Menu

ನಮಗೆ ಶಕ್ತಿ ತುಂಬಿದ ಕಲ್ಯಾಣ ಕರ್ನಾಟಕದ ಜನರ ಋಣ ತೀರಿಸುತ್ತೇವೆ: ಡಿಸಿಎಂ 

“ಕಲ್ಯಾಣ ಕರ್ನಾಟಕ ಭಾಗದ ಜನ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ನಮಗೆ ಶಕ್ತಿ ತುಂಬಿದ್ದು, ಈ ಭಾಗದ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ನಿಮ್ಮೆಲ್ಲರ ಋಣ ತೀರಿಸಲಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್  ಹೇಳಿದ್ದಾರೆ.

ಜೇವರ್ಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕದ 38 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ 1150 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿಯ “ಕಲ್ಯಾಣ ಪಥ” ಯೋಜನೆ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ತಂದುಕೊಟ್ಟವರು ಮಲ್ಲಿಕಾರ್ಜುನ ಖರ್ಗೆ ಅವರು. ಖರ್ಗೆ ಅವರು ಹಾಗೂ ಧರ್ಮಸಿಂಗ್ ಅವರು ಸೋನಿಯಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರಿಗೆ ಮನದಟ್ಟು ಮಾಡಿ ಈ ಭಾಗದ ಅಭಿವೃದ್ಧಿಗೆ ಆರ್ಟಿಕಲ್ 371ಜೆ ಜಾರಿಗೆ ತಂದಿದ್ದಾರೆ. ಅಂದು ಲಾಲಕೃಷ್ಣ ಆಡ್ವಾಣಿ ಅವರು ಈ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿದಾಗ, ಅದನ್ನು ಸಾಧ್ಯಮಾಡಿ ತೋರಿಸುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರು ಇತಿಹಾಸ ಸೃಷ್ಟಿಸಿದ್ದಾರೆ” ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಪ್ರತಿ ವರ್ಷ ರಾಜ್ಯ ಬಜೆಟ್ ನಲ್ಲಿ 5 ಸಾವಿರ ಕೋಟಿ ಹೆಚ್ಚುವರಿ ಅನುದಾನವನ್ನು  ನೀಡುತ್ತಿದೆ.  ಈ ಬಾರಿ ಮಂಡನೆಯಾದ ಬಜೆಟ್ ನಲ್ಲೂ ಈ ಭಾಗದ ಪ್ರತಿ ಕ್ಷೇತ್ರಕ್ಕೆ ಸರಿಸುಮಾರು ರೂ. 120 ಕೋಟಿ ಹಣ ಅಭಿವೃದ್ಧಿಗೆ ಹೆಚ್ಚುವರಿಯಾಗಿ ಸಿಗುತ್ತಿದೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರ ಹೋರಾಟದಿಂದ ಈ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಸಿಕ್ಕಿದೆ. ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸ, ಉದ್ಯೋಗ ಮೀಸಲಾತಿ ನೀಡಿ ಭವಿಷ್ಯ ರೂಪಿಸಲಾಗಿದೆ. ಕಳೆದ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜನ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ ಖರ್ಗೆ ಅವರ ಆತ್ಮಸ್ಥೈರ್ಯವನ್ನು ತುಂಬಿಸುವ ಕೆಲಸ ಮಾಡಿದ್ದೀರಿ. ಇದಕ್ಕಾಗಿ ನಿಮಗೆ ಕೋಟಿ ನಮನ ಸಲ್ಲಿಸುತ್ತೇನೆ” ಎಂದರು.

