ಮಾರ್ಚ್ 21ರೊಳಗೆ ಭಾರತೀಯ ಜನತಾ ಪಕ್ಷಕ್ಕೆ ಮುಂದಿನ ರಾಷ್ಟ್ರೀಯ ಅಧ್ಯಕ್ಷರ ನೇಮಕವಾಗುವ ಸಾಧ್ಯತೆಯಿದೆ. ಮಾರ್ಚ್ 21ರಿಂದ 23ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಆರ್‌ಎಸ್‌ಎಸ್ ಸಭೆಗೂ ಮೊದಲು ಬಿಜೆಪಿಗೆ ಹೊಸ ರಾಷ್ಟ್ರೀಯ ಅಧ್ಯಕ್ಷರ ನೇಮಕ ನಡೆಯಲಿದೆ.
ದೆಹಲಿ ವಿಧಾನಸಭಾ ಚುನಾವಣೆಯ ಗೆಲುವಿನ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗಾಗಿ ಶೇ. 50ರಷ್ಟು ರಾಜ್ಯ ಗಳಲ್ಲಿ ಸಂಘಟನಾ ಚುನಾವಣೆಗಳ ಬಗ್ಗೆ ಬಿಜೆಪಿ ಬಹಳ ಸಕ್ರಿಯವಾಗಿದೆ. ಆಯ್ದ ರಾಜ್ಯಗಳ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾರ್ಚ್ 14ರೊಳಗೆ ಚುನಾವಣೆಗಳನ್ನು ನಡೆಸುವಂತೆ ಸೂಚಿಸಲಾಗಿದೆ.
ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಮುಂಬರುವ ವರ್ಷಗಳಲ್ಲಿ ದಕ್ಷಿಣ ಭಾರತದ ಮೇಲೆ ಹೆಚ್ಚಿನ ಗಮನವಿದ್ದು, ಮುಂದಿನ ಬಿಜೆಪಿ ಅಧ್ಯಕ್ಷರು ದಕ್ಷಿಣ ಭಾರತದಿಂದ ಆಯ್ಕೆಯಾಗುವ ಸಾಧ್ಯತೆಯಿದೆ. ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷರೂ ಆಗಿದ್ದ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ ಕಿಶನ್ ರೆಡ್ಡಿ ಹೆಸರು ಬಿಜೆಪಿ ರಾಷ್ಟ್ರಾಧ್ಯಕ್ಷರ ಸ್ಥಾನಕ್ಕೆ ಕೇಳಿಬರುತ್ತಿದೆ.
ದಕ್ಷಿಣದಿಂದ ಕೇಳಿಬರುತ್ತಿರುವ ಮತ್ತೊಂದು ಹೆಸರು ಕೂಡ ಆಂಧ್ರಪ್ರದೇಶದ್ದೇ. ಆಂಧ್ರದ ದಗ್ಗುಬಾಟಿ ಪುರಂದೇಶ್ವರಿ ಪ್ರಸ್ತುತ ಎನ್‌ಡಿಎ ಆಡಳಿತದ ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷೆ. ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ಮತ್ತು ಕೊಯಮತ್ತೂರಿನ ಶಾಸಕಿ ವನತಿ ಶ್ರೀನಿವಾಸನ್ ಅವರ ಬಗ್ಗೆಯೂ ಚರ್ಚೆ ನಡೆಯುತ್ತಿದೆ.