ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ನ್ಯಾಯಾಂಗ ಬಂಧನದಲ್ಲಿದ್ದು, ತನಿಖೆ ತೀವ್ರಗೊಂಡಿದೆ. ಡಿಆರ್‌ಐ , ಸಿಬಿಐ, ಸಿಐಡಿ ತಂಡಗಳಿಂದ ತನಿಖೆ ಮುಂದುವರಿದಿದೆ. ಈ ವ್ಯವಹಾರದಲ್ಲಿ ಪ್ರಭಾವಿ ಸ್ವಾಮೀಜಿಯೊಬ್ಬರು ಶಾಮೀಲಾಗಿರುವ ಬಗ್ಗೆ ಮಾಹಿತಿ ಡಿಆರ್ಐಗೆ ಲಭಿಸಿದೆ ಎಂದು ಮೂಲಗಳು ತಿಳಿಸಿವೆ.
ನಟಿ ರನ್ಯಾ ರಾವ್, ತರುಣ್ ರಾಜ್ ಮತ್ತು ಪ್ರಭಾವಿ ಸ್ವಾಮೀಜಿ ಮೂವರ ಗುಂಪು ಚಿನ್ನ ಕಳ್ಳಸಾಗಣೆಯಲ್ಲಿ ಶಾಮೀಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಸ್ವಾಮೀಜಿ ದುಬೈನಲ್ಲಿ ಆಫೀಸ್ ತೆರೆದು ಡಿಲೀಂಗ್ ನಡೆಸುತ್ತಿದ್ದರು. ಆಫೀಸ್ನಲ್ಲಿ ಸ್ವಾಮೀಜಿ ಕ್ರಿಫ್ಟೋ ಕರೆನ್ಸಿ, ಹಣ ವಿನಿಮಯ ವ್ಯವಹಾರ ಮಾಡುತ್ತಿದ್ದರು. ಸ್ವಾಮೀಜಿ ರಾಜಕೀಯ ನಾಯಕರ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿನ ಸ್ವಾಮೀಜಿ ಮನೆ ಮೇಲೆ ಡಿಆರ್‌ಐ ಅಧಿಕಾರಿಗಳು ದಾಳಿ ನಡೆಸಿದಾಗ ಅಪಾರ ಪ್ರಮಾಣದ ಚಿನ್ನ ಪತ್ತೆಯಾಗಿತ್ತು.
ಡಿಆರ್‌ಐ ಅಧಿಕಾರಿಗಳು ತರುಣ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಆತ ದುಬೈನಲ್ಲಿ ಹಲವು ಕಾಂಟ್ಯಾಕ್ಟ್ ಹೊಂದಿರುವ ಬಗ್ಗೆ ತನಿಖಾಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ.ಈ ವ್ಯವಹಾರದಲ್ಲಿ ಆತನ ಪಾತ್ರ ಪ್ರಮುಖ ಎನ್ನಲಾಗಿದೆ.ಈಗಾಗಲೇ ತರುಣ್ ಮೊಬೈಲ್, ಲ್ಯಾಪ್ ಟಾಪ್, ಟ್ಯಾಬ್ ವಶಪಡಿಸಿರುವ ತನಿಖಾ ತಂಡ ಎಲ್ಲವನ್ನೂ ಎಫ್ ಎಸ್ ಎಲ್‌ಗೆ ಕಳಿಸಿ ರಿಟ್ರೀವ್ ಮಾಡಿಸುತ್ತಿದೆ. ಆತ ಸತತವಾಗಿ ಭೇಟಿ ನೀಡ್ತಿದ್ದ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದೆ.
ರನ್ಯಾ ರಾವ್ ಬಂಧನ ಬಳಿಕ ಆಕೆಯ ಪತಿ ಜತಿನ್ ಹುಕ್ಕೇರಿ ಡಿಆರ್‌ಐ ಅಧಿಕಾರಿಗಳು ತನ್ನನ್ನು ಬಂಧಿಸಬಹುದೆಂಬ ಭೀತಿಯಿಂದ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಡಿಆರ್‌ಐ ಅಧಿಕಾರಿಗಳು ತಮಗೆ ಕಿರುಕುಳ ನೀಡುತ್ತಿದ್ದಾರೆ. ರನ್ಯಾ ಬಂಧನದ ಬಗ್ಗೆ ತಿಳಿಸದೇ ಮನೆ ಮೇಲೆ ದಾಳಿ ಮಾಡಿ ಶೋಧ ಮತ್ತು ವಿಚಾರಣೆ ನಡೆಸಿದ್ದಾರೆಂದು ಜತಿನ್ ಹುಕ್ಕೇರಿ ಅರ್ಜಿ ಸಲ್ಲಿಸಿದ್ದರು.