ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದ್ಯ ಸೇವಿಸಲು ಬಾರ್‌ಗೆ ಬಂದಿದ್ದ ರೌಡಿ ಶೀಟರ್‌ನನ್ನು ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದೆ.
ಯಲಹಂಕದ ಕೊಡಗಿ ತಿರುಮಲಪುರ ನಿವಾಸಿ ಜಯರಾಮ್ (42) ಹತ್ಯೆಯಾದ ರೌಡಿ ಶೀಟರ್. ಮಂಗಳವಾರ ರಾತ್ರಿ ಹೆಸರಘಟ್ಟ ರಸ್ತೆಯ ತಿರುಮಲಪುರ ವಿಲೇಜ್‌ನ ಸಾಯಿ ಬಾರ್‌ನಲ್ಲಿ ಈ ಘಟನೆ ನಡೆದಿದೆ. ಹತ್ಯೆ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಹತ್ಯೆಯಾದ ಜಯರಾಮ್ ಯಲಹಂಕ ಉಪನಗರ ಪೊಲೀಸ್ ಠಾಣೆಯ ರೌಡಿ ಶೀಟರ್, ಆತನ ವಿರುದ್ಧ ಕೊಲೆ, ದರೋಡೆ, ಹಲ್ಲೆ ಸೇರಿದಂತೆ ನಾನಾ ಅಪರಾಧ ಪ್ರಕರಣಗಳು ದಾಖಲಾಗಿವೆ. ಪ್ರಸಕ್ತ ಯಲಹಂಕದ ಕೊಡಗಿ ತಿರುಮಲಪುರದಲ್ಲಿ ಪತ್ನಿ ಮತ್ತು ಮಕ್ಕಳ ಜತೆ ನೆಲೆಸಿದ್ದ. ಕೋಳಿ ಅಂಗಡಿ ನಡೆಸುತ್ತಿದ್ದ ಎನ್ನಲಾಗಿದೆ.
ಮದ್ಯ ಸೇವಿಸಲು ಹೆಸರಘಟ್ಟ ರಸ್ತೆಯ ತಿರುಮಲಪುರ ವಿಲೇಜ್‌ನ ಸಾಯಿ ಬಾರ್‌ಗೆ ಬಂದಿದ್ದಾಗ ನಾಲ್ಕೈದು ಮಂದಿ ಬಂದು ಏಕಾಏಕಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ದ್ವೇಷದ ಹಿನ್ನೆಲೆಯಲ್ಲಿ ಜಯರಾಮ್‌ನನ್ನು ಹತ್ಯೆ ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಿರುವ ಸೋಲದೇವನಹಳ್ಳಿ ಠಾಣೆ ಪೊಲೀಸರು, ದುಷ್ಕರ್ಮಿಗಳ ಪತ್ತೆಗೆ ಕಾರ್ಯ ಪ್ರವೃತ್ತರಾಗಿದ್ದಾರೆ.