Menu

ಕೆಪಿಎಸ್‌ಸಿಯಲ್ಲಿ ರೇಟ್‌ ಕಾರ್ಡ್‌ ಫಿಕ್ಸ್‌ ಆಗಿದೆ: ಆರ್‌.ಅಶೋಕ್‌

ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಪ್ರತಿಯೊಂದಕ್ಕೂ ರೇಟ್‌ ಫಿಕ್ಸ್‌ ಆಗಿದೆ. ಪೂರ್ವಭಾವಿ ಪರೀಕ್ಷೆಗೆ 60 ಲಕ್ಷ ರೂ., ಮುಖ್ಯ ಪರೀಕ್ಷೆಗೆ 1 ಕೋಟಿ ರೂ. ನಿಗದಿ ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಕೆಪಿಎಸ್‌ಸಿ ಹಗರಣದ ಕುರಿತು ಮಾತನಾಡಿ,  ಕೆಪಿಎಸ್‌ಸಿಯಲ್ಲಿ 14 ಸದಸ್ಯರಿದ್ದು, ಒಬ್ಬರಿಗೆ ಎರಡೂ ವರೆ ಲಕ್ಷ ವೇತನವಿದೆ. ಉಳಿದ ಸೌಲಭ್ಯಗಳು ಸೇರಿ 4 ಲಕ್ಷ ರೂ. ಆಗುತ್ತದೆ. ಕರ್ನಾಟಕದಲ್ಲಿ ಆರೂವರೆ ಕೋಟಿ ಜನರಿದ್ದಾರೆ. 20 ಕೋಟಿ ಜನರಿರುವ ಉತ್ತರ ಪ್ರದೇಶದ ಆಯೋಗದಲ್ಲಿ 8 ಸದಸ್ಯರಿದ್ದಾರೆ. ಇದರಲ್ಲೂ ರಾಜ್ಯದಲ್ಲಿ ಹಗಲು ದರೋಡೆ ನಡೆಯುತ್ತಿದೆ. ಪೂರ್ವಭಾವಿ ಪರೀಕ್ಷೆಗೆ 60 ಲಕ್ಷ ರೂ. ಮುಖ್ಯ ಪರೀಕ್ಷೆಗೆ 1 ಕೋಟಿ ರೂ. ಹಾಗೂ ಸಂದರ್ಶನದ ಮೂಲಕ 40 ಲಕ್ಷ ರೂ. ನಿಗದಿ ಮಾಡಲಾಗಿದೆ. ಈ ರೀತಿ ರೇಟ್‌ ಕಾರ್ಟ್‌ ಫಿಕ್ಸ್‌ ಮಾಡಲಾಗಿದೆ. ಎಸಿಗೆ 2 ಕೋಟಿ ರೂ., ಡಿವೈಎಸ್‌ಪಿಗೆ 2 ಕೋಟಿ ರೂ., ವಾಣಿಜ್ಯ ತೆರಿಗೆ 1.50 ಕೋಟಿ ರೂ., ಪಂಚಾಯತ್‌ ಅಧಿಕಾರಿಗೆ ಒಂದೂ ವರೆ ಕೋಟಿ ರೂ. ನಿಗದಿ ಮಾಡಲಾಗಿದೆ ಎಂದರು.

ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ 2-1-2025 ರಲ್ಲಿ ಪೊಲೀಸರೇ ದೂರು ದಾಖಲಿಸಿದ್ದಾರೆ. ಗಾಂಧಿನಗರದ ಸಜ್ಜನ್‌ ಲಾಡ್ಜ್‌ನಲ್ಲಿ ಒಬ್ಬ ವ್ಯಕ್ತಿ ಕೊಠಡಿ ಮಾಡಿಕೊಂಡು, ಸ್ಪರ್ಧಾತ್ಮಕ ಪರೀಕ್ಷೆ ಪಾಸು ಮಾಡಲು ಪಿತೂರಿ ಮಾಡಿ ಹಣ ಸಂಪಾ ದಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದೇ ರೀತಿ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ. ಇಲ್ಲಿ ಕೂಡ ಮಧ್ಯವರ್ತಿ ಮೂಲಕ ಪರೀಕ್ಷೆಯಲ್ಲಿ ಪಾಸು ಮಾಡಿಸಲು ಹಣ ಸಂಪಾದಿಸುತ್ತಿದ್ದಾನೆ ಎಂದು ಉಲ್ಲೇಖಿಸಲಾಗಿದೆ. ಆ ವ್ಯಕ್ತಿಗೆ ಅಧಿಕಾರಿಗಳ ಪರಿಚಯವಿದ್ದು, ಹುದ್ದೆ ಕೊಡಿಸುವುದಾಗಿ ಹೇಳಿ ನಂಬಿಸುತ್ತಿದ್ದ ಎಂದು ದೂರಿನಲ್ಲಿ ಬರೆಯಲಾಗಿದೆ ಎಂದರು.

ಓಎಂಆರ್‌ನಲ್ಲಿ ಅಕ್ರಮ: ಓಎಂಆರ್‌ ಶೀಟ್‌ನಲ್ಲಿ 16 ಅಥವಾ 10 ಪ್ರಶ್ನೆಗಳಿಗೆ ಮಾತ್ರ ಟಿಕ್‌ ಮಾಡು ಎಂದು ಮಧ್ಯವರ್ತಿ ಹೇಳುತ್ತಾನೆ. ಅದರಂತೆಯೇ ಅಭ್ಯರ್ಥಿ ಮಾಡುತ್ತಾನೆ. ಓಎಂಆರ್‌ ಶೀಟ್‌ ಹೋಗುವ ಎರಡು ಕೊಠಡಿಗಳಲ್ಲಿ ಸಿಸಿಟಿವಿ ಇರುವುದಿಲ್ಲ. ಅಲ್ಲಿಯೇ ಉಳಿದ ಪ್ರಶ್ನೆಗಳಿಗೆ ಉತ್ತರವನ್ನು ಟಿಕ್‌ ಮಾಡಲಾಗುತ್ತದೆ. ಇದರಲ್ಲಿ ಲೋಕಸೇವಾ ಆಯೋಗದ ಅಧಿಕಾರಿಗಳು ಕೂಡ ಶಾಮೀಲಾಗಿರುತ್ತಾರೆ ಎಂದರು.

ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಈ ಕುರಿತು ಪರೀಕ್ಷೆ ನಡೆಸಲಾಗಿದೆ. ಅಭ್ಯರ್ಥಿ ಮತ್ತು ಮಧ್ಯವರ್ತಿ ಬಳಸಿರುವ ಪೆನ್‌ಗಳಲ್ಲಿ ವ್ಯತ್ಯಾಸ ಇರುವುದರ ಬಗ್ಗೆ ಪತ್ತೆ ಮಾಡಲಾಗಿದೆ. ಲೋಕಸೇವಾ ಆಯೋಗದ ಅಧಿಕಾರಿ-ನೌಕರರ ಸಹಾ ಯವಿಲ್ಲದೆ ಇದನ್ನು ಮಾಡಲು ಸಾಧ್ಯವಿಲ್ಲ ಎಂದು ವಿಧಿ ವಿಜ್ಞಾನ ವರದಿಯಲ್ಲಿ ತಿಳಿಸಲಾಗಿದೆ. ಇದನ್ನು ಸರ್ಕಾರವೇ ಒಪ್ಪಿಕೊಂಡಿದೆ ಎಂದರು.

