ಯಲ್ಲಾಪುರದ ಮೂಲದ ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿ ಹೆಣ್ಣುಮಗುವಿಗೆ ಜನ್ಮ ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆರೋಪಿ ದುರ್ಗಪ್ಪ ಭೋವಿ (20)ಯನ್ನು ಮುಂಡಗೋಡ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತ ವಿದ್ಯಾರ್ಥಿನಿ ಮುಂಡಗೋಡ ತಾಲೂಕಿನ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದಳು. ಈ ವೇಳೆ ಯುವತಿಯನ್ನು ಪರಿಚಯಿಸಿಕೊಂಡಿರುವ ಆರೋಪಿ, ಪುಸಲಾಯಿಸಿ ಸಂತ್ರಸ್ತೆ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ್ದಾನೆ. ಈ ವಿಚಾರ ಯಾರಿಗಾದರೂ ಹೇಳಿದ್ರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದ ಎಂದು ಆರೋಪಿಸಲಾಗಿದೆ. ಬೆದರಿಕೆಯ ಕಾರಣ ಅತ್ಯಾಚಾರ ನಡೆದ ವಿಷಯ ಮನೆಯಲ್ಲಿ ತಿಳಿಸದೆ ಮುಚ್ಚಿಟ್ಟಿದ್ದ ಸಂತ್ರಸ್ತೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಪಾಲಕರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ತಪಾಸಣೆ ನಡೆಸಿದಾಗ ಆಕೆ ಗರ್ಭಿಣಿ ಎಂಬ ವಿಚಾರ ತಿಳಿದಿದೆ.
ತಪಾಸಣೆ ವೇಳೆ ಸಂತ್ರಸ್ತೆ ಅಪ್ರಾಪ್ತ ವಯಸ್ಕಳೆಂಬ ವಿಚಾರ ತಿಳಿದ ವೈದ್ಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಕೆಗೆ ಹೆಣ್ಣು ಮಗು ಜನಿಸಿದ್ದು, ಮಗುವಿಗೆ ಉಸಿರಾಟ ತೊಂದರೆ ಎದುರಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಆರೋಪಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.