ಇಲ್ಲಿರುವ ಇಎಸ್ಐ ಆಸ್ಪತ್ರೆ ನೋಡಿದರೆ ಮಲ್ಲಿಕಾರ್ಜುನ ಖರ್ಗೆ ಅವರು ನೆನಪಾಗುತ್ತಾರೆ. ಈಗ ಕಿದ್ವಾಯಿ ಆಸ್ಪತ್ರೆ ಈ ಭಾಗಕ್ಕೆ ಬಂದಿದೆ. ಕೇಂದ್ರ ವಿವಿ, ಶಾಲೆಗಳು ನಿಮ್ಮ ಕ್ಷೇತ್ರಗಳಲ್ಲಿ ತಲೆಎತ್ತಿವೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಮಂಡಳಿ ಸ್ಥಾಪಿಸಿ ಅದಕ್ಕೆ ಶಕ್ತಿ ತುಂಬಲಾಗುತ್ತಿದೆ. ಇಂದು ಚಾಲನೆ ನೀಡಿರುವ ರೂ.1,100 ಕೋಟಿಯ ಮೊತ್ತದ ಕಲ್ಯಾಣ ಪಥ ಯೋಜನೆಯಿಂದ ಪ್ರತಿ ಕ್ಷೇತ್ರದ ಗ್ರಾಮೀಣ ಪ್ರದೇಶದ ರಸ್ತೆಗಾಗಿ 25-30 ಕೋಟಿ ಹಣ ಸಿಗಲಿದೆ ಎಂದು ವಿವರಿಸಿದರು.

“ಈ ಭಾಗದ ನಮ್ಮ ಶಾಸಕರು ಹಾಗೂ ಮಂತ್ರಿಗಳು ನಿಮ್ಮ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. 200 ಕೋಟಿ ವೆಚ್ಚದಲ್ಲಿ ಆಸ್ಪತ್ರೆ, ಕೆಪಿಎಸ್ ಶಾಲೆಗಳು, ಬಳ್ಳಾರಿಯಲ್ಲಿ 100 ಕೋಟಿ ವೆಚ್ಚದಲ್ಲಿ ಮೆಗಾ ಡೇರಿ ಸ್ಥಾಪನೆ, 5267 ಶಿಕ್ಷಕರ ಹುದ್ದೆ ಭರ್ತಿಗೆ ಸರ್ಕಾರ ಸಂಕಲ್ಪ ಮಾಡಿದೆ. 65 ಕೋಟಿ ವೆಚ್ಚದಲ್ಲಿ ಉಗ್ರಾಣಗಳ ಸ್ಥಾಪನೆ, 24 ಹೊಸ ಪ್ರಾಥಮಿಕ ಶಾಲೆಗಳು, ಸುಮಾರು ಏಳು ತಾಲೂಕುಗಳಲ್ಲಿ ಹೊಸ ಹೆರಿಗೆ ಆಸ್ಪತ್ರೆ ಆರಂಭಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನೀವು ನಮಗೆ ಶಕ್ತಿ ನೀಡಿ ಅಧಿಕಾರಕ್ಕೆ ತಂದಿದ್ದೀರಿ. ನಿಮ್ಮ ಋಣ ತೀರಿಸಿ ಗೌರವ ಉಳಿಸಿಕೊಳ್ಳುತ್ತೇವೆ” ಎಂದು ಭರವಸೆ ನೀಡಿದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಗೆ ಜನಸಂಖ್ಯೆ ಆಧಾರದ ಮೇಲೆ ಅನುದಾನ ನೀಡಿ ಅವರ ಪ್ರಗತಿಗೆ ಕಾರಣವಾಗಿದ್ದರೆ ಅದು ಕರ್ನಾಟಕದಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ” ಎಂದು ಹೇಳಿದರು.

“ಮನಮೋಹನ್ ಸಿಂಗ್ ಅವರು ಇಂದು ನಮ್ಮೊಂದಿಗೆ ಇಲ್ಲ. ಅವರ ಸರ್ಕಾರದ ಅವಧಿಯಲ್ಲಿ ಈ ಭಾಗಕ್ಕೆ ಆರ್ಟಿಕಲ್ 371 ಜೆ ಮೂಲಕ ವಿಶೇಷ ಸ್ಥಾನಮಾನ ನೀಡಲಾಗಿದೆ. ಅವರು ಈ ದೇಶಕ್ಕೆ ನೀಡಿರುವ ಆರ್ಥಿಕ, ಸಾಮಾಜಿಕ ಶಕ್ತಿ ನಾವು ಮರೆಯಲು ಸಾಧ್ಯವಿಲ್ಲ. ಮನಮೋಹನ್ ಸಿಂಗ್ ನೇತೃತ್ವದಲ್ಲಿ  ಶೈಕ್ಷಣಿಕ ಹಕ್ಕು, ಆಹಾರ ಭದ್ರತಾ ಕಾಯ್ದೆ ಜಾರಿಗೆ ತರಲಾಯಿತು. ಹೀಗಾಗಿ ನಾವೆಲ್ಲರೂ ಅವರನ್ನು ಸ್ಮರಿಸಬೇಕು” ಎಂದು ತಿಳಿಸಿದರು..

ಮಲ್ಲಾಬಾದ್ ಏತ ನೀರಾವರಿಗೆ ಶೀಘ್ರ ಶಂಕುಸ್ಥಾಪನೆ:  ಮಲ್ಲಿಕಾರ್ಜುನ ಖರ್ಗೆ  ಅವರ ಮಾರ್ಗದರ್ಶಿನದಲ್ಲಿ ಇಂದು ನಾವೆಲ್ಲರೂ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಈ ಹಿಂದೆ ಬಿಜೆಪಿ ಸರ್ಕಾರ ಮಲ್ಲಾಬಾದ್ ಏತ ನೀರಾವರಿ ಯೋಜನೆಗೆ ಹಣ ನೀಡಲಿಲ್ಲ. ಹೀಗಾಗಿ ಈ ಯೋಜನೆಗೆ ನೆರವು ನೀಡಬೇಕು ಎಂದು ಅಜಯ್ ಸಿಂಗ್  ಮನವಿ ಮಾಡಿದ್ದರು.  ಮುಂದಿನ ಬಜೆಟ್ ನಲ್ಲಿ ಈ ಯೋಜನೆಗೆ ನೆರವು ನೀಡುವುದಾಗಿ ತಿಳಿಸಿದ್ದೆ. ನಾನು ಹಾಗೂ ಸಿದ್ದರಾಮಯ್ಯ  ಸೇರಿ ಈ ಯೋಜನೆಗೆ ಅನುಮತಿ ನೀಡಿದ್ದು ಟೆಂಡರ್ ಕರೆಯಲಾಗಿದೆ. ಮುಂದಿನ ದಿನಗಳಲ್ಲಿ ನಾನೇ ಬಂದು ಈ ಯೋಜನೆಗೆ ಭೂಮಿ ಪೂಜೆ ನೆರವೇರಿಸಲಿದ್ದೇನೆ ಎಂದರು.

ಮಹಿಳಾ ದಿನದ ಶುಭಾಶಯಗಳು: ಇಲ್ಲಿ ಬಂದಿರುವ ಎಲ್ಲಾ ತಾಯಂದಿರಿಗೆ ಮಹಿಳಾ ದಿನದ ಶುಭಾಶಯಗಳನ್ನು ಅರ್ಪಿಸುತ್ತೇನೆ.  ನಮ್ಮ ಸರ್ಕಾರ ಕೂಡ ಮಹಿಳೆಯರ ಮೇಲೆ ಹೆಚ್ಚು ವಿಶ್ವಾಸವಿಟ್ಟು, ನಿಮ್ಮ ಬದುಕಿನಲ್ಲಿ ಆರ್ಥಿಕ ಶಕ್ತಿ ತುಂಬಲು ಅನೇಕ ಯೋಜನೆ ರೂಪಿಸಿದೆ. ಬಡ ಮಹಿಳೆಯರಿಗೆ ಮಾಸಿಕ 2 ಸಾವಿರ, ಮಹಿಳೆಯರು ರಾಜ್ಯದೆಲ್ಲೆಡೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ, 200 ಯೂನಿಟ್ ವಿದ್ಯುತ್ ಉಚಿತ, 10 ಕೆ.ಜಿ ಅಕ್ಕಿ, ನಿರುದ್ಯೋಗ ಯುವಕ ಯುವತಿಯರಿಗೆ ನಿರುದ್ಯೋಗ ಭತ್ಯೆಯನ್ನು ನಮ್ಮ ಐದು ಗ್ಯಾರಂಟಿ ಯೋಜನೆಗಳ ಮೂಲಕ ನಮ್ಮ ಸರ್ಕಾರ ನೀಡುತ್ತಿದೆ. ನಿನ್ನೆ ನಮ್ಮ ಸರ್ಕಾರ ಬಜೆಟ್ ಮಂಡಿಸಿದೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು ಸೇರಿದಂತೆ ಮಹಿಳೆಯರಿಗೆ ಪ್ರೋತ್ಸಾಹದ ಹಣ ಹೆಚ್ಚು ಮಾಡಿದ್ದೇವೆ ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *