ವಿದೇಶಿ ಕಾಯ್ದೆ ನಿಯಮ ಉಲ್ಲಂಘಿಸಿ, ವಿದೇಶಿ ಪ್ರಜೆಗಳಿಗೆ ಮನೆಗಳನ್ನು ಬಾಡಿಗೆ ನೀಡುವ ಮನೆ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದೇಶಿಯರ ಕಾಯ್ದೆ-1946 ರ ಕಲಂ.7ರ ರೀತ್ಯಾ ಯಾವುದೇ ಮನೆಯ ಮಾಲೀಕ ಅಥವಾ ನಿರ್ವಹಣೆ ಮಾಡುವ ವ್ಯಕ್ತಿ ಯಾವುದೇ ವಿದೇಶಿ ಪ್ರಜೆಗಳಿಗೆ ತನ್ನ ಮನೆಯನ್ನು ಬಾಡಿಗೆಗೆ ನೀಡಿದ 24 ಘಂಟೆಯ ಒಳಗಾಗಿ ವಿದೇಶಿಯರ ನೋಂದಣಿ ಇಲಾಖೆಯ ಆನ್‌ಲೈನ್ ಪೋರ್ಟಲ್‌ಮೂಲಕ ಪಾರಂ-ಸಿ ನಮೂನೆ ಯನ್ನು ತಪ್ಪದೇ ಎಫ್‌ಆರ್‌ಆರ್‌ಒ ಅಧಿಕಾರಿಗಳಿಗೆ ಸಲ್ಲಿಸಬೇಕಿರುತ್ತದೆ ಎಂದು ವಿವರಿಸಿದರು.
ಎಫ್‌ಆರ್‌ಆರ್‌ಒ ಅಧಿಕಾರಿಗಳು ನಮೂನೆ-ಸಿಯನ್ನು ಅನುಮೋದಿಸಿದ ನಂತರ, ಮನೆಯ ಮಾಲೀಕ ಅಥವಾ ನಿರ್ವಹಣೆ ಮಾಡುವ ವ್ಯಕ್ತಿ, ವಿದೇಶಿ ವ್ಯಕ್ತಿ ವಾಸ್ತವ್ಯಕ್ಕೆ ಬಂದ 24 ಘಂಟೆಯ ಒಳಗಾಗಿ ನಮೂನೆ-ಸಿ ಮುದ್ರಿತ ಪ್ರತಿಗಳನ್ನು ಹೊಂದಿರಬೇಕೆಂಬ ನಿಯಮವಿದೆ. ಆದರೆ ಮನೆಯ ಕೆಲವು ಮಾಲೀಕರುಗಳು ಈ ನಿಯಮಗಳನ್ನು ಪಾಲಿಸದೇ 2020ನೇ ಸಾಲಿನಿಂದ ಇಲ್ಲಿಯ ವರೆಗೆ ವಿದೇಶಿ ಪ್ರಜೆಗಳಿಗೆ ಮನೆಗಳನ್ನು ಬಾಡಿಗೆಗೆ ನೀಡಿರುವವರ ವಿರುದ್ಧ ಒಟ್ಟು 70 ಪ್ರಕರಣಗಳು ದಾಖಲಾಗಿರುತ್ತವೆ ಎಂದರು.
70 ಪ್ರಕರಣಗಳ ಪೈಕಿ 42 ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿರುತ್ತವೆ. 26 ಪ್ರಕರಣಗಳು ತನಿಖೆ ಹಂತದಲ್ಲಿರುತ್ತವೆ. 1 ಪ್ರಕರಣವು ವರ್ಗಾಯಿಸಲಾಗಿರುತ್ತದೆ. ಬಂಡೇಪಾಳ್ಯ ಪೊಲೀಸ್ ಠಾಣೆಯ 1 ಪ್ರಕರಣದಲ್ಲಿ ಆರೋಪಿಯ ವಿರುದ್ಧ ಆರೋಪವು ನ್ಯಾಯಾಲಯದಲ್ಲಿ ಸಾಬೀತಾಗಿ, ಆರೋಪಿಗೆ 5 ಸಾವಿರ ರೂ.ದಂಡವನ್ನು ವಿಧಿಸಲಾಗಿದೆ. ಅದ್ದರಿಂದ ಇನ್ನು ಮುಂದೆ ಯಾವುದೇ ವಿದೇಶಿ ಪ್ರಜೆಗಳಿಗೆ ಬಾಡಿಗೆ ಅಥವಾ ಆಶ್ರಯ ನೀಡುವ ಮುನ್ನ ಅವರುಗಳ ಪೂರ್ವಪರ ವಿವರಗಳನ್ನು ವಿಚಾರಣೆ ಮಾಡಿ, ಅವರುಗಳ ವಿವರಗಳನ್ನು ನಿಯಮಾನುಸಾರ ಸಂಬಂಧ ಪಟ್ಟ ಪ್ರಾಧಿಕಾರಕ್ಕೆ ನೀಡುವುದು ಪ್ರತಿ ಮನೆ ಮಾಲೀಕರ ಕರ್ತವ್ಯವೆಂಬ ವಿಷಯವನ್ನು ಸಾರ್ವಜನಿಕರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.
ನಿಯಮಗಳೇನು?: ಪ್ರವಾಸಿ ವೀಸಾದಡಿ ಬರುವ ವಿದೇಶಿ ಪ್ರಜೆಗಳಿಗೆ ಮನೆ, ಅಪಾರ್ಟ್ಮೆಂಟ್ಗಳಲ್ಲಿ ಬಾಡಿಗೆ ನೀಡುವಂತಿಲ್ಲ. ಪ್ರವಾಸಿ ಹೊಟೇಲ್ಗಳಲ್ಲಿ ಅವರು ವಾಸವಿದ್ದು, ಆ ಮಾಹಿತಿಯನ್ನು ಹೊಟೇಲ್ನಿಂದಲೇ ಪೊಲೀಸರಿಗೆ ನೀಡಲಾಗುತ್ತದೆ. ವಿದ್ಯಾಭಾಸ ಅಥವಾ ದೀರ್ಘ ಅವಧಿಗೆ ಉಳಿಯಲು ಬರುವ ವಿದೇಶಿ ಪ್ರಜೆಗಳಿಗೆ ಮನೆ, ಅಪಾರ್ಟ್ಮೆಂಟ್ಗಳಲ್ಲಿ ಬಾಡಿಗೆಗೆ ಇರಲು ವೀಸಾದ ಅವಧಿಯ ಆಧಾರದಲ್ಲಿ ಅವಕಾ ಕಲ್ಪಿಸಬಹುದು. ಆದರೆ, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು.
ಪೊಲೀಸರಿಗೆ ಮಾಹಿತಿ ನೀಡುವುದು ಹೇಗೆ?: ವಿದೇಶಿ ಪ್ರಜೆಗಳಿಗೆ ಬಾಡಿಗೆಗೆ ಮನೆ ನೀಡುವಾಗ ಮನೆ ಮಾಲೀಕರು ಕಡ್ಡಾಯವಾಗಿ ಆನ್ಲೈನ್ನಲ್ಲಿ ‘ಸಿ ಫಾರ್ಮ್’ ಭರ್ತಿ ಮಾಡಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.
ನೀವು ಸಲ್ಲಿಸಿದ ಅರ್ಜಿಯನ್ನು ಎಫ್ ಆರ್ ಆರ್ ಒ ಅಧಿಕಾರಿಗಳು ಅನುಮೋದಿಸಿದ ಮೇಲೆ ವಿದೇಶಗರಿಗೆ ಬಾಡಿಗೆ ನೀಡಬೇಕು
ಈ ನಿಯಮ ಏಕೆ?: ವಿದೇಶಿ ಪ್ರಜೆಗಳು ಮಾದಕವಸ್ತು ಮಾರಾಟ, ಸಾಗಾಟಣೆ ಸೇರಿದಂತೆ ಕಾನೂನು ಬಾಹಿರ ಚಟು ವಟಿಕೆಗಳಲ್ಲಿ ತೊಡಗಿರುವ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಬಾಡಿಗೆಗೆ ನೀಡುವ ವಿದೇಶಿ ಪ್ರಜೆಗಳ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡಿದರೇ, ಅವರ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸರಿಗೆ ಸಹಾಯವಾಗುತ್ತದೆ.
ಇಬ್ಬರು ವಿದೇಶಿ ಪ್ರಜೆಗಳು ಸೆರೆ: ಹೆಬ್ಬಾಳ ಪೊಲೀಸ್ ಠಾಣಾ ಸರಹದ್ದಿನ ಆನಂದ್‌ನಗರದ ಮನೆಯೊಂದರಲ್ಲಿ ವೀಸಾ ಅವಧಿ ಮುಗಿದಿದ್ದರೂ ಸಹ ಅಕ್ರಮವಾಗಿ ವಾಸವಾಗಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಪ್ರಜೆಗಳನ್ನು ಭಾರತಿಯ ಪ್ರಜೆಯೊಬ್ಬ ಬ್ಯುಸೆನೆಸ್ ವೀಸಾದ ಅಡಿಯಲ್ಲಿ ಭಾರತ ದೇಶಕ್ಕೆ ಕರೆಯಿಸಿಕೊಂಡಿರುವುದು ತನಿಖೆಯಿಂದ ಗೊತ್ತಾಗಿದೆ.