Menu

ಪಶುವೈದ್ಯ ಇಲಾಖೆಯಲ್ಲಿ 700 ಗ್ರೂಪ್ ‘ಡಿ’ ವೃಂದದ ಹುದ್ದೆ ಭರ್ತಿಗೆ ಮಂಜೂರಾತಿ

ರಾಜ್ಯದ ಪಶುವೈದ್ಯ ಇಲಾಖೆಯಲ್ಲಿ ಒಟ್ಟು 18563 ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 8151 ಅಧಿಕಾರಿ/ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಉಳಿದಂತೆ ಒಟ್ಟು 10412 ಹುದ್ದೆಗಳು ಖಾಲಿ ಇವೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್  ಹೇಳಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ವೇಳೆ ಸದಸ್ಯರಾದ ಎಂ. ನಾಗರಾಜು ಅವರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಸಚಿವರು,  ಇಲಾಖೆಯಲ್ಲಿ 400 ಪಶು ವೈದ್ಯಾಧಿಕಾರಿಗಳ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ನೇಮಕಾತಿ ಪ್ರಕ್ರಿಯೆ ವಿಳಂಬವಾಗಬಹುದಾದ ಹಿನ್ನಲೆಯಲ್ಲಿ ಹಾಲಿ 400 ಪಶುವೈದ್ಯಾಧಿಕಾರಿಗಳ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಈಗಾಗಲೇ 360 ಪಶು ವೈದ್ಯಾಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಿರುತ್ತಾರೆ ಎಂದರು.

ಕಲ್ಯಾಣ ಕರ್ನಾಟಕ 371 ಜೆ ಯಡಿ 32 ಪಶು ವೈದ್ಯಕೀಯ ಪರೀಕ್ಷಕರ ಹುದ್ದೆಗಳಿಗೆ ವಿಶೇಷ ನೇಮಕಾತಿ ನಿಯಮದ ಮೂಲಕ ಅರ್ಹ 32 ಅಭ್ಯರ್ಥಿಗಳಿಗೆ ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಿ 27 ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ನೀಡಲಾಗಿದೆ. ಖಾಲಿ ಇರುವ ಗ್ರೂಪ್ ‘ಡಿ’ ವೃಂದದ 2641 ಹೊರ ಗುತ್ತಿಗೆ ನೌಕರರನ್ನು ಭರ್ತಿ ಮಾಡಲಾಗಿದೆ ಹಾಗೂ ಈ ಖಾಲಿ ಇರುವ ಗ್ರೂಪ್ ‘ಡಿ’ ವೃಂದದ ಹುದ್ದೆಗಳಿಗೆದುರಾಗಿ 700 ಹುದ್ದೆಗಳಿಗೆ ಮಂಜೂರಾತಿ ದೊರೆತಿದ್ದು ಮುಂದಿನ ಆರ್ಥಿಕ ವರ್ಷದಲ್ಲಿ ನೇಮಕಾತಿ ಮಾಡಿಕೊಳ್ಳಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *