Menu

ವಿವಿ ಮುಚ್ಚುವ ಯಾವುದೇ ಪ್ರಸ್ತಾವನೆ ಇಲ್ಲ: ಡಿಕೆ ಶಿವಕುಮಾರ್

ಬೆಂಗಳೂರು: ನೂತನ ವಿಶ್ವವಿದ್ಯಾಲಯಕ್ಕಾಗಿ ಹೋರಾಟ ಮಾಡುತ್ತಿರುವವರು, ಆ ವಿವಿಗಾಗಿ ಎಷ್ಟು ಹಣ ಕೊಟ್ಟಿದ್ದಾರೆ ಎಂದು ಹೇಳಬೇಕು. ಈ ವಿವಿಗೆ ಕೇಂದ್ರ ಸರ್ಕಾರದಿಂದ ನೂರಾರು ಕೋಟಿ ಅನುದಾನ ಕೊಡಿಸಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.

ಬೆಂಗಳೂರು ವಿವಿ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು.

ನೂತನ 9 ವಿವಿಗಳ ಮುಚ್ಚುವ ಬಗ್ಗೆ ಹಲವೆಡೆ ಪ್ರತಿಭಟನೆ ನಡೆಯುತ್ತಿದೆ ಎಂದು ಕೇಳಿದಾಗ, “ಯಾವುದೇ ವಿವಿ ಮುಚ್ಚುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ. ಈ ವಿವಿಗಳಿಗಾಗಿ ಬಿಜೆಪಿ ಸರ್ಕಾರ ಕೇವಲ 2 ಕೋಟಿ ಹಣವಿಟ್ಟಿತ್ತು. 2 ಕೋಟಿ ಹಣದಲ್ಲಿ ವಿವಿ ಸ್ಥಾಪನೆ ಮಾಡಲು ಆಗುವುದಿಲ್ಲ. ಇದಕ್ಕೆ ನೂರಾರು ಎಕರೆ ಜಾಗ ಬೇಕು. ಬೆಂಗಳೂರು ವಿವಿ ಮಾಡುವಾಗ ಹೇಗೆ 1,200 ಎಕರೆ ಜಮೀನು ಇಟ್ಟು ಸ್ಥಾಪಿಸಿದ್ದರೋ, ಅದೇ ರೀತಿ ಇದರಲ್ಲಿ ಅರ್ಧದಷ್ಟು ಜಾಗವನ್ನಾದರೂ ಮೀಸಲಿಡಬೇಕು” ಎಂದು ತಿಳಿಸಿದರು.

“ಕೇವಲ ಹೆಸರಿಗಾಗಿ ವಿವಿ ಮಾಡಲು ಆಗುವುದಿಲ್ಲ. 20-30 ಕಾಲೇಜುಗಳಿಗೆ ಒಂದು ವಿವಿ ಮಾಡಲು ಸಾಧ್ಯವಿಲ್ಲ. ವಿಸಿ ಹುದ್ದೆಗಾಗಿ ವಿವಿ ಮಾಡಲು ಆಗುವುದಿಲ್ಲ. ಈ ಹಿಂದೆ ಈ ಪ್ರಯತ್ನ ಮಾಡಲಾಗಿತ್ತು. ಮಂಡ್ಯ, ಕೊಡಗು ಭಾಗದ ಅನೇಕ ವಿದ್ಯಾರ್ಥಿಗಳು ನಮಗೆ ಮೈಸೂರು ವಿವಿಯ ಹೆಸರಿನಲ್ಲೇ ಓದಬೇಕು ಡಾ.ರಾಧಾಕೃಷ್ಣ, ಕುವೆಂಪು ಅವರಿದ್ದ ಮೈಸೂರು ವಿವಿಯಲ್ಲಿ ಓದಿದರೆ ನಮಗೂ ಬಹಳ ಗೌರವವಿರುತ್ತದೆ ಎಂದು ಮನವಿ ಮಾಡಿದ್ದಾರೆ. ಇನ್ನು ಸಿಬ್ಬಂದಿಗಳು ತಮ್ಮ ಹಿರಿತನ ವ್ಯರ್ಥವಾಗುತ್ತದೆ ಎಂದು ನೂತನ ವಿವಿಗೆ ಆಗಮಿಸಲು ಮುಂದಾಗುತ್ತಿಲ್ಲ” ಎಂದು ಹೇಳಿದರು.

“ಈ ಹಿನ್ನೆಲೆಯಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿ ವರದಿ ನೀಡಿತ್ತು. ಇದಕ್ಕಾಗಿ ಸಚಿವ ಸಂಪುಟ ಉಪ ಸಮಿತಿ ಮಾಡಲಾಗಿತ್ತು. ಈ ಸಮಿತಿಯಲ್ಲಿ ನಾನು ಇದ್ದು ಚರ್ಚೆ ಮಾಡಿದ್ದೇನೆ. ಕೆಲವರು ರಾಜಕೀಯವಾಗಿ ಹೋರಾಟ ಮಾಡಬಹುದು. ನಮಗೆ ಮಕ್ಕಳ ವಿದ್ಯಾಭ್ಯಾಸ ಮುಖ್ಯ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಬಗ್ಗೆ ಚರ್ಚೆ ಮಾಡುತ್ತೇವೆ. ಈ ವಿಚಾರವಾಗಿ ಇನ್ನು ಯಾವುದೇ ಅಂತಿಮ ತೀರ್ಮಾನ ಮಾಡಿಲ್ಲ. ಪ್ರತಿಭಟನೆ ಮಾಡುವವರು ಮಾಡುತ್ತಿರುತ್ತಾರೆ. ವಿವಿ ಮಾಡಿದ್ದೇವೆ ಎಂದು ಹೇಳುತ್ತಿರುವವರು ಆ ವಿವಿಗೆ ಎಷ್ಟು ಹಣ ನೀಡಿದ್ದರು ಎಂದು ಹೇಳಬೇಕಲ್ಲವೇ? 2 ಕೋಟಿಯಲ್ಲಿ ವಿವಿ ಮಾಡಲು ಸಾಧ್ಯವೇ? ಆ 2 ಕೋಟಿಯೂ ಬಿಡುಗಡೆಯಾಗಿಲ್ಲ. ಪ್ರತಿಭಟನೆ ಮಾಡುತ್ತಿರುವವರು ಕೇಂದ್ರ ಸರ್ಕಾರದಿಂದ ನೂರಾರು ಕೋಟಿ ಅನುದಾನ ತಂದು ಕೊಟ್ಟರೆ ಅಗತ್ಯವಿರುವ ಜಾಗ ಖರೀದಿ ಮಾಡಿ ವಿವಿ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಬಹುದು” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *