಲಕ್ಷ ರೂ. ಹಣವನ್ನು ಇಲಾಖೆಗೆ ನೀಡಿ, ಭದ್ರತೆಗೆ ಸಿಬ್ಬಂದಿಗಳನ್ನು ‘ಡೆವಿಲ್’ ಚಿತ್ರತಂಡ ನಿಯೋಜಿಸಿಕೊಂಡಿದೆ. ದರ್ಶನ್ ಜೊತೆಗೆ ನಾಯಕಿಯಾಗಿ ರಚನಾ ರೈ ನಟಿಸಿದ್ದು, ತುಳಸಿ, ಅಚ್ಯುತಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸಪ್ರಭು, ಶೋಭರಾಜ್ ಮುಂತಾದವರು ಈ ಸಿನಿಮಾದಲ್ಲಿದ್ದಾರೆ.