ಬೆಂಗಳೂರು: ದಕ್ಷಿಣ ಭಾರತದ ಯಶಸ್ಸು ಕಂಡು ಸೊರಗಿರುವ ಕೇಂದ್ರ ಬಿಜೆಪಿ ಈಗ “ಕ್ಷೇತ್ರ ಮರು ವಿಂಗಡಣೆ” ಎಂಬ ಅಸ್ತ್ರದ ಮೂಲಕ ಸಮರ ಸಾರಲು ಹೊರಟಿದೆ. ಆದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಕಿಂಚಿತ್ತೂ ಅನ್ಯಾಯವಾಗಲು ನಮ್ಮ ಕಾಂಗ್ರೆಸ್ ಸರ್ಕಾರ ಬಿಡಲ್ಲ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್, ಕೇಂದ್ರ ಸರ್ಕಾರ ಉದ್ದೇಶಿತ ಯೋಜನೆಯು ದಕ್ಷಿಣ ಭಾರತದ ರಾಜ್ಯಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಇಲ್ಲವೇ ಅನ್ಯಾಯ ಮಾಡುವುದು ಆಗಿದೆ ಎಂದು ಕಿಡಿಕಾರಿದರು.
ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಮರು ವಿಂಗಡಣೆ ಮಾಡಲಾಗುತ್ತದೆ ಎಂಬ ವರದಿಗಳು ಬಂದಿವೆ. ಇದರಿಂದ ಅನ್ಯಾಯವಾಗುವುದು ನಮ್ಮ ದಕ್ಷಿಣ ಭಾರತದ ರಾಜ್ಯಗಳಿಗೆ. ಏಕೆಂದರೆ ಹಲವಾರು ದಶಕಗಳಿಂದಲೂ ನಮ್ಮ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳು ಜನಸಂಖ್ಯೆ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಉತ್ತರ ಭಾರತದ ರಾಜ್ಯಗಳು ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ ಎಂದರು.
ತೆರಿಗೆ ಹಂಚಿಕೆಯಲ್ಲೂ ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಬಿಜೆಪಿ ಸರ್ಕಾರ ಮೋಸ ಮಾಡಿದೆ. ಈಗ ಕ್ಷೇತ್ರ ಮರು ವಿಂಗಡಣೆ ನೆಪದಲ್ಲಿ ಮತ್ತೆ ದಕ್ಷಿಣದ ಮೇಲೆ ಉತ್ತರ ಭಾರತದ ಪಕ್ಷವಾಗಿರುವ ಬಿಜೆಪಿ ಸಮರ ಸಾರಲು ಸಜ್ಜಾಗಿದೆ ಎಂದು ಸಚಿವರು ಟೀಕಿಸಿದರು.
ದಕ್ಷಿಣ ಭಾರತದಲ್ಲಿ ಬಿಜೆಪಿ ಪರವಾಗಿ ಹೆಚ್ಚು ಬೆಂಬಲ ಸಿಕ್ಕಿಲ್ಲ. ಇದಕ್ಕೆ ಇಲ್ಲಿನ ಜನಪ್ರತಿನಿಧಿಗಳನ್ನು ಸಂಖ್ಯೆಯನ್ನು ಕಡಿಮೆ ಮಾಡುವ ಹುನ್ನಾರ ನಡೆದಿದೆ ಎಂದು ಆಕ್ಷೇಪಿಸಿದರು.
ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಈಗಾಗಲೇ ಕೇಂದ್ರ ಸಚಿವ ಅಮಿತ್ ಶಾ ಅವರ ಆಲೋಚನೆಗಳಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಕೇರಳ ಮುಖ್ಯಮಂತ್ರಿ ಪಿ.ವಿಜಯನ್ ಕೂಡ ಜನಸಂಖ್ಯೆ ಆಧಾರಿತ ಕ್ಷೇತ್ರ ಮರು ವಿಂಗಡಣೆ ಪ್ರಸ್ತಾವಕ್ಕೆ ಅಸಮಾಧಾನ ವ್ಯಕ್ತಪಡಿಸಿ ಕೇಂದ್ರ ಬಿಜೆಪಿಗೆ ತಿರುಗೇಟು ನೀಡಿದ್ದಾರೆ ಎಂದು ಡಾ. ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಒಂದು ವೇಳೆ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಮರು ವಿಂಗಡಣೆಯಾದರೆ ನಮ್ಮ ರಾಜ್ಯದ ಲೋಕಸಭಾ ಕ್ಷೇತ್ರಗಳು 28ರಿಂದ 26ಕ್ಕೆ ಇಳಿಯುವ ಸಾಧ್ಯತೆಗಳಿವೆ. ಇದನ್ನು ಕನ್ನಡಿಗರು ಸಹಿಸಲು ಸಾಧ್ಯವಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಈ ಅನ್ಯಾಯವನ್ನು ನಾವು ಕನ್ನಡಿಗರು ಸಹಿಸಲ್ಲ. ನಮ್ಮ ಮುಖ್ಯಮಂತ್ರಿಗಳು ಹೇಳಿದಂತೆ ದಕ್ಷಿಣ ಭಾರತದ ರಾಜ್ಯಗಳು ಈ ವಿಷಯದಲ್ಲಿ ಒಗ್ಗಟು ಪ್ರದರ್ಶಿಸಿ ಕೇಂದ್ರ ಬಿಜೆಪಿಯ ನಡೆಗೆ ತಡೆಯೊಡ್ಡುತ್ತೇವೆ. ಕ್ಷೇತ್ರಗಳ ಸಂಖ್ಯೆಗೆ ಅನುಪಾತದಲ್ಲಿಮರು ವಿಂಗಡಣೆ ಮಾಡಲಿ. ಈ ವಿಷಯದಲ್ಲಿ ರಾಜ್ಯದ ಬಿಜೆಪಿ, ಜೆಡಿಎಸ್ ಸಂಸದರು ಧೈರ್ಯದಿಂದ ದನಿ ಎತ್ತಬೇಕು ಎಂದು ಪಾಟೀಲ್ ಆಗ್ರಹಿಸಿದರು.