ಬೆಂಗಳೂರು, ಮಾ.7: ಹಣಕಾಸು ಸಚಿವರೂ ಆದ ಸಿದ್ದರಾಮಯ್ಯ ಅವರಿಂದು ಮಂಡಿಸಿರುವ 2025-26ನೇ ಸಾಲಿನ ಆಯವ್ಯಯ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಆಶಾದಾಯಕ ಬಜೆಟ್ ಆಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, 16ನೇ ಬಾರಿಗೆ ದಾಖಲೆಯ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರ ಈ ಬಜೆಟ್ ಸ್ವೀಟ್ 16 ಬಜೆಟ್ ಆಗಿದೆ. ಮುಖ್ಯಮಂತ್ರಿಯವರು ತಮ್ಮ ಅಪಾರ ಆರ್ಥಿಕ ಅನುಭವದಿಂದ 1 ಟ್ರಿಲಿಯನ್ ಆರ್ಥಿಕ ರಾಜ್ಯವನ್ನಾಗಿ ಕರ್ನಾಟಕವನ್ನು ರೂಪಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಅಪೌಷ್ಟಿಕತೆ ನಿವಾರಿಸಲು ಶಾಲಾ ಮಕ್ಕಳಿಗೆ ವಾರದ ಆರೂ ದಿನ ಬಾಳೆಹಣ್ಣು, ಮೊಟ್ಟೆ ನೀಡುವ ನಿರ್ಧಾರದಿಂದ ಬಡ ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಆಗಲಿದ್ದು, ಸದೃಢ ಕರ್ನಾಟಕ ನಿರ್ಮಾಣಕ್ಕೆ ನಾಂದಿ ಹಾಡಲಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ರಸ್ತೆ, ಸಣ್ಣ ನೀರಾವರಿ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ ಅಡಿ 8000 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ಇದು ಪ್ರತಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ತಿಳಿಸಿದ್ದಾರೆ.
ಕಾರ್ಬನ್ ಕ್ರೆಡಿಟ್ ಮತ್ತು ಕೃಷಿ ಅರಣ್ಯದ ಮೂಲಕ ರೈತರ ಆರ್ಥಿಕ ಸ್ಥಿತಿ ಬಲಪಡಿಸಲು ಕೈಗೊಂಡರುವ ಕ್ರಮ ಪರಿಸರ ಸಂರಕ್ಷಣೆಗೂ ಪೂರಕವಾಗಿದೆ. ಇದು ಇಂಗಾಲದ ಸಂಗ್ರಹಣಾ ಸಾಮರ್ಥ್ಯದ ಗಿಡ ಮರಗಳನ್ನು ಬೆಳೆಸಲು ಉತ್ತೇಜನ ನೀಡಿ, ಜಾಗತಿಕ ತಾಪಮಾನ ಏರಿಕೆಯನ್ನು ತಡೆಯತ್ತದೆ ಎಂದು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ವನ್ಯಜೀವಿ ದಾಳಿ ಸಾವಿನ ಪರಿಹಾರ ಹೆಚ್ಚಳ:
ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಆನೆ ಕಾರ್ಯಪಡೆ ಮತ್ತು ಚಿರತೆ ಕ್ಷಿಪ್ರ ಕಾರ್ಯಪಡೆಯ ನಿರ್ವಹಣೆಗೆ 17 ಕೋಟಿ ರೂ. ಒದಗಿಸಿರುವುದರ ಜೊತೆಗೆ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಪ್ರಸಕ್ತ ಹಣಕಾಸು ವರ್ಷದಲ್ಲಿ 60 ಕೋಟಿ ರೂ. ತೆಗೆದಿಡಲಾಗಿದೆ. ವನ್ಯಜೀವಿ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ನೀಡಲಾಗುವ ಕೃಪಾಧನದ ಪರಿಹಾರದ ಮೊತ್ತವನ್ನು ಈಗಿರುವ 15 ಲಕ್ಷ ರೂ.ನಿಂದ 20 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ.
ಮಾನವ -ಆನೆ ಸಂಘರ್ಷ ತಡೆಯಲು ಭದ್ರಾ ಹುಲಿ ಸಂರಕ್ಷಿತ ಪ್ರದೇಶದ 20 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಆನೆ ಧಾಮ (ಸಾಫ್ಟ್ ರಿಲೀಸ್ ಸೆಂಟರ್) ನಿರ್ಮಿಸಲು 20 ಕೋಟಿ ರೂ. ನೀಡಲಾಗಿದೆ. ಆನೆ ಧಾಮ ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಆನೆಯ ಸಮಸ್ಯೆಗೆ ಪರಿಹಾರವಾಗುತ್ತದೆ. ಒಟ್ಟಾರೆ ಇದು ಜನಪರವಾದ, ಸರ್ವಸ್ಪರ್ಶಿ ಬಜೆಟ್ ಆಗಿದೆ ಎಂದು ಈಶ್ವರ ಖಂಡ್ರೆ ಪ್ರತಿಕ್ರಿಯಿಸಿದ್ದಾರೆ