ಪಕ್ಷದಿಂದ ಅಂತರ ಕಾಯ್ದುಕೊಂಡು ವರಿಷ್ಠರ ವಿರುದ್ಧ ಸೆಡ್ಡು ಹೊಡೆದಿರುವ ಜಿಟಿ ದೇವೇಗೌಡ ಅವರ ಪುತ್ರ, ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಡಿ.ಹರೀಶ್‌ಗೌಡ ಅವರನ್ನು ಜೆಡಿಎಸ್ ಪಕ್ಷದ ಮುಖ್ಯ ಸಚೇತಕರನ್ನಾಗಿ ನೇಮಿಸ ಲಾಗಿದೆ.
ಪುತ್ರನಿಗೆ ಹುದ್ದೆ ನೀಡಿ ತಂದೆಗೆ ಜೆಡಿಎಸ್ ವರಿಷ್ಠರು ಜಿಟಿಡಿಗೆ ಶಾಕ್ ನೀಡಿದ್ದಾರೆ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು ಅವರು ಜಿ.ಡಿ.ಹರೀಶ್‌ಗೌಡ ಅವರನ್ನು ಪಕ್ಷದ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಿರುವ ಬಗ್ಗೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಪತ್ರ ಬರೆದಿದ್ದಾರೆ.
ಜೆಡಿಎಸ್ ಪಕ್ಷದ ಮುಖ್ಯ ಸಚೇತಕರಿಗೆ ಸೂಕ್ತ ಸ್ಥಾನಮಾನದ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಲು ಪತ್ರದಲ್ಲಿ ಕೋರಿದ್ದಾರೆ. ಜೆಡಿಎಲ್‌ಪಿ ನಾಯಕ ಸ್ಥಾನ ಸಿಗದೆ ಅಸಮಾಧಾನಗೊಂಡಿದ್ದ ಮಾಜಿ ಶಾಸಕ ಹಾಗೂ ಹಿರಿಯ ಶಾಸಕ ಜಿ.ಟಿ.ದೇವೇಗೌಡರ ಮನ ಒಲಿಸುವ ಉದ್ದೇಶದಿಂದ ಅವರ ಪುತ್ರ ಹರೀಶ್‌ಗೌಡಗೆ ಜೆಡಿಎಸ್ ವರಿಷ್ಠರು ಮುಖ್ಯ ಸಚೇತಕ ಸ್ಥಾನ ನೀಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.