ತೆಲಂಗಾಣದ ನಾಗರ್‌ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ ನಿರ್ಮಾಣ ಹಂತದಲ್ಲಿದ್ದ ಸುರಂಗ ಕುಸಿತದಲ್ಲಿ 16 ದಿನಗಳ ಬಳಿಕ ಒಬ್ಬ ಕಾರ್ಮಿಕನ ಶವ ಪತ್ತೆಯಾಗಿದ್ದು, ಇನ್ನೂ 7 ಕಾರ್ಮಿಕರು ಪತ್ತೆಯಾಗಿಲ್ಲ. ಪತ್ತೆಯಾಗಿರುವ ಮೃತ ಕಾರ್ಮಿಕನನ್ನು ಗುರುಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ.
ತೆಲಂಗಾಣ ಸಿಎಂ ಎ.ರೇವಂತ್ ರೆಡ್ಡಿ ಹಾಗೂ ನೀರಾವರಿ ಸಚಿವ ಎನ್ ಉತ್ತಮ್ ಕುಮಾರ್ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಸ್ಥರಿಗೆ 25 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಶ್ರೀಶೈಲಂ ಆಣೆಕಟ್ಟಿನ ಹಿಂಭಾಗದ ಸುರಂಗದಲ್ಲಿ ಸೋರಿಕೆ ಉಂಟಾಗಿದ್ದು, ಸೋರಿಕೆ ಸರಿಪಡಿಸಲು ಕಾರ್ಮಿಕರು ಒಳಗೆ ಹೋದಾಗ ಛಾವಣಿ ಕುಸಿದಿತ್ತು. ಈ ವೇಳೆ 56 ಕಾರ್ಮಿಕರು ಒಳಗೆ ಸಿಲುಕಿದ್ದರು. 48 ಜನರನ್ನು ರಕ್ಷಿಸಲಾಗಿತ್ತು. 8 ಕಾರ್ಮಿಕರು ಸಿಲುಕಿಕೊಂಡಿದ್ದು, ಪತ್ತೆಹಚ್ಚಲು ಕಳೆದ 17 ದಿನಗಳಿಂದ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ.
ಫೆ.22 ರಂದು ಸುರಂಗ ಕುಸಿದಿದ್ದು, ಸ್ಥಳದಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಉತ್ತರಾಖಂಡದ ರ‍್ಯಾಟ್ ಮೈನರ್, ಸ್ನಿಫರ್ ನಾಯಿ ಸೇರಿದಂತೆ 300ಕ್ಕೂ ಅಧಿಕ ಸಿಬ್ಬಂದಿ 17 ದಿನಗಳಿಂದ ಹಗಲು, ರಾತ್ರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಒಂದು ಮೃತದೇಹ ಪತ್ತೆಯಾದ ಬಳಿಕ ಇನ್ನುಳಿದವರಿಗಾಗಿ ರೋಬೋಟ್ ಬಳಸಲು ರಾಜ್ಯ ಸರ್ಕಾರ ಯೋಜಿಸಿದ್ದು, 4 ಕೋಟಿ ರೂ. ಖರ್ಚು ಮಾಡಲಿದೆ.
ಸುರಂಗ ನಿರ್ಮಾಣ ಕಂಪೆನಿಯ ಮಾಹಿತಿ ಪ್ರಕಾರ, ಸುರಂಗದಲ್ಲಿ 12-13 ಕಿ.ಮೀ ಒಳಗೆ ಸೋರಿಕೆ ಉಂಟಾಗಿತ್ತು. ಅದನ್ನು ಸರಿಪಡಿಸಲು ಕಾರ್ಮಿಕರು ಒಳಗೆ ಹೋದಾಗ ಎಡಭಾಗದಲ್ಲಿರುವ ಸುರಂಗದ ಮೇಲ್ಛಾವಣಿ ಮೂರು ಮೀಟರ್‌ಗಳಷ್ಟು ಕುಸಿದಿದೆ.