“ಸಿದ್ದರಾಮಯ್ಯ ಅವರು ಮಂಡಿಸಿದ್ದು ಕೇವಲ ಬಜೆಟ್ ಅಲ್ಲ. ರಾಜ್ಯದ ಎಲ್ಲಾ ವರ್ಗದ ಜನರು ಸಂತೋಷ ಪಡುವಂತಹ ಉಡುಗೊರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದ ಆವರಣದಲ್ಲಿ ರಾಜ್ಯ ಬಜೆಟ್ ವಿಚಾರವಾಗಿ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಬೆಂಗಳೂರು ನಗರದ ಅತಿ ಹೆಚ್ಚು ಯೋಜನೆಗಳಿಗೆ ಸಹಾಯ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳ ಜತೆಗೆ ಸುಮಾರು 1 ಲಕ್ಷ ಕೋಟಿಯಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 4 ಲಕ್ಷ ಕೋಟಿಗೂ ಮೀರಿದ ಬಜೆಟ್ ನಲ್ಲಿ ನೀರಾವರಿ, ಲೋಕೋಪಯೋಗಿ ಇಲಾಖೆಗೆ ಆದ್ಯತೆ ನೀಡಲಾಗಿದ್ದು, ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ 8 ಸಾವಿರ ಕೋಟಿ ನೀಡಲಾಗಿದೆ. ರಾಜ್ಯ ಸರ್ಕಾರ ಸಾಲ ಮಾಡಿದೆ ಎನ್ನುವುದಾದರೆ ಕೇಂದ್ರ ಸರ್ಕಾರವೂ ಸಾಲ ಮಾಡಿದೆ. ಕೊಟ್ಟ ಮಾತು ಉಳಿಸಿಕೊಳ್ಳುವ ಬಜೆಟ್ ಮಂಡಿಸಲಾಗಿದೆ” ಎಂದರು.
1989ರಿಂದ ಶಾಸಕನಾಗಿ ಆಯ್ಕೆಯಾಗಿದ್ದು, ನನ್ನ 36 ವರ್ಷಗಳ ರಾಜಕೀಯ ಪಯಣದಲ್ಲಿ ಇದು ಐತಿಹಾಸಿಕ, ಜನಪರವಾದ, ಎಲ್ಲ ವರ್ಗದ ಜನರಿಗೂ ನ್ಯಾಯ ಕೊಡಿಸುವ ದೂರದೃಷ್ಟಿಯ ಬಜೆಟ್. ಮುಸ್ಲಿಂ ಓಲೈಕೆ ಮಾಡುವ ಬಜೆಟ್ ಎಂಬ ಬಿಜೆಪಿ ನಾಯಕರ ಆರೋಪದ ಬಗ್ಗೆ ಕೇಳಿದಾಗ, ನಾವು ಎಲ್ಲಾ ವರ್ಗದವರನ್ನು ಓಲೈಕೆ ಮಾಡಬೇಕಲ್ಲವೇ. ಎಲ್ಲರನ್ನು ಸಮಾನವಾಗಿ ನೋಡಬೇಕು ಎಂದು ತಿಳಿಸಿದರು.
ಬ್ರ್ಯಾಂಡ್ ಬೆಂಗಳೂರಿಗೆ ಹೆಚ್ಚಿನ ಅನುದಾನನ ಸಿಕ್ಕಿದ್ದು, ನಿಮ್ಮ ಕನಸು ನನಸಾಗುತ್ತಿದೆ ಎಂದು ಕೇಳಿದಾಗ, “ಇದು ಕೇವಲ ನನ್ನ ಕನಸಲ್ಲ. ರಾಜ್ಯ ಹಾಗೂ ದೇಶದ ಕನಸು. ಕೇಂದ್ರ ಸರ್ಕಾರವಂತೂ ಬೆಂಗಳೂರಿಗೆ ಏನು ನೀಡಲಿಲ್ಲ. ನಮ್ಮ ಸರ್ಕಾರವಾದರೂ ನೀಡಬೇಕಲ್ಲವೇ” ಎಂದರು.