ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾಗಿದ್ದ ಪ್ರೇಮಿಗಳಿಬ್ಬರು ಶಾಲೆಯ ಸಮವಸ್ತ್ರ ಧರಿಸಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿದ್ದಾರೆ.
ಮಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 10ನೇ ತರಗತಿ ವಿದ್ಯಾರ್ಥಿ ಕೆಂಚಪ್ಪ (16) ಹಾಗೂ ಅದೇ ಶಾಲೆಯ ಅನ್ಯಕೋಮಿನ ನಾಗರಹಳ್ಳಿ ಗ್ರಾಮದ ವಿದ್ಯಾರ್ಥಿನಿ ನಸೀಮಾ ಆಳಗೂರ(15) ಆತ್ಮಹತ್ಯೆ ಮಾಡಿಕೊಂಡವರು.
ಮೃತ ವಿದ್ಯಾರ್ಥಿನಿ ಶುಕ್ರವಾರ ರಾತ್ರಿ ಶೌಚಕ್ಕೆಂದು ಮನೆಯಿಂದ ಹೊರಗೆ ಹೋಗಿದ್ದಳು. ವಿದ್ಯಾರ್ಥಿಯು ಮಾವನ ದ್ವಿಚಕ್ರ ವಾಹನದಲ್ಲಿ ಹೊರಗೆ ಹೋಗಿದ್ದ. ಮಳ್ಳಿ ಗ್ರಾಮದ ಹೊರವಲಯದ ಐನಾಪುರ ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದ ಜಮೀನಿನಲ್ಲಿ ಬೇವಿನ ಮರಕ್ಕೆ ಇಬ್ಬರು ನೇಣು ಬಿಗಿದುಕೊಂಡಿದ್ದಾರೆ. ಬೆಳಗಿನ ಜಾವ ರೈತರೊಬ್ಬರು ಹೊಲಕ್ಕೆ ಹೋಗುವಾಗ ನೇಣು ಬಿಗಿದುಕೊಂಡಿದ್ದನ್ನು ನೋಡಿ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ.
ಇಬ್ಬರೂ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು ಆದರೆ ವಿದ್ಯಾರ್ಥಿನಿಗೆ ವಿವಾಹ ನಿಶ್ಚಯ ಆಗಿದೆ. ಇದೇ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಹೇಳಲಾ ಗಿದೆ. ಎರಡೂ ಕುಟುಂಬಗಳು ಈ ಬಗ್ಗೆ ಯಾವುದೇ ದೂರು ನೀಡದ ಕಾರಣ ಯಡ್ರಾಮಿ ಪೊಲೀಸ್ ಇಲಾಖೆ ಅಧಿಕಾರಿಗಳು ಸ್ವಯಂಪ್ರೇರಿತ ದೂರು ದಾಖಲಿಸಿ ಕೊಂಡು ತನಿಖೆ ಆರಂಭಿಸಿದ್ದಾರೆ.