ಹಾಸನದ ರೈಲು ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯ ಅತ್ಯಾಚಾರ ನಡೆಸಿ ತಲೆಗೆ ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ ನೇಪಾಳಿ ಕೂಲಿಕಾರ್ಮಿಕನನ್ನು ಅರಸೀಕೆರೆ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ನೇಪಾಳದ ಮೊರಾಂಗ್ ಜಿಲ್ಲೆಯ ಮೌಸಮ್ ಪಹಡಿ(25)ಬಂಧಿತ ಆರೋಪಿ. ಆತನನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ರೈಲ್ವೆ ಎಸ್ ಪಿ ಡಾ.ಸೌಮ್ಯಲತಾ ಎಸ್.ಕೆ ತಿಳಿಸಿದ್ದಾರೆ.
ಫೆ.13 ರಂದು ಬೆಳಿಗ್ಗೆ 7-15 ರ ಸುಮಾರಿಗೆ ಹಾಸನ ರೈಲು ನಿಲ್ದಾಣದ ಸಕಲೇಶಪುರ ಕಡೆಯ ಯಾರ್ಡಿನಲ್ಲಿ ಟವರ್ ವ್ಯಾಗನ್ ಶೆಡ್ ನ ಕಟ್ಟಡದ ಬಳಿ ಹೋಗಿ ನೋಡಿದಾಗ 40ವರ್ಷದ ಅಪರಿಚಿತ ಮಹಿಳೆಯೊಬ್ಬರು ನಿರ್ಮಾಣ ಹಂತದಲ್ಲಿರುವ ಟವರ್ ವ್ಯಾಗನ್ ಶೆಡ್ ನ ಆಯಿಲ್ ಅಂಡ್ ಪೆಟ್ರೋಲ್ ಗೋಡನ್ ರೂಮಿನಲ್ಲಿ ಮೃತಪಟ್ಟಿರುವುದು ಪತ್ತೆಯಾಗಿತ್ತು.
ಸಕಲೇಶಪುರದಲ್ಲಿ ರಸ್ತೆ ಕಾಮಗಾರಿ ಕೆಲಸದಲ್ಲಿದ್ದ ಆರೋಪಿ, ಫೆಬ್ರವರಿ 13ರಂದು ನೇಪಾಳಕ್ಕೆ ತೆರಳಲು ಬೆಂಗಳೂರಿನತ್ತ ಪ್ರಯಾಣಿಸುವಾಗ ಹಾಸನದ ರೈಲ್ವೆ ಜಂಕ್ಷನ್ ಸಮೀಪದ ಶೆಡ್ ಬಳಿ ಅಪರಿಚಿತ ಮಹಿಳೆಯನ್ನು ಗಮನಿಸಿ ಅತ್ಯಾಚಾರವೆಸಗಿದ್ದ. ಆಕೆ ಗಲಾಟೆ ಮಾಡಬಾರದು ಎಂದು ದುಪ್ಪಟ್ಟದಿಂದ ಕತ್ತು ಬಿಗಿದು ದಿದ್ದ. ನಂತರ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ರೈಲಿನಲ್ಲಿ ಬೆಂಗಳೂರು ಸೇರಿದ್ದ.
ಪ್ರಕರಣ ದಾಖಲಿಸಿಕೊಂಡಿದ್ದ ಅರಸೀಕೆರೆ ರೈಲ್ವೆ ಠಾಣೆ ಪೊಲೀಸರು, ಕಾರ್ಯಾಚರಣೆ ಕೈಗೊಂಡು ಬೆಂಗಳೂರಿನಲ್ಲಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಗುತ್ತಿಗೆ ಆಧಾರದಲ್ಲಿ ರಸ್ತೆ ಕಾಮಗಾರಿ ಕೆಲಸಕ್ಕೆ ಹಾಸನಕ್ಕೆ ಬಂದಿದ್ದು, ಈ ಮೊದಲು ಯಾವುದೇ ಅಪರಾಧ ಹಿನ್ನೆಲೆ ಕಂಡುಬಂದಿಲ್ಲ. ನೇಪಾಳ ರಾಷ್ಟ್ರದವನಾದ್ದರಿಂದ ಅಲ್ಲಿ ಅಪರಾಧ ಹಿನ್ನೆಲೆಯಿದೆಯಾ ಎಂಬುದರ ಕುರಿತು ಮಾಹಿತಿ ಕೇಳಲಾಗಿದೆ. ಹತ್ಯೆಯಾದ ಮಹಿಳೆಯ ಗುರುತು ಇದುವರೆಗೂ ಪತ್ತೆಯಾಗಿಲ್ಲ ಎಂದು ರೈಲ್ವೆ ಎಸ್.ಪಿ ಡಾ. ಸೌಮ್ಯಲತಾ ಎಸ್.ಕೆ ತಿಳಿಸಿದ್ದಾರೆ.