ಕನ್ನಡಿಗರಿಗೆ ಅನ್ಯಾಯ: 384 ಗ್ರೂಪ್‌ ಎ ಮತ್ತು ಬಿ ಹುದ್ದೆಗಳಿಗೆ ನಡೆದ ಪೂರ್ವಭಾವಿ ಪರೀಕ್ಷೆಯಲ್ಲಿ ಇಂಗ್ಲಿಷ್‌-ಕನ್ನಡ ಭಾಷಾಂತರದಲ್ಲಿ 59 ಪ್ರಶ್ನೆಗಳಲ್ಲಿ ತಪ್ಪುಗಳಾಗಿವೆ. ಲೋಕಸೇವಾ ಆಯೋಗದ ಕಳ್ಳರು ಮೊದಲಿಗೆ ಇಂಗ್ಲಿಷ್‌ನಲ್ಲಿ ಬರೆದು, ನಂತರ ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. ಮೊದಲು ಕನ್ನಡದಲ್ಲೇ ಪ್ರಶ್ನೆ ತಯಾರಿಸಬೇಕೆಂಬ ನಿಯಮವೇ ಇದೆ. ಇದಾದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದರು. ಬಳಿಕ ಐಎಎಸ್‌ ಗಂಗಾಧರ್‌ ಈ ಕುರಿತು ಟ್ವೀಟ್‌ ಮಾಡಿದ್ದು, ಇದನ್ನು ಎಂಜಾಯ್‌ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇದು ಕನ್ನಡಿಗರಿಗೆ ಮಾಡಿದ ಅಪಮಾನ. ಕನ್ನಡಕ್ಕೆ ದ್ರೋಹ ಮಾಡಿದ ಈ ಅಧಿಕಾರಿಯ ನಾಲಿಗೆ ಸೀಳಿ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ ದರು.

ಈ ಪರೀಕ್ಷೆ ನಡೆಸಲು 15 ಕೋಟಿ ರೂ. ನೀಡಲಾಗಿದೆ. ಮರು ಪರೀಕ್ಷೆಗೆ ಮತ್ತೆ ಅಷ್ಟೇ ಹಣ ನೀಡಲಾಗಿದೆ. ಮರು ಪರೀಕ್ಷೆ ಯಲ್ಲಿ ಮತ್ತೆ 79 ತಪ್ಪುಗಳಾಗಿವೆ. ಈ ಪ್ರಶ್ನೆಪತ್ರಿಕೆಗಳಲ್ಲಿ ಕನ್ನಡವನ್ನು ಎರಡನೇ ದರ್ಜೆಯಾಗಿ ನೋಡಲಾಗಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದರು. ಅವರು ವ್ಯಾಕರಣದ ಬಗ್ಗೆ ಮಾತನಾಡುತ್ತಾರೆ. ಸುಮಾರು 2 ಲಕ್ಷ ಯುವಜನರು ನಿರುದ್ಯೋಗಿಗಳಾಗಿದ್ದು, ಪರೀಕ್ಷೆಗಾಗಿ ಓದುತ್ತಿದ್ದಾರೆ. ಅವರ ಭಾವನೆಗಳನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದರು.

ಪರೀಕ್ಷೆಯಲ್ಲಿ 30 ಕೋಟಿ ರೂ. ಹಣ ಹಾಳು ಮಾಡಿದ ಅಧಿಕಾರಿಯನ್ನು ಅಮಾನತು ಮಾಡಬೇಕು. ಮರು ಪರೀಕ್ಷೆ ನಡೆಸಬೇಕು. ಅಭ್ಯರ್ಥಿಗಳ ವಯೋಮಿತಿಗೆ ವಿನಾಯಿತಿ ನೀಡಬೇಕು. ಅಕ್ರಮದ ವಿರುದ್ಧ ತನಿಖೆ ಮಾಡಬೇಕು. ಕನ್ನಡ ಅಪಮಾನ ಮಾಡಿದ ಅಧಿಕಾರಿಯ ವಿರುದ್ಧ ಕ್ರಮ ವಹಿಸಬೇಕು ಎಂದು ಆರ್‌.ಅಶೋಕ ಆಗ್ರಹಿಸಿದರು.

Related Posts

Leave a Reply

Your email address will not be published. Required fields are marked *